ADVERTISEMENT

ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಗಿ ನೀಡಿದ ಬರೇಲಿ ಜಿಲ್ಲಾಡಳಿತ

ಪಿಟಿಐ
Published 16 ನವೆಂಬರ್ 2025, 9:26 IST
Last Updated 16 ನವೆಂಬರ್ 2025, 9:26 IST
ದಿಶಾ ಪಟಾನಿ
ದಿಶಾ ಪಟಾನಿ   

ಬರೇಲಿ (ಉತ್ತರ ಪ್ರದೇಶ): ಬರೇಲಿ ಜಿಲ್ಲಾಡಳಿತವು ಬಾಲಿವುಡ್‌ ನಟಿ ದಿಶಾ ಪಟಾನಿ ಅವರ ತಂದೆ ಜಗದೀಶ್ ಪಟಾನಿ ಅವರಿಗೆ ಶಸ್ತ್ರಾಸ್ತ್ರ ಪರವಾನಗಿ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ದಿಶಾ ಪಟಾನಿ ಅವರ ಪೂರ್ವಜರ ಮನೆಯ ಹೊರಗೆ ಇತ್ತೀಚೆಗೆ ಗುಂಡಿನ ದಾಳಿ ನಡೆದಿತ್ತು. ಬಳಿಕ ದಿಶಾ ಅವರ ತಂದೆ ಜಗದೀಶ್ ಪಟಾನಿ ಅವರು ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿ ಶಸ್ತ್ರಾಸ್ತ್ರ ಪರವಾನಗಿ ನೀಡುವಂತೆ ಮನವಿ ಮಾಡಿದ್ದರು.

ಅಲ್ಲದೇ ಘಟನೆಯ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಜಗದೀಶ್ ಪಟಾನಿ ಅವರ ನಿವಾಸಕ್ಕೆ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದರು.

ADVERTISEMENT

ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವನೀಶ್ ಸಿಂಗ್ ಮಾತನಾಡಿ, 'ತಮ್ಮ ನಿವಾಸದ ಬಳಿ ಗುಂಡಿನ ದಾಳಿ ನಡೆದ ಬಳಿಕ ಜಗದೀಶ್ ಪಟಾನಿ ಅವರು, ಶಸ್ತ್ರಾಸ್ತ್ರ ಪರವಾನಗಿ ನೀಡುವಂತೆ ಕೋರಿದ್ದರು. ಎಲ್ಲಾ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರಿಗೆ ಶಸ್ತ್ರಾಸ್ತ್ರ (ರಿವಾಲ್ವರ್/ಪಿಸ್ತೂಲ್) ಪರವಾನಗಿ ನೀಡಲಾಗಿದೆ' ಎಂದು ತಿಳಿಸಿದ್ದಾರೆ.

2025ರ ಸೆಪ್ಟೆಂಬರ್ 12ರಂದು, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪಟಾನಿ ಅವರ ಮನೆಯ ಹೊರಗೆ ಸುಮಾರು 10 ಸುತ್ತು ಗುಂಡು ಹಾರಿಸಿದ್ದರು. ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಸಂಬಂಧ ಸೆಪ್ಟೆಂಬರ್ 17ರಂದು ಗಾಜಿಯಾಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರವೀಂದ್ರ ಮತ್ತು ಅರುಣ್ ಎಂದು ಗುರುತಿಸಲಾದ ಇಬ್ಬರು ಶಂಕಿತರನ್ನು ಹತ್ಯೆ ಮಾಡಲಾಗಿದೆ. ದೆಹಲಿ ಪೊಲೀಸ್‌ ವಿಶೇಷ ಘಟಕ, ಉತ್ತರ ಪ್ರದೇಶ ಮತ್ತು ಹರಿಯಾಣದ ವಿಶೇಷ ಕಾರ್ಯಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ ಈ ಎನ್‌ಕೌಂಟರ್‌ ನಡೆಸಿದ್ದವು.

'ಜಗದೀಶ್ ಪಟಾನಿ ಅವರ ನಿವಾಸದಲ್ಲಿ ಭದ್ರತೆ ಮುಂದುವರಿಯಲಿದೆ' ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.