ADVERTISEMENT

‘ಬೈಜು ಬಾವ್ರಾ’ ನಾಯಕ ಹೃತಿಕ್‌?

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:39 IST
Last Updated 11 ನವೆಂಬರ್ 2019, 19:39 IST
   

ಸಂಜಯ್‌ ಲೀಲಾ ಬನ್ಸಾಲಿ ‘ಬೈಜು ಬಾವ್ರಾ’ ಎಂಬ ಸಿನಿಮಾವನ್ನು ಈಚೆಗೆ ಘೋಷಿಸಿದ್ದಾರೆ. ಮೊಘಲ್‌ ಚಕ್ರವರ್ತಿ ಅಕ್ಬರ್‌ನ ಕಾಲದಲ್ಲಿ ಇದ್ದ ದ್ರುಪದ ಶೈಲಿಯ ಸಂಗೀತಗಾರ ಬೈಜುನಾಥ್ ಬಾವ್ರಾ ಎಂಬ ಅಸಾಧಾರಣ ಪ್ರತಿಭಾವಂತನ ಬದುಕನ್ನು ‘ಬೈಜು ಬಾವ್ರಾ’ ಎಂಬ ಹೆಸರಿನಲ್ಲಿ ತೆರೆಯ ಮೇಲೆ ತರಲು ಬನ್ಸಾಲಿ ನಿರ್ಧರಿಸಿದ್ದಾರೆ.

ಈ ಸಿನಿಮಾದಲ್ಲಿ ಸಂಗೀತಗಾರ ಬೈಜುನಾಥ್‌ ಪಾತ್ರದಲ್ಲಿ ನಟ ರಣವೀರ್‌ ಸಿಂಗ್‌ ಅವರು ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ರಣವೀರ್‌ ಸಿಂಗ್‌ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ, ಡೇಟ್ಸ್‌ ತೊಂದರೆಯಾಗಿರುವುದರಿಂದ ಆ ಪಾತ್ರಕ್ಕೆ ಹೃತಿಕ್‌ ರೋಷನ್‌ ಜೊತೆ ಬನ್ಸಾಲಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ರಣವೀರ್‌ ಸಿಂಗ್‌ ಕೈಯಲ್ಲಿ ಮೂರು– ನಾಲ್ಕು ಸಿನಿಮಾಗಳಿದ್ದು, ‘ತಕ್ತ್‌’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

‘ಸೂಪರ್‌ 30’ ಹಾಗೂ ‘ವಾರ್‌’ ಚಿತ್ರಗಳಲ್ಲಿ ಹೃತಿಕ್‌ ನಟನೆಯನ್ನು ಮೆಚ್ಚಿಕೊಂಡಿರುವ ಬನ್ಸಾಲಿ, ತಮ್ಮ ‘ಬೈಜು ಬಾವ್ರಾ’ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುವಂತೆ ಅವರನ್ನು ಕೇಳಿಕೊಂಡಿದ್ದಾರೆ.

ರಣವೀರ್‌ ಬಿಟ್ಟುಕೊಟ್ಟಿದ್ದರಿಂದ ಹೃತಿಕ್‌ಗೆ ಲಾಭವಾಯಿತು ಎಂದು ಬಾಲಿವುಡ್‌ಮಾತನಾಡಿಕೊಳ್ಳುತ್ತಿದೆ. ಕಳೆದ ಕೆಲ ದಿನಗಳಿಂದ ಈ ಸಿನಿಮಾ ಕುರಿತು ಹೃತಿಕ್‌ ಹಾಗೂ ಬನ್ಸಾಲಿ ಚರ್ಚೆ ಮಾಡುತ್ತಿದ್ದಾರೆ. ಬನ್ಸಾಲಿ ಅವರ ಸಿನಿಮಾಗಳನ್ನು ಇಷ್ಟಪಡುವ ಹೃತಿಕ್‌ ಈ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರೆ.

‘ಬೈಜು ಬಾವ್ರಾ’ ಸಿನಿಮಾದ ಚಿತ್ರಕತೆ ಹೃತಿಕ್‌ಗೆ ಇಷ್ಟವಾಗಿದ್ದು, ಸದ್ಯದಲ್ಲೇ ಈ ಚಿತ್ರಕ್ಕೆ ಸಹಿ ಮಾಡಿ, ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.

ಅಪ್ಪನಿಗೆ ನೀಡಿದ ವಚನದ ಪ್ರಕಾರ, ತಾನ್‌ಸೇನನ ವಿರುದ್ಧ ಸಂಗೀತ ಜುಗಲ್ಬಂದಿಯಲ್ಲಿ ಸ್ಪರ್ಧಿಸುವ ಛಲದಂಕ ಸಂಗೀತಗಾರ ಬೈಜುನಾಥ್. ಬೈಜುನಾಥ್‌ ಪಾತ್ರದಲ್ಲಿ ಹೃತಿಕ್‌ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಬಿ–ಟೌನ್‌ ಕುತೂಹಲದಿಂದ ಕಾಯುತ್ತಿದೆ.

ಒಂದು ವೇಳೆ ಬೈಜು ಬಾವ್ರಾ ಸಿನಿಮಾದಲ್ಲಿ ಬನ್ಸಾಲಿ ಹಾಗೂ ಹೃತಿಕ್‌ ಒಟ್ಟಿಗೆ ಕೆಲಸ ಮಾಡಿದರೆ 9 ವರ್ಷಗಳ ನಂತರ ಒಟ್ಟಿಗೆ ಕೆಲಸ ಮಾಡಿದಂತಾಗುತ್ತದೆ. 2010ರಲ್ಲಿ ಬಿಡುಗಡೆಯಾದ ಗುಜಾರಿಶ್‌ ಚಿತ್ರದಲ್ಲಿ ಹೃತಿಕ್‌ ನಾಯಕನಾಗಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನೆಲ ಕಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.