ADVERTISEMENT

ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ ‘ಅವತಾರ್‌’ ಚಿತ್ರದ ಟಿಕೆಟ್‌ ದರ ₹2400!

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 23:30 IST
Last Updated 10 ಡಿಸೆಂಬರ್ 2025, 23:30 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದ ‘ಅವತಾರ್‌: ಫೈರ್‌ ಆ್ಯಂಡ್‌ ಆ್ಯಶ್‌’ ಡಿ.19ಕ್ಕೆ ತೆರೆ ಕಾಣುತ್ತಿದೆ. ಚಿತ್ರಕ್ಕೆ ಮುಂಗಡ ಬುಕ್ಕಿಂಗ್‌ ಈಗಾಗಲೇ ಪ್ರಾರಂಭಗೊಂಡಿದ್ದು, ದೇಶದ ಹಲವು ನಗರಗಳಲ್ಲಿ ಟಿಕೆಟ್‌ ದರ ₹1800ವರೆಗೂ ತಲುಪಿದೆ. ದಿಲ್ಲಿಯ ಐಮ್ಯಾಕ್ಸ್‌ ಚಿತ್ರಮಂದಿರಗಳಲ್ಲಿ 3ಡಿ ಶೋ ದರ ₹2400 ತಲುಪಿದ್ದು, ಅಷ್ಟೂ ಟಿಕೆಟ್‌ಗಳು ಮಾರಾಟವಾಗಿವೆ. 

ರಾಜ್ಯದಲ್ಲಿಯೂ ಚಿತ್ರದ ಅಬ್ಬರ ಜೋರಾಗಿದೆ. ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ ಪ್ರಾರಂಭಿಕ ದರವೇ ₹400 ಇದ್ದು, ಸರಾಸರಿ ₹1200 ದರಕ್ಕೆ ಟಿಕೆಟ್‌ಗಳು ಬಿಕರಿಯಾಗುತ್ತಿವೆ. ಬೆಂಗಳೂರಿನ ಐಮ್ಯಾಕ್ಸ್‌ಗಳಲ್ಲಿ ಚಿತ್ರದ 3ಡಿ ಪ್ರದರ್ಶನಗಳು ಈಗಾಗಲೇ ಹೌಸ್‌ಫುಲ್‌ ಆಗಿವೆ. ಮುಂಗಡ ಬುಕ್ಕಿಂಗ್ ಕೆಲವೇ ಚಿತ್ರಮಂದಿರಗಳಲ್ಲಿ ಲಭ್ಯವಿದ್ದರೂ ದುಬಾರಿ ದರದಲ್ಲಿಯೇ ಟಿಕೆಟ್‌ ಖರೀದಿಗೆ ಪ್ರೇಕ್ಷಕರು ಒಲವು ತೋರುತ್ತಿದ್ದಾರೆ. 

ಸುಮಾರು ₹360 ಬಜೆಟ್‌ನಲ್ಲಿ ನಿರ್ಮಾಣಗೊಂಡಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. 2009ರಲ್ಲಿ ತೆರೆಕಂಡಿದ್ದ ‘ಅವತಾರ್’ ವಿಶ್ವದಾದ್ಯಂತ 2.9 ಶತಕೋಟಿ ಡಾಲರ್ ಗಳಿಸಿತ್ತು. ‘ಅವತಾರ್ 2’ ವಿಶ್ವದಾದ್ಯಂತ ಕಲೆ ಹಾಕಿದ್ದು 2.3 ಶತಕೋಟಿ ಡಾಲರ್. 

ADVERTISEMENT

‘ಅವತಾರ್‌’ ಕಥೆಯ ಸರಣಿಯಲ್ಲಿ ಮೂರನೆ ಚಿತ್ರ ಇದಾಗಿದೆ. ಹಿಂದಿನ ಎರಡೂ ಭಾಗಗಳಿಗೂ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಚಿತ್ರದಿಂದ ₹500 ಕೋಟಿಗೂ ಹೆಚ್ಚು ಗಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ. 

ಜಾನ್ ಲ್ಯಾಂಡೌ ನಿರ್ಮಾಣ ಮಾಡಿರುವ ಈ ಸಿನಿಮಾ ವಿಶ್ವದ ಗಮನ ಸೆಳೆದಿದೆ. ಹಾಲಿವುಡ್ ಜನಪ್ರಿಯ ತಾರೆಯರಾದ ಸ್ಯಾಮ್ಯುಯೆಲ್ ಹೆನ್ರಿ ಜಾನ್ ವರ್ತಿಂಗ್ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್‌ಲೆಟ್, ಊನಾ ಚಾಪ್ಲಿನ್ ಸೇರಿದಂತೆ ಸ್ಟಾರ್‌ಗಳ ದೊಡ್ಡ ತಂಡವೇ ಇದೆ.