ADVERTISEMENT

‘ಪಾತಾಳ’ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸಿದ ಆರೋಪ; ಕಮಲ್ ವಿರುದ್ಧ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2022, 11:09 IST
Last Updated 14 ಮೇ 2022, 11:09 IST
 ಕಮಲ್ ಹಾಸನ್
ಕಮಲ್ ಹಾಸನ್   

ಚೆನ್ನೈ: ತಮಿಳು ನಟ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಸಿನಿಮಾದ ಹಾಡೊಂದು ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಹೆಚ್ಚು ಸದ್ದು ಮಾಡುತ್ತಿದೆ.

‘ಪಾತಾಳ.. ಪಾತಾಳ’ ಎಂಬ ಸಾಹಿತ್ಯದಿಂದ ಆರಂಭವಾಗುವ ಈ ಹಾಡಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ.

ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಅಣಕಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ಇಂಟರ್‌ನೆಟ್‌ನಲ್ಲಿ ಸಂಚಲನ ಉಂಟುಮಾಡಿರುವ ಈ ಹಾಡಿನ ಸಾಲುಗಳು ಈ ಕೆಳಗಿನಂತಿವೆ.

ADVERTISEMENT

‘ಖಜಾನೆ ಖಾಲಿ ಖಾಲಿ, ಖಜಾನೆ ಖಾಲಿ ಖಾಲಿ.. ರೋಗಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಖಜಾನೆಯಲ್ಲಿ ಹಣ ಉಳಿದಿಲ್ಲ. ಕೇಂದ್ರ ಸರ್ಕಾರದ ತಪ್ಪುಗಳಿಂದಾಗಿ ಈಗ ಏನೂ ಉಳಿದಿಲ್ಲ. ಕೀ ಈಗ ಕಳ್ಳನ ಬಳಿ ಇದೆ’ ಎಂಬ ಅರ್ಥವನ್ನು ನೀಡುತ್ತದೆ.

ಹಾಡಿನ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೆಲ್ವಂ ಎಂಬುವರು ದೂರು ದಾಖಲಿಸಿದ್ದಾರೆ. ಹಾಡಿನಲ್ಲಿ ಬರುವ ಈ ಸಾಲುಗಳನ್ನು ತೆಗೆದುಹಾಕಬೇಕು. ಇದರ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳದಿದ್ದರೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಕಮಲ್ ಹಾಸನ್ ಅವರೇ ಬರೆದಿದ್ದಾರೆ.

ಕಮಲ್ ಹಾಸನ್ ಅವರು ಇತ್ತೀಚೆಗೆ ಸಂಗೀತ ಸಂಯೋಜಕ ಅನಿರುದ್ಧ ರವಿಚಂದರ್ ಅವರೊಂದಿಗಿನ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಜತೆಗೆ ‘ಪಾತಾಳ. ಪಾತಾಳ...’ ಹಾಡಿನ ಬಗ್ಗೆ ಬರೆದುಕೊಂಡಿದ್ದರು.

ಅನಿರುದ್ಧ ಕುರಿತು ಟ್ವೀಟ್ ಮಾಡಿದ್ದ ಕಮಲ್‌ ಹಾಸನ್, ‘ನೀವು ಎಂತಹ ದೊಡ್ಡ ವಂಶಸ್ಥರು ಎಂದು ನಾನು ಯೋಚಿಸುತ್ತಿದ್ದೆ. ನಿಮ್ಮ ಮುತ್ತಜ್ಜನಿಂದ ನಿಮ್ಮವರೆಗೆ, ಒಂದೇ ಕುಟುಂಬದಲ್ಲಿ ಎಷ್ಟು ಹೇರಳವಾದ ಪ್ರತಿಭೆ ಮತ್ತು ಸಾಧನೆಗಳು. ನೀವು ನಿಜವಾಗಿಯೂ ನಿಮ್ಮ ಕುಟುಂಬದ ಶ್ರೇಷ್ಠತೆಗೆ ತಕ್ಕಂತೆ ಜೀವಿಸುತ್ತಿದ್ದೀರಿ. ನನ್ನ ಯುವ ಸ್ನೇಹಿತ ನಿಮಗೆ ಹೆಚ್ಚಿನ ಶಕ್ತಿ ದೊರೆಯಲಿ’ ಎಂದು ಪೋಸ್ಟ್‌ ಮಾಡಿದ್ದರು.

ಮೇ 11ರಂದು ಪಾತಾಳ ಪಾತಾಳ ಹಾಡನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ. ಯುಟ್ಯೂಬ್‌ನಲ್ಲಿ ಈ ಹಾಡನ್ನು ಇದುವರೆಗೆ 2 ಕೋಟಿ 62 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 8.47 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

ಲೋಕೇಶ್ ಕನಗರಾಜ್ ಆ್ಯಕ್ಷನ್ ಕಟ್ ಹೇಳಿರುವ ‘ವಿಕ್ರಮ್’ ಸಿನಿಮಾ ಜೂನ್ 3ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಅರ್ಜುನ್ ದಾಸ್, ಶಿವಾನಿ ನಾರಾಯಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

‘ವಿಶ್ವ ರೂಪಂ– 2’ ಬಿಡುಗಡೆಯಾದ ನಾಲ್ಕು ವರ್ಷಗಳ ಬಳಿಕ ಕಮಲ್ ಹಾಸನ್‌ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.