ADVERTISEMENT

Sandalwood: ‘ಗತವೈಭವ’ ಸಿನಿಮಾದ ನಾಯಕ ದುಷ್ಯಂತ್ ಸಂದರ್ಶನ

ಅಭಿಲಾಷ್ ಪಿ.ಎಸ್‌.
Published 7 ನವೆಂಬರ್ 2025, 0:31 IST
Last Updated 7 ನವೆಂಬರ್ 2025, 0:31 IST
ದುಷ್ಯಂತ್‌ 
ದುಷ್ಯಂತ್‌    
ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಸಿನಿಮಾಗೆ ಹೆಜ್ಜೆ ಇಟ್ಟಿದ್ದೇ ಅಪ್ಪನ ವಿರೋಧದ ನಡುವೆ. ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದಲ್ಲಿ ನಾಲ್ಕು ಭಿನ್ನ ಶೇಡ್ಸ್‌ ಮೂಲಕ ತೆರೆ ಪ್ರವೇಶಿಸುತ್ತಿದ್ದಾರೆ ದುಷ್ಯಂತ್‌. ರಾಜಕೀಯ ದೋಣಿಯಿಂದ ದೂರವೇ ಇರುವ ನಿರ್ಧಾರ ಮಾಡಿ ಸಿನಿಮಾ ದೋಣಿ ಹತ್ತಿರುವ ದುಷ್ಯಂತ್‌ ಅವರೊಂದಿಗೆ ಮಾತಿಗಿಳಿದಾಗ...

ನಿಮ್ಮ ಹಿನ್ನೆಲೆ ಹಾಗೂ ತಯಾರಿಯ ಬಗ್ಗೆ...

ಗುಬ್ಬಿ ತಾಲ್ಲೂಕಿನ ಸಣ್ಣ ಹಳ್ಳಿಯೊಂದರಿಂದ ಬಂದ ಕುಟುಂಬ ನನ್ನದು. ಹುಟ್ಟಿ ಬೆಳೆದಿದ್ದು, ಓದಿದ್ದು ತುಮಕೂರಿನಲ್ಲಿ. ಬ್ರಿಟನ್‌ನಲ್ಲಿದ್ದುಕೊಂಡು ಎಲ್‌ಎಲ್‌ಬಿ ಮಾಡಿದೆ. 2017ಕ್ಕೆ ಬ್ರಿಟನ್‌ನಿಂದ ಮರಳಿಬಂದ ಬಳಿಕ ನಟನಾಗಬೇಕು ಎಂದುಕೊಂಡು ತಯಾರಿ ಆರಂಭಿಸಿದೆ. ಎಂಟು ವರ್ಷದ ಪಯಣವಿದು. ಆರಂಭದಲ್ಲಿ ಬೀದಿ ನಾಟಕ, ಕಿರುಚಿತ್ರ, ರಂಗಭೂಮಿ, ಮ್ಯೂಸಿಕ್‌ ವಿಡಿಯೊಗಳಲ್ಲಿ ನಟಿಸಿದೆ. ಸಿನಿಮಾಗಾಗಿ ಸುಮಾರು 20 ಕೆ.ಜಿ.ತೂಕ ಇಳಿಸಿಕೊಂಡೆ. ಬಳಿಕ ಮಾರ್ಷಲ್‌ ಆರ್ಟ್ಸ್‌, ಡಾನ್ಸ್‌ ತರಬೇತಿ ಪಡೆದೆ. ಟೆಂಟ್‌ ಸಿನಿಮಾ, ಪುಷ್ಕರ್ ಆ್ಯಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಿಂದ, ನೀನಾಸಂ ಧನಂಜಯ, ಕೃಷ್ಣ ಹೆಬ್ಬಾಳೆ ಅವರ ಬಳಿ ನಟನೆಯ ತರಬೇತಿ ಪಡೆದುಕೊಂಡೆ. 2020ರ ಮೇ ತಿಂಗಳಲ್ಲಿ ‘ರಾಬಿನ್‌ಹುಡ್‌’ ಸಿನಿಮಾ ಮಾಡಬೇಕು ಎಂದು ನಾನು ಹಾಗೂ ಸುನಿ ಅವರು ನಿರ್ಧರಿಸಿದೆವು. ಇದಕ್ಕಾಗಿ ಹೀರೊ ಇಂಟ್ರೊಡಕ್ಷನ್‌ ದೃಶ್ಯವನ್ನೂ ಚಿತ್ರೀಕರಿಸಿದ್ದೆವು. ಬಜೆಟ್ ಹೆಚ್ಚಾದ ಕಾರಣ ಅದನ್ನು ಪಕ್ಕಕ್ಕಿಟ್ಟು, ಒಂದೂವರೆ ವರ್ಷ 18–20 ಹೊಸ ಕಥೆಗಳನ್ನು ಕೇಳಿದೆವು. ಅವುಗಳಾವೂ ಒಪ್ಪಿಗೆಯಾಗಲಿಲ್ಲ. ಸುನಿ ಅವರ ಸಿನಿಪಯಣದ ಒಂದು ಅತ್ಯುತ್ತಮ ಸಿನಿಮಾ ನನ್ನ ಜೊತೆಯಾಗಬೇಕು ಎನ್ನುವ ನಿರೀಕ್ಷೆ ಹೊತ್ತಿದ್ದೆ. ಕೊನೆಯಲ್ಲಿ ಸುನಿ ಅವರದೇ ‘ಗತವೈಭವ’ ಕಥೆ ಹೇಳಿದರು. ಈ ಕಥೆಯಲ್ಲಿ ನಾಯಕನಿಗೆ ನಾಲ್ಕು ಶೇಡ್‌ಗಳಿದ್ದ ಕಾರಣ ಹೊಸಬರಿಗೆ ಇದು ಸಾಧ್ಯವಿಲ್ಲ, ನುರಿತ ಕಲಾವಿದನೇ ಬೇಕು ಎನ್ನುವ ಕಾರಣಕ್ಕೆ ನನಗೆ ಮೊದಲು ಹೇಳಿರಲಿಲ್ಲ. ನನ್ನ ಸಿನಿಮಾ ಆಸಕ್ತಿ, ಹೀರೊ ಇಂಟ್ರೊಡಕ್ಷನ್‌ ದೃಶ್ಯದಲ್ಲಿನ ನಟನೆ ಬಳಿಕ ಸುನಿ ಅವರಿಗೆ ನನ್ನಲ್ಲಿ ಪೂರ್ಣ ನಂಬಿಕೆ ಮೂಡಿತ್ತು. 

ಭಾವನಾತ್ಮಕವಾಗಿ ಒಂದು ರೋಲರ್‌ಕೋಸ್ಟರ್‌ ರೈಡ್‌ ಈ ಸಿನಿಮಾದಲ್ಲಿದೆ. ಮೊದಲ ಸಿನಿಮಾದಲ್ಲೇ ನಾಲ್ಕು ಶೇಡ್‌ಗಳನ್ನು ಮಾಡುವ ಅವಕಾಶ ಸಿಗುವುದೇ ವಿರಳ. ಹೀಗಾಗಿ ತಕ್ಷಣ ಒಪ್ಪಿಕೊಂಡೆ. ಬರವಣಿಗೆಯಲ್ಲಿ ಹೆಚ್ಚಿನ ತಾಕತ್ತನ್ನು ಈ ಸಿನಿಮಾ ಹೊಂದಿದೆ. 2022ರಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದೆವು.  

ADVERTISEMENT

ಸಿನಿಮಾ ಕ್ಷೇತ್ರಕ್ಕೇ ಬರಬೇಕು ಎಂದೆನಿಸಿದ್ದು ಏಕೆ?

ನನ್ನ ಹಿನ್ನೆಲೆಯೇ ನನ್ನ ಈ ಹೆಜ್ಜೆಗೆ ಮುಖ್ಯ ಕಾರಣ. ಮನೆಯಲ್ಲಿ ದೊಡ್ಡ ವ್ಯಕ್ತಿ ಇದ್ದಾಗ ನಾವೇನೇ ಮಾಡಿದರೂ ನೀವು ಅವರ ಮಗ, ಆ ಕುಟುಂಬದಿಂದ ಬಂದಿದ್ದೀರಿ ಎನ್ನುವ ಮಾತು, ಭಾವನೆ ಸಾಮಾನ್ಯ. ಶಾಲಾ ದಿನಗಳಲ್ಲೂ ಒಳ್ಳೆಯ ಅಂಕ ಪಡೆದಾಗಲೂ ಈ ಮಾತುಗಳನ್ನು ನಾನು ಕೇಳಿದ್ದೇನೆ. ಇದು ಸದಾ ಚುಚ್ಚುತ್ತಲೇ ಇತ್ತು. ಹಾಗಾದರೆ ನಾನೇನು ಅಲ್ಲವೇನೋ ಎನ್ನುವ ಪ್ರಶ್ನೆಯನ್ನು ನಾನೇ ಕೇಳಿಕೊಂಡಿದ್ದೆ. ಅದಕ್ಕಾಗಿ ಉನ್ನತ ಶಿಕ್ಷಣಕ್ಕೆ ಬ್ರಿಟನ್‌ಗೆ ಹೋದೆ. ಅಲ್ಲೂ ಸ್ಕಾಲರ್‌ಶಿಪ್‌ ಪಡೆದು ಒಳ್ಳೆಯ ಅಂಕಗಳೊಂದಿಗೆ ಡಿಗ್ರಿ ಪಡೆದೆ. ಇವರ ಯಾವ ಪ್ರಭಾವವೂ ಇಲ್ಲದ, ನಡೆಯದ ಕ್ಷೇತ್ರಕ್ಕೆ ಹೋಗಿ ಗೆಲ್ಲಬೇಕು ಎಂದು ನಿರ್ಧರಿಸಿ ಸಿನಿಮಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟೆ. ರಾಜಕೀಯಕ್ಕೆ ಬರಬೇಕು ಎನ್ನುವ ಯೋಚನೆ ಇರಲೇ ಇಲ್ಲ. ರಾಜಕೀಯದಲ್ಲಿ ನೆಮ್ಮದಿ ಇಲ್ಲ, ಕುಟುಂಬದೊಂದಿಗೆ ಕಾಲ ಕಳೆಯಲು ಆಗುವುದಿಲ್ಲ, ಪ್ರಾಮಾಣಿಕವಾಗಿದ್ದರೂ ನೋಡುವ ದೃಷ್ಟಿಗಳು ಬೇರೆಯದೇ ಆಗಿರುತ್ತವೆ...ಹೀಗೆ ನನ್ನ ಕಾಲದಲ್ಲೇ ಇದು ಅಂತ್ಯವಾಗಲಿ ಎನ್ನುವ ಭಾವನೆ ತಂದೆಗಿತ್ತು. ಕುಟುಂಬದಲ್ಲೂ ರೋಸಿ ಹೋಗಿದ್ದೆವು. ರಾಜಕೀಯಕ್ಕೆ ಹೋದರೂ ಮತ್ತದೇ ‘ಪ್ರಭಾವ’ದ ಸುಳಿಯಲ್ಲಿ ಸಿಲುಕಿಕೊಳ್ಳುತ್ತೇನೆ ಎಂದೆನಿಸಿತು. ತಂದೆಯ ವಿರುದ್ಧವೆಂದಲ್ಲ, ಅವರ ಆಸೆ, ಆಕಾಂಕ್ಷೆಗಳ ದಾರಿಯಲ್ಲಿ ನನ್ನ ಹೆಜ್ಜೆ ಇರಲಿಲ್ಲ. ನಾನೊಬ್ಬ ಐಎಎಸ್‌ ಅಧಿಕಾರಿಯಾಗಬೇಕು ಎಂದು ಮಾರ್ಗದರ್ಶನ ಮಾಡಿದ್ದರು. ನನ್ನ ಆಸೆಯೂ ಅದೇ ಆಗಿತ್ತು. ಆದರೆ ಕೊನೆಯಲ್ಲಿ ಸಿನಿಮಾ ಕ್ಷೇತ್ರ ಆಯ್ದುಕೊಂಡೆ. ಈ ವೃತ್ತಿಯಲ್ಲೂ ನಾಲ್ಕು ಜನ ಗೌರವ ಕೊಡುವ ರೀತಿ ಬಾಳಿದರೆ ಅವರೂ ಖಂಡಿತವಾಗಿಯೂ ಖುಷಿಪಡಲಿದ್ದಾರೆ ಎನ್ನುವ ಭಾವನೆ ನನ್ನದು. 

ಸಿನಿಮಾದಲ್ಲಿನ ನಿಮ್ಮ ಪಾತ್ರದ ಬಗ್ಗೆ...

ಫ್ಯಾಂಟಸಿ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಈ ಸಿನಿಮಾದಲ್ಲಿ ವಿಎಫ್‌ಎಕ್ಸ್‌ ಕಲಾವಿದನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇದೊಂದು ಪುನರ್ಜನ್ಮದ ಕಥೆ. ದೇವಲೋಕ–ಸಮುದ್ರಮಂಥನದ ಸಂದರ್ಭದಲ್ಲಿ ರಾಕ್ಷಸನಾಗಿ ಕಾಣಿಸಿಕೊಳ್ಳಲಿದ್ದೇನೆ. ದೇವಕನ್ಯೆಯಾಗಿ ಆಶಿಕಾ ರಂಗನಾಥ್‌ ಬಣ್ಣಹಚ್ಚಿದ್ದಾರೆ. 1498ರಲ್ಲಿ ವಾಸ್ಕೋಡಗಾಮನ ಜೊತೆಯಿರುವ ‘ಪೋರ್ಚು’ ಎನ್ನುವ ಪಾತ್ರದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ‘ಕಂಬಳವೀರ ಶ್ರೀನಿವಾಸ’ನಾಗಿ ಹಾಗೂ ಪ್ರಸ್ತುತ ಸಮಯದ ‘ಪುರಾತನ್‌’ ಎನ್ನುವ ಯುವಕನಾಗಿ ನಟಿಸಿದ್ದೇನೆ. ಈ ಎಲ್ಲಾ ಪಾತ್ರಗಳಿಗೂ ಸಂಬಂಧವಿದೆ ಎನ್ನುವ ರೀತಿಯಲ್ಲಿ ಕಥೆ ಪೋಣಿಸಲಾಗಿದೆ. 

ಹೊಸ ನಟ–ನಟಿಯರನ್ನು ಪರಿಚಯಿಸುವ ಸುನಿ ಬಗ್ಗೆ...

ನನ್ನ ಸುನಿ ಅವರ ಒಡನಾಟ ಸುಮಾರು ಐದೂವರೆ ವರ್ಷದ್ದು. ಅವರದ್ದು ಸೌಮ್ಯ ಸ್ವಭಾವ. ನಮ್ಮ ಭಾವನೆ, ಅಭಿಪ್ರಾಯಗಳನ್ನು ಹೇಳುವ ಅವಕಾಶ ನೀಡುವ ನಿರ್ದೇಶಕರು. ಹೊಸಬರಿಗೆ ಕಲಿಸುವಂತ ತಾಳ್ಮೆ, ಅಭಿನಯ ತೆಗಿಸುವಂತ ಸಾಮರ್ಥ್ಯ ಅವರಿಗಿದೆ. 

ಈ ಪ್ರಾಜೆಕ್ಟ್‌ ವಿಳಂಬವಾಗಲು ಕಾರಣಗಳು...

ಇದರಲ್ಲಿ ನಾಲ್ಕು ಜನ್ಮಗಳ ಕಥೆಯಿದೆ. ಅವೆಲ್ಲವೂ ಬೇರೆ ಬೇರೆ ಕಾಲಘಟ್ಟದಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವ ಕಥೆ ಹೊಂದಿದೆ. ಸೆಟ್ಸ್‌, ಪ್ರಪಂಚ, ಭಾಷಾ ಪ್ರಯೋಗ ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಒಂದು ರೀತಿಯಲ್ಲಿ ನಾಲ್ಕು ಸಿನಿಮಾ ಮಾಡಿದ ಅನುಭವ ಇಲ್ಲಾಗಿತ್ತು. ಸಿನಿಮಾದಲ್ಲಿ ಸುಮಾರು ಒಂದು ಗಂಟೆಯ ವಿಎಫ್‌ಎಕ್ಸ್‌ ಇದೆ. ಸುಮಾರು ಇನ್ನೂರು ಜನರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ತಯಾರಿಗೇ ಹಲವು ತಿಂಗಳು ತೆಗೆದುಕೊಂಡೆವು. ಕಂಬಳ ಓಡಿಸುವ ಶ್ರೀನಿವಾಸನ ಕಥೆಗಾಗಿ ಎರಡೂವರೆ ತಿಂಗಳು ನಾನು ಮಂಗಳೂರಿನ ಬೋಳಂಬಳ್ಳಿಯಲ್ಲಿದ್ದೆ. ಅಲ್ಲಿನ ಭಾಷೆ ಕಲಿತು, ಹೊಳೆಗಳಲ್ಲಿ ಸ್ನಾನ ಮಾಡಿಕೊಂಡು, ಅವರ ಆಚಾರ–ಸಂಸ್ಕೃತಿಗಳನ್ನು ತಿಳಿದುಕೊಂಡು, ಕೋಣಗಳನ್ನು ಓಡಿಸುವ ತರಬೇತಿ ಪಡೆದೇ ನಟಿಸಿದ್ದೆ. ಪೋರ್ಚ್‌ಗಲ್‌ನಲ್ಲಿ ಶೂಟಿಂಗ್‌ ನಡೆಸಲೂ ಇದೇ ರೀತಿಯ ತಯಾರಿಯಿತ್ತು. ಹಳೆಯ ಹಡಗಿನಲ್ಲಿನ ಚಿತ್ರೀಕರಣ ಸವಾಲಿನದ್ದಾಗಿತ್ತು. ಸಿನಿಮಾದ ಕಥೆ ನೈಜವಾಗಿ ತೆರೆ ಮೇಲೆ ಕಾಣಬೇಕೆಂದರೆ ಇಷ್ಟು ಸಮಯ ಬೇಕೆ ಬೇಕು.   

ಹೊಸ ಪ್ರಾಜೆಕ್ಟ್‌ಗಳು...

ಕಥೆಗಳನ್ನು ಕೇಳುತ್ತಿದ್ದೇನೆ. ಒಂದೆರಡು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದೇನೆ. ಮುಂದೆ ಬರುವ ಕಥೆಗಳಲ್ಲಿ ಇಷ್ಟವಾಗುವುದನ್ನು ಆಯ್ಕೆ ಮಾಡಿಕೊಳ್ಳಲಿದ್ದೇನೆ. ನಾಲ್ಕೈದು ವರ್ಷವಾಯಿತು ಎಂದು ಸುಮ್ಮನೆ ಸಿನಿಮಾ ಮಾಡುವುದಿಲ್ಲ.       

ಸಿನಿಮಾ–ರಾಜಕೀಯ ದೋಣಿಯಲ್ಲಿ...

ಎಂಟು ವರ್ಷ ಪ್ರಯತ್ನಪಟ್ಟು ಒಂದು ಸಿನಿಮಾ ಮಾಡಿದ್ದೇನೆ. ಒಂದೆರಡು ಸಿನಿಮಾ ಮಾಡಬೇಕು ಎನ್ನುವ ಉದ್ದೇಶವಿದ್ದಿದ್ದರೆ ಬಂದ ತಕ್ಷಣದಲ್ಲೇ ಹೀರೊ ಆಗುತ್ತಿದ್ದೆ. ಬೇಗ ಸ್ಟಾರ್‌ ಆಗಬೇಕು ಪ್ರಚಾರ ಬೇಕು ಇದನ್ನು ಉಪಯೋಗಿಸಿಕೊಂಡು ಬೇರೆಲ್ಲೋ ಹೋಗಬೇಕು ಎನ್ನುವಂತಿದ್ದರೆ ಬಂದ ತಕ್ಷಣ ಹೀರೊ ಆಗುತ್ತಿದ್ದೆ. ಎಂಟು ವರ್ಷದ ಪ್ರಯಾಣವನ್ನು ಮಾಡುತ್ತಲೇ ಇರಲಿಲ್ಲ. ಈ ಸುದೀರ್ಘ ಪಯಣ ಮಾಡಿರುವುದೇ ಇಲ್ಲಿ ಗಟ್ಟಿಯಾಗಿ ಇರಬೇಕು ಎನ್ನುವ ಉದ್ದೇಶದಿಂದ. 

ಆಶಿಕಾ–ದುಷ್ಯಂತ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.