
ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ‘ಮಸ್ತ್ ಮಲೈಕ’ ಹಾಡಿನ ಮೂಲಕ ಅವರ ಪುತ್ರಿ ಸಾನ್ವಿ ಸುದೀಪ್ ಹಿನ್ನೆಲೆ ಗಾಯಕಿಯಾಗಿದ್ದಾರೆ. ಈಗಾಗಲೇ ಇಂಗ್ಲಿಷ್ ಗೀತೆಗಳನ್ನು ಹಾಡಿರುವ ಈ ಹಾಡಿನ ರೆಕಾರ್ಡಿಂಗ್ ಅನುಭವದ ಕುರಿತು ಮಾತನಾಡಿದ್ದಾರೆ.
‘ಒಂದೆಲ್ಲ ಒಂದು ದಿನ ನನ್ನ ತಂದೆಗಾಗಿ ಸಿನಿಮಾದಲ್ಲಿ ಹಾಡುತ್ತೇನೆ ಎಂದು ನನಗೆ ತಿಳಿದಿತ್ತು. ‘ಮಾರ್ಕ್’ ಸಿನಿಮಾ ಮೂಲಕ ಅದು ನಿಜವಾಗಿದೆ. ಆದಾಗ್ಯೂ ಇದು ನಿಜ ಎಂದು ನಂಬಲು ನನಗೆ ಇನ್ನಷ್ಟು ದಿನಗಳು ಬೇಕಾಗಬಹುದು. ಈಗಾಗಲೇ ಇಂಗ್ಲಿಷ್‌ನಲ್ಲಿ ನನ್ನ ಹಾಡುಗಳು ಬಿಡುಗಡೆಗೊಂಡಿವೆ. ಆದರೆ ಕನ್ನಡದಲ್ಲಿ ಇದೇ ಮೊದಲ ಗೀತೆ. ಜತೆಗೆ ಅಪ್ಪನಿಗಾಗಿ ಹಾಡಿದ್ದು. ಹೀಗಾಗಿ ಇದು ಯಾವತ್ತಿಗೂ ನನಗೆ ವಿಶೇಷವಾಗಿದ್ದು’ ಎಂದು ಮಾತು ಪ್ರಾರಂಭಿಸಿದರು ಸಾನ್ವಿ.
ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರ ‘ಜಿಮ್ಮೆ’ ಚಿತ್ರ ಈ ಹಿಂದೆ ಘೋಷಣೆಯಾಗಿತ್ತು. ಅದರ ಶೀರ್ಷಿಕೆ ಸಮಾರಂಭದಲ್ಲಿ ಸಾನ್ವಿ ಹಾಡಿ ಗಮನ ಸೆಳೆದಿದ್ದರು. ಆದರೆ ಅದು ಕೂಡ ಇಂಗ್ಲಿಷ್ ಗೀತೆಯಾಗಿತ್ತು. ಈ ಹಿಂದೆ ನಟ ನಾನಿ ಅಭಿನಯದ ‘ಹಿಟ್ 3’ ಚಿತ್ರದ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ಚಿತ್ರದ ‘ಪೊರಟಮೆ 3.0’ಗೆ ಸಾನ್ವಿ ಧ್ವನಿ ನೀಡಿದ್ದರು. ಇದೀಗ ತನ್ನ ತಂದೆ ನಟಿಸಿರುವ ಚಿತ್ರದ ಮೂಲಕವೇ ಸಾನ್ವಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
‘ಮಸ್ತ್ ಮಲೈಕ್’ ಹೈ ಪಿಚ್‌ನ ಹಾಡು. ಹೀಗಾಗಿ ಇದು ನನ್ನ ಸಾಮರ್ಥ್ಯಕ್ಕಲ್ಲ ಅಂದುಕೊಂಡಿದ್ದೆ. ಲೈವ್ ಕಾರ್ಯಕ್ರಮಗಳಲ್ಲಿ ಹಾಡಿದ್ದೆ. ಆದರೆ ಮೈಕ್ ಮುಂದೆ ಹಾಡುವುದು ಸುಲಭವಲ್ಲ. ಅದು ಸಂಗೀತದ ಸಾಕಷ್ಟು ವಿವರಗಳನ್ನು ಕೇಳುತ್ತದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಬಹಳ ವರ್ಷಗಳಿಂದ ಪರಿಚಿತರು. ಹೀಗಾಗಿ ನನಗೆ ಎಲ್ಲವನ್ನೂ ಅರ್ಥಮಾಡಿಸಿದರು. ಈ ಹಿಂದೆ ಕೆಲವು ಕನ್ನಡ ಪದಗಳನ್ನು ಹಾಡುವುದು ಕಷ್ಟವಾಗುತ್ತಿತ್ತು. ಆದರೆ ಅಜನೀಶ್ ಅವರು ಆ ಸಮಸ್ಯೆಯನ್ನು ಪರಿಹರಿಸಿದರು. ಜನ ಈ ಹಾಡನ್ನು ಇಷ್ಟಪಟ್ಟು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವುದು, ಶ್ಲಾಘಿಸುವುದನ್ನು ನೋಡಲು ಖುಷಿಯಾಗುತ್ತಿದೆ’ ಎಂದು ಮಾತಿಗೆ ವಿರಾಮವಿತ್ತರು ಸಾನ್ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.