ADVERTISEMENT

ಮೋಹನ್‌ಲಾಲ್ ನಟನೆಯ 'ಎಂಪುರಾನ್' ವಿವಾದ: ಕೇರಳ ಹೈಕೋರ್ಟ್ ಮೊರೆ ಹೋದ ಬಿಜೆಪಿ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2025, 9:16 IST
Last Updated 1 ಏಪ್ರಿಲ್ 2025, 9:16 IST
<div class="paragraphs"><p>ನಟ ಮೋಹನ್‌ಲಾಲ್‌ </p></div>

ನಟ ಮೋಹನ್‌ಲಾಲ್‌

   

ತಿರುವನಂತಪುರ: ನಟ ಮೋಹನ್‌ಲಾಲ್‌ ಅವರ ‘ಎಲ್‌2: ಎಂಪುರಾನ್‌’ ಚಿತ್ರದಲ್ಲಿ ಪ್ರಚೋದನಕಾರಿ ವಿಷಯಗಳನ್ನು ತೋರಿಸಲಾಗಿದ್ದು, ತಕ್ಷಣವೇ ಸಿನಿಮಾ ಪ್ರದರ್ಶನಕ್ಕೆ ನಿಷೇಧ ವಿಧಿಸುವಂತೆ ಕೋರಿ ಬಿಜೆಪಿ ನಾಯಕರೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅವರ ‘ಎಲ್‌2: ಎಂಪುರಾನ್‌’ ಚಿತ್ರದಲ್ಲಿ 2002ರ ಗೋಧ್ರಾ ಗಲಭೆ ಮತ್ತು ಭಾರತದ ರಕ್ಷಣಾ ಸಚಿವಾಲಯದ ಬಗ್ಗೆ ಉಲ್ಲೇಖಗಳಿವೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ ಎಂದು ಬಿಜೆಪಿ ನಾಯಕರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಎಂಪುರಾನ್‌ ಚಿತ್ರದ ವಿರುದ್ಧ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ (ಆರ್‌ಎಸ್‌ಎಸ್‌) ತೀವ್ರ ಟೀಕೆ ವ್ಯಕ್ತವಾಗಿರುವ ನಡುವೆ ಚಿತ್ರದಲ್ಲಿ ಕೆಲ ಬದಲಾವಣೆ ಮಾಡಲು ಚಿತ್ರ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಚಿತ್ರದ 17 ವಿವಿಧ ದೃಶ್ಯಗಳಲ್ಲಿ ಬದಲಾವಣೆ ಮಾಡಲು ಯೋಜಿಸಲಾಗಿದ್ದು, ‘ಬಾಬಾ ಬಜರಂಗಿ’ ಎಂದು ಇರುವ ಪಾತ್ರದ ಹೆಸರನ್ನೂ ಬದಲಿಸಲಾಗುತ್ತದೆ. ಮಾರ್ಪಾಡು ಮಾಡಿದ ಬಳಿಕ ಚಿತ್ರವನ್ನು ಸೆನ್ಸಾರ್‌ ಮಂಡಳಿಗೆ ಕಳುಹಿಸಲಾಗುವುದು ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

ನಿರ್ಮಾಪಕರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸಿನಿಮಾ ಕುರಿತ ಇತ್ತೀಚಿನ ಬೆಳವಣಿಗೆ ಕುರಿತು ಮಾತನಾಡಲು ನಿರಾಕರಿಸಿದ ಚಿತ್ರಕಥೆಗಾರ ಮುರಳಿ ಗೋಪಿ ಅವರು, ‘ನಾನೀಗ ಮೌನವಾಗಿರಲು ನಿರ್ಧರಿಸಿದ್ದೇನೆ’ ಎಂದರು.

ಮಲಯಾಳದ ಜನಪ್ರಿಯ ನಟ ಪೃಥ್ವಿರಾಜ್ ಸುಕುಮಾರನ್ ‘ಲೂಸಿಫರ್‌’ ಚಿತ್ರದ ಮೂಲಕ ನಿರ್ದೇಶಕರಾಗಿದ್ದರು. ಮೋಹನ್‌ಲಾಲ್‌ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ 2019ರಲ್ಲಿ ತೆರೆ ಕಂಡಿತ್ತು. ಇದರ ಮುಂದುವರಿದ ಭಾಗವೇ ‘ಎಂಪುರಾನ್’. ಕೇರಳದ ಮುಖ್ಯಮಂತ್ರಿ, ಐಯುಎಫ್‌ ಪಕ್ಷದ ನಾಯಕ ಪಿ.ಕೆ.ರಾಮದಾಸ್‌, ಕೇರಳದ ರಾಜಕೀಯ, ಅಬ್‌ರಾಮ್‌, ಲೂಸಿಫರ್‌ ಎಂದೆಲ್ಲ ಗುರುತಿಸಿಕೊಂಡ ಸ್ಟೀಫನ್‌ ನೆಡುಂಪಲ್ಲಿ ನಡುವಿನ ಕಥೆಯನ್ನು ಹೊಂದಿದ್ದ ‘ಲೂಸಿಫರ್‌’ ಸೂಪರ್‌ ಹಿಟ್‌ ಆಗಿತ್ತು. ಹೀಗಾಗಿ ನಿರ್ದೇಶಕ ಪೃಥ್ವಿರಾಜ್ ಅಲ್ಲಿನ ಪಾತ್ರಗಳನ್ನೇ ಉಳಿಸಿಕೊಂಡು, ಆ ಪಾತ್ರಗಳ ಕಥನವನ್ನು ‘ಎಂಪುರಾನ್’ನಲ್ಲಿ ಮುಂದುವರಿಸಿಕೊಂಡು ಹೋಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.