
ನಟ ವಿನೀತ್ ಶ್ರೀನಿವಾಸನ್ ಅವರು ಕೊಚ್ಚಿಯಲ್ಲಿ ತಂದೆ ಶ್ರೀನಿವಾಸನ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿದರು
–ಪಿಟಿಐ ಚಿತ್ರ
ತಿರುವನಂತಪುರಂ: ಮಲಯಾಳಂನ ನಟ, ನಿರ್ದೇಶಕ, ಚಿತ್ರಕಥೆಗಾರ ಶ್ರೀನಿವಾಸನ್ (68) ಅವರು ಶನಿವಾರ ಕೊನೆಯುಸಿರೆಳೆದರು. ಭಾನುವಾರ ಕೊಚ್ಚಿಯಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಶನಿವಾರ ಬೆಳಿಗ್ಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿತು. ಕುಟುಂಬದ ಸದಸ್ಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಕರೆತರುವ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಶ್ರೀನಿವಾಸನ್ ಅವರಿಗೆ ಗಂಡುಮಕ್ಕಳಾದ ವಿನೀತ್ ಶ್ರೀನಿವಾಸನ್, ಧ್ಯಾನ್ ಶ್ರೀನಿವಾಸನ್, ಪತ್ನಿ ವಿಮಲಾ ಇದ್ದಾರೆ. ಮಕ್ಕಳಿಬ್ಬರೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ವಿಡಂಬನೆ ಮೂಲಕ ಜಾಗೃತಿ: 1956ರ ಏಪ್ರಿಲ್ 6ರಂದು ಕಣ್ಣೂರಿನ ತಲಶ್ಶೇರಿಯಲ್ಲಿ ಜನಿಸಿದ ಶ್ರೀನಿವಾಸನ್ ಅವರು ಎಡಪಂಥೀಯರಾಗಿ ಗುರುತಿಸಿಕೊಂಡಿದ್ದರು. ತಮ್ಮ ಸಿದ್ಧಾಂತಗಳಿಂದ ಎಡಪಂಥೀಯರು ವಿಮುಖವಾಗಿದ್ದನ್ನು ತಮ್ಮ ಸಿನಿಮಾಗಳ ಮೂಲಕ ವಿಡಂಬನಾತ್ಮಕವಾಗಿ ತೋರಿಸಿದ್ದರು.
1976ರಲ್ಲಿ ‘ಮಣಿಮುಳಕ್ಕಂ’ ಸಿನಿಮಾದ ಮೂಲಕ ನಟನೆ ಆರಂಭಿಸಿದ ಅವರು, ಐದು ದಶಕಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ, ಹಲವು ಸಿನಿಮಾಗಳಿಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದರು. ತಮ್ಮ ನಟನೆಗೆ ಹಲವು ಬಾರಿ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದರು. ಸಾಮಾಜಿಕ ಕಥಾ ಹಂದರವುಳ್ಳ ‘ಚಿಂತಾವಿಷ್ವೆಯಾಯ ಶ್ಯಾಮಲ’ ಸಿನಿಮಾದ ಚಿತ್ರಕಥೆ, ಕಥೆ ಹಾಗೂ ನಟನೆ ಸೇರಿದಂತೆ ಹಲವು ವಿಭಾಗಗಳಲ್ಲಿ ಕೇರಳ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು.
2007ರಲ್ಲಿ ತೆರೆ ಕಂಡ ‘ಆರಬಿಕಥ’, 1989ರ ‘ವರವೇಲ್ಪು’ 1991ರಲ್ಲಿ ಬಿಡುಗಡೆಯಾದ ‘ಸಂದೇಶಂ’ ಸಿನಿಮಾಗಳು ಅವರ ಚಿತ್ರರಂಗದ ಮಹತ್ವದ ಸಿನಿಮಾಗಳಾಗಿ ಗುರುತಿಸಲ್ಪಟ್ಟಿದೆ.
1989ರ ‘ವಡಕ್ಕುನೊಕ್ಕಿಂಯತಂರಂ’ 1990ರಲ್ಲಿ ಬಂದ ‘ತಲಯಾಣಮಂತ್ರ’, ಹಾಗೂ 1998ರ ‘ಚಿಂತಾವಿಷ್ವೆಯಾಯ ಶ್ಯಾಮಲ’ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾಗಳಾಗಿವೆ. ಕೊನೆಯ ಎರಡು ಸಿನಿಮಾಗಳಿಗೆ ಅವರೇ ಕಥೆ ಬರೆದು, ನಿರ್ದೇಶನವನ್ನು ಮಾಡಿದ್ದರು.
1986ರ ‘ಸನ್ಮನಸ್ಸುಲ್ಲವರ್ಕ್ ಸಮಾಧಾನಂ’, 1987ರ ‘ನಾಡೋಡಿಕಾಟ್ಜ್’, 1988ರ ‘ಪಟ್ಟಣಪ್ರವೇಶಂ’, ಹಾಗೂ 2005ರಲ್ಲಿ ಬಂದ ‘ಉದಯನಾನು ತಾರಂ’ ಸಿನಿಮಾಗಳಲ್ಲಿನ ಅವರ ನಟನೆಯೂ ಪರಿಣಾಮಕಾರಿಯಾಗಿತ್ತು.
2007ರಲ್ಲಿ ತೆರೆಕಂಡ, ಎಂ. ಮೋಹನನ್ ನಿರ್ದೇಶನದ ‘ಕಥಾ ಪರಯುಂಬೋಳ್’ ಮಲಯಾಳ ಚಿತ್ರದಲ್ಲಿ ಅವರ ನಟನೆಯು ಸಹಜಾಭಿನಯದ ಪ್ರಾತ್ಯಕ್ಷಿಕೆಯಂತಿತ್ತು. ಅದೇ ಚಿತ್ರ ‘ಕುಚೇಲನ್’ ಹೆಸರಿನಲ್ಲಿ ತಮಿಳಿನಲ್ಲಿ ಹಾಗೂ ‘ಬಿಲ್ಲು ಬಾರ್ಬರ್’ ಹೆಸರಿನಲ್ಲಿ ಹಿಂದಿಯಲ್ಲಿ ರೀಮೇಕ್ ಆದವು. ತಮಿಳು ರೀಮೇಕ್‌ನಲ್ಲಿ ರಜನೀಕಾಂತ್ ಅಭಿನಯಿಸಿದ್ದರೆ, ಹಿಂದಿಯಲ್ಲಿ ಶಾರುಕ್ ಖಾನ್ ನಟಿಸಿದ್ದರು.
ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಶ್ರೀನಿವಾಸನ್, ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿಯ ಕುರಿತು ಹೆಚ್ಚು ಒಲವು ಹೊಂದಿ ಆ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಶ್ರೀನಿವಾಸನ್ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಸೇರಿದಂತೆ ಹಲವು ನಟ–ನಟಿಯರು ಕಂಬನಿ ಮಿಡಿದಿದ್ದಾರೆ. ಹಲವು ನಟರೂ ಅವರ ಮನೆಗೆ ತೆರಳಿ, ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.