ಮುಂಬೈ: ತೆಲುಗು ನಟ ಅಲ್ಲು ಅರ್ಜುನ್ ಹಾಗೂ ತಮಿಳಿನ ಅಟ್ಲಿ ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ ಹೊಸ ಚಿತ್ರದ ನಾಯಕಿಯಾಗಿ ಕನ್ನಡದ ಬೆಡಗಿ ಬಾಲಿವುಡ್‌ನ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಪ್ರಭಾಸ್ ನಾಯಕರಾಗಿ ನಟಿಸುತ್ತಿರುವ ‘ಸ್ಪಿರಿಟ್‘ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುವುದು ಬಹುತೇಕ ಖಚಿತಗೊಂಡಿತ್ತು. ಆ ಕುರಿತು ಘೋಷಣೆಯೂ ಆಗಿತ್ತು. ಆದರೆ ನಿರ್ದೇಶಕ ವಂಗಾ ಜೊತೆಗಿನ ವಿವಾದದಿಂದ ದೀಪಿಕಾ ಅದನ್ನು ತೊರೆದಿದ್ದರು. ಇದು ಈ ಇಬ್ಬರ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು.
ಈ ವಿವಾದದ ಬೆನ್ನಲ್ಲೇ ಅಟ್ಲಿ ನಿರ್ದೇಶನದಲ್ಲಿ ಸೆಟ್ಟೇರುತ್ತಿರುವ ‘AA22XA6 – ಎ ಮ್ಯಾಗ್ನಮ್ ಒಪಸ್‘ ಚಿತ್ರದಲ್ಲಿ ನಾಯಕ ಅಲ್ಲು ಅರ್ಜುನ್ ಅವರಿಗೆ ದೀಪಿಕಾ ನಾಯಕಿಯಾಗಿ ಆಯ್ಕೆಯಾಗಿದ್ದನ್ನು ಚಿತ್ರತಂಡ ಖಚಿತಪಡಿಸಿದೆ. ಸನ್ ಪಿಚ್ಚರ್ಸ್ ಇದನ್ನು ನಿರ್ಮಿಸುತ್ತಿದೆ. ಈ ಕುರಿತು ವಿಡಿಯೊ ಯುಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಅಲ್ಲು ಅರ್ಜುನ್ ಜೊತೆ ದೀಪಿಕಾ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿದ್ದಾರೆ. 2023ರಲ್ಲಿ ಶಾರುಕ್ ಖಾನ್ ನಟನೆಯ ಜವಾನ್ ಚಿತ್ರದಲ್ಲಿ ದೀಪಿಕಾ ನಟಿಸಿದ್ದರು. ಆ ಚಿತ್ರಕ್ಕೂ ಅಟ್ಲಿ ಆ್ಯಕ್ಷನ್ ಕಟ್ ಹೇಳಿದ್ದರು. ಹೀಗಾಗಿ ಅಟ್ಲಿ ಜತೆ ದೀಪಿಕಾಗೆ ಇದು 2ನೇ ಚಿತ್ರವಾಗಿದೆ.
‘ದಿನದಲ್ಲಿ 6 ಗಂಟೆ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ದೀಪಿಕಾ ಹೇಳಿದ್ದು ನಿರ್ದೇಶಕ ವಂಗಾ ಅವರ ಸಿಟ್ಟಿಗೆ ಕಾರಣವಾಗಿತ್ತು. ಒಂದೊಮ್ಮೆ ಚಿತ್ರೀಕರಣ 100 ದಿನಗಳ ಒಳಗಾಗಿ ಪೂರ್ಣಗೊಳ್ಳದಿದ್ದರೆ ಮುಂದಿನ ಪ್ರತಿ ದಿನದ ಚಿತ್ರೀಕರಣಕ್ಕೂ ದೀಪಿಕಾಗೆ ಹೆಚ್ಚುವರಿ ಹಣ ನೀಡಬೇಕು ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು’ ಎಂಬುದು ಸುದ್ದಿಯಾಗಿತ್ತು.
ಇದು ನಟಿ ಹಾಗೂ ನಿರ್ದೇಶಕರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಜಟಾಪಟಿಗೂ ಕಾರಣವಾಗಿತ್ತು. ಚಿತ್ರಕಥೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಬೆದರಿಕೆಯನ್ನು ದೀಪಿಕಾ ಒಡ್ಡಿದ್ದರು ಎಂಬುದೂ ಸುದ್ದಿಯಾಗಿತ್ತು.
ಈ ವಿವಾದ ತಣ್ಣಗಾಗುವ ಹೊತ್ತಿಗೆ ಅಟ್ಲಿ ನಿರ್ದೇಶನದ ಚಿತ್ರದ ಭಾಗವಾಗುತ್ತಿರುವ ಸುದ್ದಿ ಹೊರಬಿದ್ದಿದೆ. ಅಟ್ಲಿ ಮತ್ತು ದೀಪಿಕಾ ಅವರು ಚಿತ್ರಕತೆ ಕುರಿತು ಚರ್ಚಿಸುವ ವಿಡಿಯೊವನ್ನು ಹಂಚಿಕೊಂಡಿರುವ ಚಿತ್ರತಂಡ, ನಾಯಕಿಯ ಹೆಸರನ್ನು ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.