
ಯೋಗಿ ಬಾಬು, ಶೈನ್ ಟಾಮ್ ಚಾಕೋ, ನವೀನ್ ಚಂದ್ರ
ಚಿತ್ರ: ಎಕ್ಸ್ ಖಾತೆ
ಸುದೀಪ್ ನಟನೆಯ ‘ಮಾರ್ಕ್’ ಇದೇ ಡಿ.25ಕ್ಕೆ ತೆರೆಗೆ ಬರಲಿದೆ. ಹೀಗಾಗಿ ಮಾರ್ಕ್ ಚಿತ್ರತಂಡ ಅಭಿಮಾನಿಗಳಿಗೆ ಅಪ್‌ಡೇಟ್‌ಗಳನ್ನು ನೀಡುತ್ತಿದೆ. ಈಗ ಮಾರ್ಕ್ ಸಿನಿಮಾದಲ್ಲಿ ಯಾರೆಲ್ಲಾ ನಟಿಸಿದ್ದಾರೆ ಎಂಬುವುದರ ಕುರಿತು ಚಿತ್ರತಂಡ ಒಂದೊಂದಾಗಿ ಮಾಹಿತಿ ನೀಡುತ್ತದೆ.
ಸತ್ಯಜ್ಯೋತಿ ಫಿಲ್ಮ್ಸ್ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ದಕ್ಷಿಣ ಭಾರತದ ಜನಪ್ರಿಯ ಹಾಸ್ಯನಟರಲ್ಲಿ ಒಬ್ಬರಾದ ಯೋಗಿ ಬಾಬು ಅವರು ಮಾರ್ಕ್ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ಯೋಗಿ ಬಾಬು ಅವರ ಪೋಸ್ಟರ್ ಅನ್ನು ಸತ್ಯಜ್ಯೋತಿ ಫಿಲ್ಮ್ಸ್ ಹಂಚಿಕೊಂಡು ಸ್ವಾಗತ ಕೋರಿದೆ. ಜೊತೆಗೆ ಮಾರ್ಕ್‌ನ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಪ್ರಭಾವಶಾಲಿ ಅಭಿನಯಕ್ಕೆ ಹೆಸರುವಾಸಿಯಾದ ನಟ ನವೀನ್ ಚಂದ್ರ ಅವರು ಮಾರ್ಕ್ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಖಡಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ ಸ್ವಾಗತಿಸಿದ್ದಾರೆ.
ಮಲಯಾಳಂನ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರು ಕೂಡ ಮಾರ್ಕ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿದ್ದಾರೆ. ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಖಳನಾಯಕನಾಗಿ ನಟಿಸಿ ಅಭಿಮಾನಿಗಳನ್ನು ಗಳಿಸಿದ್ದ ನಟನನ್ನು ಮಾರ್ಕ್ ತಂಡವು ಸಂತೋಷದಿಂದ ಬರಮಾಡಿಕೊಂಡಿದೆ.
‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಮೂಲಕ ‘ಮಾರ್ಕ್’ ಸಿನಿಮಾ ನಿರ್ಮಾಣಗೊಂಡಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಚಿತ್ರಗ್ರಹಣವಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ.
‘ಮ್ಯಾಕ್ಸ್’ ಸಿನಿಮಾದ ರೀತಿಯದ್ದೇ ಆ್ಯಕ್ಷನ್ ಕಥೆ ಈ ಚಿತ್ರದಲ್ಲಿಯೂ ಇದೆ. ಮಕ್ಕಳ ಅಪಹರಣದ ಕಥೆಯನ್ನು ಈ ಸಿನಿಮಾ ಹೊಂದಿದೆ. ಮಕ್ಕಳನ್ನು ಅಪಹರಿಸುವ ಖಳರಿಗೆ ಮಾರ್ಕ್ ಹೇಗೆ ಪಾಠ ಕಲಿಸುತ್ತಾನೆ ಎಂಬುದೇ ಒಟ್ಟಾರೆ ಚಿತ್ರಕಥೆ ಎಂಬುದು ಟ್ರೇಲರ್‌ನಿಂದ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.