
ನಟಿ ವಂದಿತಾ, ನಟ ಚಿಕ್ಕಣ್ಣ
ಚಿತ್ರ: ಇನ್‌ಸ್ಟಾಗ್ರಾಂ
ಚಂದನವನದ ನಟ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ‘ಲಕ್ಷ್ಮಿಪುತ್ರ’ ಸಿನಿಮಾಗೆ ಹೊಸಮುಖ ನಂದಿತಾ ಅವರು ನಾಯಕಿಯಾಗಿ ಆಗಮಿಸಿದ್ದಾರೆ. ಈ ಬಗ್ಗೆ ನಟ ಚಿಕ್ಕಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.
ಎ.ಪಿ. ಅರ್ಜುನ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಲಕ್ಷ್ಮಿಪುತ್ರ’ ಚಿತ್ರದಲ್ಲಿ ಚಿಕ್ಕಣ್ಣ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ವಿಜಯ್ ಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕನಾಗಿ ಮಿಂಚಿರುವ ಚಿಕ್ಕಣ್ಣ ಅವರಿಗೆ ನಾಯಕನಾಗಿ ಎರಡನೇ ಸಿನಿಮಾವಾಗಿದೆ.
ಇನ್ನು, ಲಕ್ಷ್ಮಿಪುತ್ರ ಚಿತ್ರತಂಡ ಬಹುತೇಕವಾಗಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದರೂ, ನಟಿ ಯಾರು ಎಂಬ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಆದರೆ, ಈಗ ಖುದ್ದು ಚಿಕ್ಕಣ್ಣ ಅವರೇ ತಮ್ಮ ಸಿನಿಮಾದ ಹೊಸ ನಟಿಯನ್ನು ಪರಿಚಯಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಹಂಚಿಕೊಂಡು ನಟಿಯನ್ನು ಸಿನಿಮಾಗೆ ಕರೆತರಲು ಮಾಡಿದ ಕಸರತ್ತಿನ ಬಗ್ಗೆ ವಿವರಿಸಿದ್ದಾರೆ.
ಚಿಕ್ಕಣ್ಣ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ‘ತಮ್ಮ ಜೊತೆಗೆ ನಾಯಕಿಯಾಗಿ ನಟಿಸೋಕೆ ಮೂವರು ನಟಿಯರು ಒಪ್ಪಲಿಲ್ಲ. ನಾಯಕಿಯನ್ನು ಹುಡುಕಿ ಸುಸ್ತಾಗಿ ದೇವರ ಬಳಿ ಬೇಡಿಕೆ ಇಡುತ್ತಿದ್ದಂತೆ ಹೊಸ ನಟಿ ವಂದಿತಾ ಅವರು ಸಿಕ್ಕರು. ಲಕ್ಷ್ಮಿಪುತ್ರ ಚಿತ್ರತಂಡದ ಪರವಾಗಿ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು ಎಂದಿದ್ದಾರೆ.
ಈ ವಿಡಿಯೊವನ್ನು ಚಿಕ್ಕಣ್ಣ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ಎ.ಪಿ ಅರ್ಜುನ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.