ADVERTISEMENT

ನಟ ಅನಿರುದ್ಧ ಬಹಿಷ್ಕಾರ ವಿಚಾರ: ಡಿ.10ಕ್ಕೆ ಸಂಧಾನ ಸಭೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 13:14 IST
Last Updated 9 ಡಿಸೆಂಬರ್ 2022, 13:14 IST
ಅನಿರುದ್ಧ
ಅನಿರುದ್ಧ   

ಬೆಂಗಳೂರು: ನಟ ಅನಿರುದ್ಧ ಅವರನ್ನು ಕಿರುತೆರೆಯಿಂದ ತಾತ್ಕಾಲಿಕವಾಗಿ ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘವು ಮಾಡಿರುವ ಆಗ್ರಹಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶನಿವಾರ(ಡಿ.10) ಸಂಧಾನ ಸಭೆ ಕರೆದಿದೆ.

‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬಿದ್ದ ಬಳಿಕ ಅನಿರುದ್ಧ ಅವರು ಇತ್ತೀಚೆಗಷ್ಟೇ ಎಸ್‌. ನಾರಾಯಣ್‌ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ಕ್ಕೆ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಮತ್ತೊಮ್ಮೆ ಬಹಿಷ್ಕಾರದ ಬಿಸಿಯನ್ನು ಸಂಘವು ಮುಟ್ಟಿಸಿತ್ತು. ಅನಿರುದ್ಧ ಅವರನ್ನು ಬಹಿಷ್ಕರಿಸಲು ಆಗ್ರಹಿಸಿ ಕಿರುತೆರೆ ನಿರ್ಮಾಪಕರ ಸಂಘವು ನಟ, ನಿರ್ಮಾಪಕ ಎಸ್‌. ನಾರಾಯಣ್‌ ಅವರಿಗೆ ಮನವಿ ನೀಡಿದೆ. ಈ ನಡೆಯನ್ನು ಪ್ರಶ್ನಿಸಿ ಅನಿರುದ್ಧ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಎಲ್ಲ ಘಟನೆಗಳ ಬೆನ್ನಲ್ಲೇ ಭಾ.ಮ.ಹರೀಶ್‌ ಅವರು ಶುಕ್ರವಾರ ಸಂಜೆ ನಿರ್ಮಾಪಕರ ಸಂಘದ ಸಭೆ ಕರೆದಿದ್ದರು. ಸಭೆಗೆ ಅನಿರುದ್ಧ ಅವರೂ ಆಗಮಿಸಿದ್ದರು. ಆದರೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಗೈರಾಗಿದ್ದ ಕಾರಣ ಶನಿವಾರ ಸಭೆ ನಡೆಸಲು ತೀರ್ಮಾನಿಸಲಾಯಿತು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅನಿರುದ್ಧ ಅವರು, ‘ಜೊತೆ ಜೊತೆಯಲಿ ಧಾರಾವಾಹಿ ವಿವಾದ ಆದಾಗ ನನ್ನನ್ನು ಕರೆಸಿ ಮಾತನಾಡಿದ್ದರೆ ಎಲ್ಲವೂ ಬಗೆಹರಿಯುತ್ತಿತ್ತು. ಆ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್‌ ಅವರಿಂದ ನಾನು ಹಲವು ಬಾರಿ ಸ್ಪಷ್ಟನೆ ಕೇಳಿದ್ದೆ. ಆದರೆ ಸೂಕ್ತ ಉತ್ತರ ದೊರೆಯಲಿಲ್ಲ. ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಅವರು ಮಾಡಿದ್ದರು. ಹೌದು, ಚಿತ್ರೀಕರಣದ ಸ್ಥಳದಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆ ಇರಲಿಲ್ಲ. ಮಹಿಳಾ ಕಲಾವಿದರಿಗೂ ಇದರಿಂದ ಸಮಸ್ಯೆ ಆಗಿತ್ತು. ಹೀಗಾಗಿ ಕ್ಯಾರವಾನ್‌ ಕೇಳಿದ್ದೆ. ನಾನು ಹಠ ಮಾಡಿದ ಮೇಲೆ ಕ್ಯಾರವಾನ್‌ ತರಿಸಿದರು. ದುರಂತ ಏನೆಂದರೆ, ನಾನು ಹೊಸ ಧಾರಾವಾಹಿ ಮಾಡುತ್ತಿದ್ದೇನೆ ಎಂದಾಗ ಇವರನ್ನು ಹಾಕಿಕೊಳ್ಳಬೇಡಿ ಎಂದು ನಿರ್ಮಾಪಕರಿಗೆ, ಉದಯ ವಾಹಿನಿಗೆ ಹಲವರು ಹೇಳಿದ್ದಾರೆ. ಇದು ಯಾವ ಮನೋಭಾವ? ‘ಯಾರು ಏನೇ ಹೇಳಿದರೂ ಹೊಸ ಧಾರಾವಾಹಿ ಮಾಡುತ್ತಿದ್ದೇವೆ. ನಮಗೆ ನೀವು ಬೇಕು’ ಎಂದು ಎಸ್‌.ನಾರಾಯಣ್‌ ಅವರು ನನಗೆ ಭರವಸೆ ನೀಡಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.