
ಮುಂಬೈ: ಬಾಲಿವುಡ್ ಹಿರಿಯ ನಟಿ, ಸಂಸದೆ ಜಯಾ ಬಚ್ಚನ್ ಅವರ ಹೇಳಿಕೆಯಿಂದ ಬೇಸರಗೊಂಡಿರುವ ಪಾಪರಾಜಿಗಳು(ಸೆಲೆಬ್ರಿಟಿ ಛಾಯಾಗ್ರಾಹಕರು), ಇನ್ನು ಮುಂದೆ ಬಚ್ಚನ್ ಕುಟುಂಬದ ಯಾವುದೇ ಸುದ್ದಿಗಳನ್ನು ಬಿತ್ತರಿಸದಿರಲು ನಿರ್ಧರಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಜಯಾ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದ ಅವರ ‘ಇಕ್ಕಿಸ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಪಾಪರಾಜಿಗಳ ಈ ನಿರ್ಧಾರದಿಂದ ಸಿನಿಮಾ ಪ್ರಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಜಯಾ ಅವರ ‘ಕೊಳಕು ಪ್ಯಾಂಟ್’ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ‘ವೈರಲ್ ಭಯಾನಿ’ ತಂಡದ ಸದಸ್ಯರೊಬ್ಬರು, 'ಯಾವುದೇ ಸೆಲೆಬ್ರಿಟಿಯನ್ನು ನಾವು ನಿಂದಿಸಿಲ್ಲ. ನಾವೂ ಮನುಷ್ಯರು ಎನ್ನುವುದು ತಿಳಿದಿರಲಿ’ ಎಂದು ಕಿಡಿಕಾರಿದ್ದಾರೆ.
‘ಪ್ರತಿ ಭಾನುವಾರ ಅಮಿತ್ ಬಚ್ಚನ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವ ಸಂದರ್ಭವನ್ನು ವರದಿ ಮಾಡುತ್ತಿರುವುದು ನಾವೇ ವಿನಃ ಮುಖ್ಯ ವಾಹಿನಿಗಳಲ್ಲ. ಅಗಸ್ತ್ಯ ನಂದ ಅವರ ಮುಂಬರುವ ಚಿತ್ರ ‘ಇಕ್ಕಿಸ್’ ಬಗ್ಗೆ ಯಾರು ವರದಿ ಮಾಡುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ.
‘ಇಕ್ಕಿಸ್ ಸಿನಿಮಾದ ಪ್ರಚಾರವನ್ನು ಯಾವುದೇ ಪಾಪರಾಜಿಗಳು ಮಾಡದೇ ಹೋದರೆ ಏನಾಗಬಹುದು ಎಂದು ಯೋಚಿಸಲಿ’ ಎಂದು ಬಾಲಿವುಡ್‌ನ ಜನಪ್ರಿಯ ಪಾಪರಾಜಿಗಳಲ್ಲಿ ಒಬ್ಬರಾದ ಪಲ್ಲವಿ ಪಲಿವಾಲ್ ಅವರು ಹೇಳಿದ್ದಾರೆ.
‘ಒಬ್ಬರ ಬಟ್ಟೆ, ತೊಡುಗೆಗಳನ್ನು ಆಧರಿಸಿ ಅವರ ಬಗ್ಗೆ ನಿರ್ಣಿಯಿಸುವುದು ಸರಿಯಲ್ಲ. ನಾವು ‘ಮಾಧ್ಯಮ’ ಅಲ್ಲ, ಆದರೆ ನಾವು ಸಾಮಾಜಿಕ ಮಾಧ್ಯಮದಲ್ಲಿ ಗುರುತಿಸಿಕೊಂಡವರು. ಇದು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಕ್ಕಿಂತ ವೇಗವಾಗಿ ಜನರನ್ನು ಮುಟ್ಟುತ್ತದೆ. ಪಾಪರಾಜಿಗಳಿಲ್ಲದೇ ತಮ್ಮ ಮೊಮ್ಮಗನ ಚಿತ್ರವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಚಾರ ಮಾಡುತ್ತಾರೆಯೇ?’ ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬ ಪಾಪರಾಜಿ ಮಾನವ್ ಮಂಗ್ಲಾನಿ ಪ್ರತಿಕ್ರಿಯಿಸಿ, ‘ಜಯಾ ಅವರಿಗೆ ಡಿಜಿಟಲ್ ಯುಗದ ಬಗ್ಗೆ ತಿಳುವಳಿಕೆಯಿಲ್ಲ ಎಂದು ಕಾಣುತ್ತದೆ. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಅದರ ಬಗ್ಗೆ ತಿಳಿ ಹೇಳಲಿ’ ಎಂದಿದ್ದಾರೆ.
ಏನಿದು ಘಟನೆ?
ಮುಂಬೈನಲ್ಲಿ ನಡೆದ 'ವಿ ದಿ ವುಮೆನ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಯಾ ಬಚ್ಚನ್ ಅವರನ್ನು ಪತ್ರಕರ್ತೆ ಬರ್ಖಾ ದತ್ ಅವರು ಸಂದರ್ಶನ ಮಾಡಿದ್ದಾರೆ.
ಈ ವೇಳೆ ಪಾಪರಾಜಿಗಳ ಬಗ್ಗೆ ಜಯಾ ಬಚ್ಚನ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ಜಯಾ ಅವರು, ಪಾಪರಾಜಿಗಳ ಜೊತೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು.
ಮುಂದುವರಿದು, ‘ಬಿಗಿಯಾದ, ಕೊಳಕಾದ ಪ್ಯಾಂಟ್ ಧರಿಸಿ ಕೈಯಲ್ಲಿ ಮೊಬೈಲ್ ಹಿಡಿದು ಬರುವ ಅವರು(ಪಾಪರಾಜಿಗಳು), ತಮಗೆ ಬೇಕಾದ ಫೋಟೊ ತೆಗೆದು ಏನು ಬೇಕಾದರೂ ಹೇಳಬಹುದು ಎಂದು ಭಾವಿಸುತ್ತಾರೆ. ಇವರು ಯಾವ ರೀತಿಯ ಜನರು?ಎಲ್ಲಿಂದ ಬಂದವರು? ಯಾವ ರೀತಿಯ ಶಿಕ್ಷಣ ಪಡೆದಿದ್ದಾರೆ? ಅವರ ಹಿನ್ನೆಲೆ ಏನು? ಒಂದು ತಿಳಿದಿಲ್ಲ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.