ADVERTISEMENT

ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಅ.29ಕ್ಕೆ ‘ಭೀಮಸೇನ ನಳಮಹಾರಾಜ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 7:42 IST
Last Updated 9 ಅಕ್ಟೋಬರ್ 2020, 7:42 IST
ಅರವಿಂದ ಅಯ್ಯರ್‌
ಅರವಿಂದ ಅಯ್ಯರ್‌   

ವರ್ಷದ ಹಿಂದೆಯೇ ಪೂರ್ಣಗೊಂಡು ತೆರೆಕಾಣುವ ಹಂತದಲ್ಲಿದ್ದ ‘ಭೀಮಸೇನ ನಳಮಹಾರಾಜ’ ಚಿತ್ರಕ್ಕೆ ಈಗ ಮುಕ್ತಿ ಸಿಗುತ್ತಿದೆ. ಅಮೆಜಾನ್‌ ಪ್ರೈಮ್‌ ವಿಡಿಯೊ ಒಟಿಟಿ ವೇದಿಕೆಯಲ್ಲಿ ಈ ಚಿತ್ರವು ಅ.29ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.

ರಕ್ಷಿತ್‌ ಶೆಟ್ಟಿ ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’ನಿಗೂ ಮೊದಲೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರವನ್ನು ಇನ್ನಷ್ಟು ಸೃಜನಾತ್ಮಕವಾಗಿ ಸಿದ್ಧಪಡಿಸುವ ಕೆಲಸಕ್ಕೆ ಚಿತ್ರತಂಡ ಕೈಹಾಕಿದ್ದರಿಂದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇನ್ನೇನು ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾಗಲೇ ಕೋವಿಡ್‌ 19 ಸೋಂಕು ಆವರಿಸಿತು. ಹೀಗಾಗಿ ಬಿಡುಗಡೆ ಮತ್ತೆ ಮುಂದೂಡುವುದು ಅನಿವಾರ್ಯವಾಗಿತ್ತು ಎನ್ನುವುದು ಚಿತ್ರತಂಡದ ಸಮಜಾಯಿಷಿ.

ಅ.15ರಿಂದ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿದ್ದರೂ ಈ ಚಿತ್ರವನ್ನು ಒಟಿಟಿಯಲ್ಲಿ ತೆರೆಕಾಣಿಸುವ ನಿರ್ಧಾರ ತೆಗೆದುಕೊಂಡಿರುವ ಕಾರಣ ಬಿಚ್ಚಿಟ್ಟ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ‘ಚಿತ್ರಮಂದಿರಗಳ ಬಾಗಿಲು ತೆರೆದರೂ ಬರುವ ಜನವರಿಯವರೆಗೂ ಶೇ 100ರಷ್ಟು ಆಸನಗಳ ಭರ್ತಿಗೆ ಚಿತ್ರಮಂದಿರದಲ್ಲಿ ಅವಕಾಶವಿಲ್ಲ. ನಾವು ಹೂಡಿರುವ ಬಂಡವಾಳ ಮತ್ತು ಅದರ ಬಡ್ಡಿಯ ಮೊತ್ತವನ್ನು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಮೂಲಕ ವಾಪಸ್‌ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡೆವು. ಅಮೆಜಾನ್‌ ಪ್ರೈಮ್‌ ವಿಡಿಯೊಕ್ಕೆ ನಮ್ ಚಿತ್ರ ಮಾರಾಟ ಮಾಡಿರುವುದರಿಂದ ನಾವು ಹೂಡಿದ ಬಂಡವಾಳ ಮತ್ತು ಲಾಭವು ಸಿಕ್ಕಿದೆ’ ಎಂದರು.

ADVERTISEMENT

ಕಾರ್ತಿಕ್‌ ಸರಗೂರ್‌ ಆ್ಯಕ್ಷನ್‌ ಕಟ್‌ ಹೇಳಿರುವ ಈ ಚಿತ್ರದ ನಾಯಕ ‘ಭೀಮಸೇನ ನಳಮಹಾರಾಜ’ನಿಗೆ ಅಡುಗೆ ಮಾಡುವ ಖಯಾಲಿ. ಬಗೆಬಗೆಯ ಭಕ್ಷ್ಯ ಸಿದ್ಧಪಡಿಸುವ ಈತ ಬದುಕಿನ ನಾನಾ ಸಂಗತಿಗಳನ್ನು ಅಡುಗೆ ಮಾಡುತ್ತಲೇ ವೀಕ್ಷಕನಿಗೆ ಉಣಬಡಿಸುತ್ತಾನೆ. ಒಂದು ಅಡುಗೆಯಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಕಹಿ ಮತ್ತು ಒಗರಿನ ಸಮ್ಮಿಶ್ರಣವಿರುವಂತೆಯೇ ಚಿತ್ರದ ಕಥಾಹಂದರದಲ್ಲಿ ಬದುಕಿನ ಎಲ್ಲ ಸಂಗತಿಗಳು ಮಿಳಿತಗೊಂಡಿರಲಿವೆಯಂತೆ. ಇದರಲ್ಲಿನ ಕಥೆ ಪ್ರತಿಯೊಬ್ಬರ ಬದುಕಿಗೆ ಕನೆಕ್ಟ್‌ ಆಗುತ್ತದೆ. ಇದು ಚಿತ್ರದ ಪ್ಲಸ್‌ ಪಾಯಿಂಟ್‌ ಕೂಡ ಹೌದೆನ್ನುವುದು ಅವರ ಅನಿಸಿಕೆ.

ನಾಯಕನಾಗಿ ಅರವಿಂದ್‌ ಅಯ್ಯರ್‌, ನಾಯಕಿಯರಾಗಿ ಆರೋಹಿ ನಾರಾಯಣ್‌ ಮತ್ತು ಪ್ರಿಯಾಂಕ ತಿಮ್ಮೇಶ್‌, ಪ್ರಮುಖ ಪಾತ್ರಗಳಲ್ಲಿ ಅಚ್ಯುತ್‌ ಕುಮಾರ್‌, ವಿಜಯ್‌ ಚೆಂಡೂರ್‌ ನಟಿಸಿದ್ದಾರೆ.ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಚರಣ್‌ ರಾಜ್‌ ಸಂಗೀತ ಸಂಯೋಜಿಸಿದ್ದಾರೆ.ಈ ಚಿತ್ರಕ್ಕೆ ಪುಷ್ಕರ್‌ ಮಲ್ಲಿಕಾರ್ಜುನಯ್ಯ, ರಕ್ಷಿತ್‌ ಶೆಟ್ಟಿ ಹಾಗೂ ಹೇಮಂತ್‌ ರಾವ್‌ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.