ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಗಾಯಕ: ಜಸ್ಕರಣ್ ಸಿಂಗ್
ತೀವ್ರ ಪೈಪೋಟಿಯ ನಡುವೆ ಈ ಪ್ರಶಸ್ತಿ ಜಸ್ಕರಣ್ ಸಿಂಗ್ ಅವರ ಪಾಲಾಗಿದೆ. ರಾಜೇಶ್ ಕೃಷ್ಣನ್, ಕಪಿಲ್ ಕಪಿಲನ್‌ರಂಥ ಗಾಯಕರ ನಡುವೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ’ ಗೀತೆಗಾಗಿ ಅವರು ಈ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸರಿಗಮಪ ರಿಯಾಲಿಟಿ ಶೋನಿಂದ ಕನ್ನಡಕ್ಕೆ ಬಂದ ಪಂಜಾಬಿನ ಗಾಯಕ, ಕಳೆದ ವರ್ಷ ಈ ಹಾಡಿನಿಂದಾಗಿ ಮನೆ ಮಾತಾದರು. ರೀಲ್ಸ್‌ನಲ್ಲಿ ಟ್ರೆಂಡ್ ಆದ ಈ ಗೀತೆ ಲಕ್ಷಾಂತರ ವ್ಯೂ ಮೂಲಕ ದಾಖಲೆ ಬರೆದಿತ್ತು. ಸಿನಿಮಾ ಯಶಸ್ಸಿನಲ್ಲಿ ಈ ಗೀತೆಯ ಪಾಲು ಹೆಚ್ಚಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಜಸ್ಕರಣ್, ‘ಈ ಪ್ರಶಸ್ತಿ ಪಡೆಯಲು ನನಗೆ ಅತ್ಯಂತ ಸಂತಸವಾಗುತ್ತಿದೆ. ಇದರ ಎಲ್ಲ ಶ್ರೇಯಸ್ಸು ಕರ್ನಾಟಕದ ಜನತೆಗೆ ಸಲ್ಲುತ್ತದೆ. ಅವರು ನನ್ನನ್ನು ಪ್ರೀತಿಸಿ ಈ ಪ್ರಶಸ್ತಿ ಪಡೆಯಲು ಯೋಗ್ಯ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಎಲ್ಲವೂ ಈ ಹಾಡಿನ ಯಶಸ್ಸಿಗೆ ಕಾರಣ. ಅವಕಾಶಕ್ಕಾಗಿ ಚಿತ್ರದ ನಿರ್ದೇಶಕ ಶ್ರೀನಿವಾಸು ರಾಜು ಹಾಗೂ ‘ಕೃಷ್ಣಂ ಪ್ರಣಯ ಸಖಿ’ ತಂಡಕ್ಕೆ ಧನ್ಯವಾದಗಳು. ನಾನು ಇನ್ನಷ್ಟು ಕನ್ನಡ ಹಾಡುಗಳನ್ನು ಹಾಡಲು ಬಯಸುತ್ತೇನೆ. ನಾನು ಇಲ್ಲಿಗೆ ಬಂದಾಗ ಕರ್ನಾಟಕದವನು. ಪಂಜಾಬ್‌ನಲ್ಲಿದ್ದಾಗ ಮಾತ್ರ ಜಸ್ಕರಣ್ ಸಿಂಗ್, ಇಲ್ಲಿ ಜಸ್ಕರಣ್. ಇಲ್ಲಿನ ಜನರ ಪ್ರೀತಿ ಅಮೂಲ್ಯವಾದುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.