
ನವದೆಹಲಿ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಾಲಿವುಡ್‌ನಲ್ಲಿನ ಕೋಮುವಾದದ ಕುರಿತು ತಾವು ನೀಡಿದ್ದ ಹೇಳಿಕೆಗಳ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಯಾರಿಗಾದರೂ ನೋವುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದಿರುವ ಅವರು, ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂಬಂಧ ಇಂದು (ಭಾನುವಾರ) ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಸ್ಟಷ್ಟನೆ ನೀಡಿದ್ದಾರೆ.
ಭಾರತದ ಸಂಸ್ಕೃತಿಯನ್ನು ಆಚರಿಸಲು ಮತ್ತು ಗೌರವಿಸಲು ಸಂಗೀತ ಒಂದು ಮಾರ್ಗವಾಗಿದೆ ಎಂದು ರೆಹಮಾನ್ ಹೇಳಿದ್ದಾರೆ.
'ಭಾರತ ದೇಶ ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ ಎಂದಿರುವ ರೆಹಮಾನ್ ಹೇಳಿಕೆಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ನಾನು ಯಾರಿಗೂ ನೋವುಂಟು ಮಾಡಲು ಬಯಸಿಲ್ಲ. ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ನೀಡುವುದಾಗಿದೆ. ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ' ಎಂದು ಭಾವಿಸುತ್ತೇನೆ ಎಂದಿದ್ದಾರೆ.
'ನಾನು ಭಾರತೀಯನಾಗಿರುವುದಕ್ಕೆ ಧನ್ಯನಾಗಿದ್ದೇನೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಮತಿಸುವ ಮತ್ತು ಬಹುಸಂಸ್ಕೃತಿಯನ್ನು ಆಚರಿಸಲು ಪ್ರತಿಯೊಬ್ಬರಿಗೂ ನನ್ನ ದೇಶ ಅವಕಾಶ ನೀಡುತ್ತದೆ' ಎಂದು ರೆಹಮಾನ್ ಹೇಳಿದ್ದಾರೆ.
ಬಿಬಿಸಿ ಏಷಿಯನ್ ನೆಟ್ವರ್ಕ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೋಮುವಾದದ ಅನುಭವಗಳು ನನಗೆ ಪರೋಕ್ಷವಾಗಿ ಆಗಿವೆ. ಯಾವುದೇ ಅವಕಾಶಗಳನ್ನು ನಾನು ಹುಡುಕಿಕೊಂಡು ಹೋಗುವುದಿಲ್ಲ. ನನಗೆ ಬರುವ ಕೆಲಸಗಳನ್ನು ಶ್ರದ್ಧೆ ಇಟ್ಟು ಮಾಡುತ್ತೇನೆ. ಕೆಲಸ ಹುಡುಕಿ ಹೊರಟರೆ ಅದು ನಮಗೆ ಕೆಟ್ಟದಾಗಬಹುದು ಎಂದು ರೆಹಮಾನ್ ಹೇಳಿದ್ದರು.
'ಬಹುಶಃ ಇಂತಹುದೆಲ್ಲ ನನ್ನ ಗಮನಕ್ಕೆ ಬರದೇ ಇರಬಹುದು. ದೇವರು ಇದನ್ನೆಲ್ಲಾ ಮರೆಮಾಡಿರಬಹುದು. ನಾನು ಅಂತಹ ಯಾವುದನ್ನೂ ಅನುಭವಿಸಲಿಲ್ಲ, ಆದರೆ, ಕಳೆದ ಎಂಟು ವರ್ಷಗಳಲ್ಲಿ, ಆಗಿರುವ ಬದಲಾವಣೆಗಳು ಬಹುಶಃ, ಕೋಮು ಧೋರಣೆಯಿಂದಲೇ ಸಂಭವಿಸಿರಬಹುದು’ಎಂದು ಅವರು ವಿವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.