‘ಅದ್ದೂರಿ’ ಸಿನಿಮಾ ಮುಖಾಂತರ ಚಂದನವನ ಪ್ರವೇಶಿಸಿದ್ದ ಧ್ರುವ ಸರ್ಜಾ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವ ಸಾಮರ್ಥ್ಯವುಳ್ಳ ನಟ. ಮಾಡಿರುವುದು ಐದೇ ಸಿನಿಮಾಗಳಾದರೂ ಅವರ ಅಭಿಮಾನಿಗಳ ಸಂಖ್ಯೆ ಬೃಹದಾಗಿದೆ.
‘ಅದ್ದೂರಿ’ಯಾಗಿ ತೆರೆ ಪ್ರವೇಶಿಸಿ ‘ಬಹದ್ಧೂರ್’ ಆಗಿ ಮಿಂಚಿ ‘ಭರ್ಜರಿ’ಯಾಗಿ ನಟನೆಯ ‘ಪೊಗರು’ ತೋರಿಸಿದ್ದ ಧ್ರುವ ‘ಮಾರ್ಟಿನ್’ನಲ್ಲಿ ಪ್ಯಾನ್ ಇಂಡಿಯಾಗೆ ಹೆಜ್ಜೆ ಇಟ್ಟವರು. ಅಭಿಮಾನಿಗಳನ್ನು ವಿಐಪಿಗಳೆಂದು ಕರೆಯುವ ಇವರು ಹೊಸಬರ ಸಿನಿಮಾಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸದಾ ಬೆನ್ನೆಲುಬಾಗಿ ನಿಂತವರು. ಸಿನಿಮಾ ಮೇಲಿನ ಅವರ ಶ್ರದ್ಧೆ, ಆಸಕ್ತಿ ಆಶ್ಚರ್ಯ ಹುಟ್ಟಿಸುತ್ತದೆ. ಅರ್ಜುನ್ ಸರ್ಜಾ ಅವರನ್ನೇ ದ್ರೋಣನಂತೆ ಕಂಡು ಏಕಲವ್ಯನಂತೆ ನಟನೆಯಲ್ಲಿ ಪಳಗಿದವರು ಧ್ರುವ ಸರ್ಜಾ. ಇತ್ತೀಚೆಗೆ ಚಂದನವನದಲ್ಲಿ ಐವತ್ತು ದಿನಗಳನ್ನು ಪೂರೈಸಿದ ‘ಪಪ್ಪಿ’ ಎಂಬ ಅಪ್ಪಟ ಉತ್ತರ ಕರ್ನಾಟಕ ಭಾಷೆಯ ಸೊಗಡಿನ ಸಿನಿಮಾವನ್ನು ಧ್ರುವ ಪ್ರಸ್ತುತಪಡಿಸಿದ್ದರು. ಇವರ ಈ ಎಲ್ಲಾ ಸಾಧನೆಗಳೇ ‘ವರ್ಷದ ಅತ್ಯುತ್ತಮ ಸಾಧನೆ’ ಪ್ರಶಸ್ತಿಯನ್ನು ಅವರ ಮುಡಿಗೇರಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಧ್ರುವ ಸರ್ಜಾ, ‘ಪ್ರಜಾವಾಣಿಗೆ ಧನ್ಯವಾದ. ನನ್ನ ‘ಅದ್ದೂರಿ’ ಚಿತ್ರಕ್ಕೆ ವಿಮರ್ಶೆ ನೋಡಿಕೊಂಡು ಸಾಕಷ್ಟು ಜನ ಚಿತ್ರಮಂದಿರಕ್ಕೆ ಬಂದಿದ್ದರು. ‘ಪ್ರಜಾವಾಣಿ’ಯಿಂದ ಜೀವನಕಟ್ಟಿಕೊಂಡ ಸಾಕಷ್ಟು ಕಲಾವಿದರಲ್ಲಿ ನಾನೂ ಒಬ್ಬ. ಈ ವೇದಿಕೆಯಲ್ಲಿ ನಾನು ನನ್ನ ಅಣ್ಣ ಚಿರಂಜೀವಿ ಸರ್ಜಾನನ್ನು ನೆನಪಿಸಿಕೊಳ್ಳುತ್ತೇನೆ. ‘ವಿಮರ್ಶೆಗಳನ್ನು ನೋಡು. ಅದರಲ್ಲಿ ನಿನ್ನ ತಪ್ಪುಗಳನ್ನು ಹೇಳುತ್ತಾರೆ. ಅದರಿಂದ ಕಲಿ’ ಎಂದು ಆತ ಹೇಳುತ್ತಿದ್ದ. ನಾನು ಹಿರಿಯರ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ. ಈ ಪ್ರಶಸ್ತಿ ನನ್ನ ಸಿನಿಪಯಣದ ಬಹುಮುಖ್ಯ ಭಾಗ’ ಎಂದರು.
‘ಈ ಕಾರ್ಯಕ್ರಮಕ್ಕೆ ಎರಡನೇ ಬಾರಿ ಬರುತ್ತಿದ್ದೇನೆ. ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಕೆಲಸವನ್ನು ‘ಪ್ರಜಾವಾಣಿ’ ಮಾಡುತ್ತಿದೆ. ಇದೊಂದು ದೊಡ್ಡ ಪ್ರೋತ್ಸಾಹ. ಪ್ರಜಾವಾಣಿ ಪತ್ರಿಕೆಯೇ ವಿಶೇಷ. ನಮ್ಮ ದಿನ ಪ್ರಾರಂಭವಾಗುವುದೇ ‘ಪ್ರಜಾವಾಣಿ’ ಓದುವ ಮೂಲಕ. ಐಎಎಸ್, ಕೆಎಎಸ್ ಮಾಡುವವರು ಪ್ರಜಾವಾಣಿಯ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಲ್ಲಾ ಕಾಲಘಟ್ಟದಲ್ಲೂ ಕಲಾಕಾರ ತಾವು ಬದುಕುತ್ತಿರುವ ಸಮಾಜಕ್ಕೆ ತಮ್ಮ ಮಾಧ್ಯಮದ ಮೂಲಕ ಏನನ್ನಾದರೂ ಹೇಳುತ್ತಿರುತ್ತಾರೆ. ಅದು ಅವರ ಜವಾಬ್ದಾರಿ. ಇತ್ತೀಚಿನ ದಿನಮಾನಗಳಲ್ಲಿ ತುಂಬಾ ಸೂಕ್ಷ್ಮವಾಗಿ ಕಥೆ ಹೇಳುವ ಪ್ರಯತ್ನವನ್ನು ಹೊಸಬರು ಮಾಡುತ್ತಿದ್ದಾರೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಉದ್ಯಮ ಸಂಕಷ್ಟದಲ್ಲಿದ್ದರೂ ಕೂಡ ಹೊಸ ಪ್ರತಿಭೆಗಳ ಬಗ್ಗೆ ನನಗೆ ಭರವಸೆ ಇದೆ. ಪ್ರತಿಭೆಗಳಿಗೆ ಇಲ್ಲಿ ಬಡತನವಿಲ್ಲ. ಸಮಾಜ ಬದಲಾಗುತ್ತಿರುವ ವೇಗಕ್ಕೆ ತಕ್ಕ ಕಥೆ ಹೇಳುವಂಥ ಅನೇಕ ಹೊಸಬರು ಬರುತ್ತಿದ್ದಾರೆ. ಸೋಲುಗಳ ನಡುವೆ ಭರವಸೆಗಳು ಇವೆ. ಇಂತಹ ಭರವಸೆ ಮೂಡಿಸುವ ಪ್ರತಿಭೆಗಳನ್ನು ಗುರುತಿಸುವ ಉತ್ತೇಜಿಸುವ ಕೆಲಸವನ್ನು ಪ್ರಜಾವಾಣಿ ಮಾಡುತ್ತಿದೆ. ಪ್ರಶಸ್ತಿಗೆ ನಾಮನಿರ್ದೇಶನಗೊಂಡವರಿಗೆ ಪ್ರಶಸ್ತಿ ಪಡೆದವರಿಗೆ ಇದೊಂದು ಸಾರ್ಥಕವಾದ ಕ್ಷಣ.- ‘ಹೊಸಬರ ಮೇಲೆ ಭರವಸೆ ಇದೆ’ ಎ –ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.