ADVERTISEMENT

ಮಾರ್ನಮಿ ಚಿತ್ರ ಬಿಡುಗಡೆ: ಚಿತ್ರೀಕರಣದ ಕ್ಷಣಗಳನ್ನು ಮೆಲುಕು ಹಾಕಿದ ನಟಿ ಸೋನುಗೌಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 9:58 IST
Last Updated 20 ಫೆಬ್ರುವರಿ 2026, 9:58 IST
   

ರಿಶಿತ್ ಶೆಟ್ಟಿ ನಿರ್ದೇಶನದ  ‘ಮಾರ್ನಮಿ’ ಚಿತ್ರವು ಇಂದು(ಫೆ.20)ರಂದು ಬಿಡುಗಡೆಯಾಗಿದೆ. ಈ ಚಿತ್ರದ ಅನುಭವಗಳನ್ನು ನಟಿ ಸೋನುಗೌಡ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ಈ ಚಿತ್ರ ಕುರಿತು ಪೋಸ್ಟ್ ಹಂಚಿಕೊಂಡ ಸೋನುಗೌಡ, ‘ಈ ಫೋಟೊಗಳು ಮಾರ್ನಾಮಿಯನ್ನು ನೆನಪಿಸುತ್ತವೆ. ಪ್ರತಿಯೊಬ್ಬ ಕಲಾವಿದರಿಗೂ ಅನೇಕ ಬಯಕೆಗಳು ಇರುತ್ತವೆ. ಅದರಂತೆಯೇ ನನಗೂ ಚಿತ್ರರಂಗದಲ್ಲಿ ಪ್ರತಿಯೊಂದು ಪಾತ್ರವನ್ನು ಮಾಡಬೇಕು ಎಂಬ ಆಸೆ ಇದೆ. ನನ್ನ ಪಯಣದ ಹಾದಿಯನ್ನು ಹಿಂತಿರುಗಿ ನೋಡಿದಾಗ ಪೊಲೀಸ್ ಪಾತ್ರ, ಐಎಎಸ್ ಪಾತ್ರ, ಶಿಕ್ಷಕಿ, ಮೀನುಗಾರ್ತಿ ಹೀಗೆ ಅನೇಕ ವಿಭಿನ್ನ ಪಾತ್ರಗಳಿಂದ ನನ್ನನ್ನು ಗುರುತಿಸಬೇಕು’ ಎಂದು ಹೇಳಿಕೊಂಡಿದ್ದಾರೆ. 

‘ಮಾರ್ನಮಿ’ ಚಿತ್ರದಲ್ಲಿ ಅನೇಕರು ನಟಿಸಿದ್ದರೂ ಕೂಡ ಒಂದೇ ದಿನ ಎಲ್ಲರಿಗೂ ಕೆಲಸ ಮಾಡುವ ಅವಕಾಶ ಅಥವಾ ಒಂದೇ ಫ್ರೇಮ್‌ನಲ್ಲಿ ಕಾಣಿಸುವ ಸಮಯ ಒದಗಿಬರಲಿಲ್ಲ. ಆದರೂ ಚಿತ್ರತಂಡದ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ. 

ADVERTISEMENT

‘ಹಿರಿಯ ನಟಿ ರಾಧಾ ಅಮ್ಮ ಅವರೊಂದಿಗೆ ಪರದೆ ಹಂಚಿಕೊಂಡಿರುವುದು ವಿಶೇಷ ಅನುಭವ. 75ನೇ ವಯಸ್ಸಿನಲ್ಲೂ ಅವರ ಕಲಾಪ್ರೇಮ ನನಗೆ ಪ್ರೇರಣೆ. ಆರೋಗ್ಯ ಸರಿಯಾಗಿರದಿದ್ದರೂ ಅವರು ಎಂದಿಗೂ ಸೆಟ್‌ಗೆ ತಡವಾಗಿ ಬರುತ್ತಿರಲಿಲ್ಲ. ಅವರು ನಿಜವಾಗಿಯೂ ಪ್ರೇರಣಾದಾಯಕ’ ಎಂದು ಸೋನುಗೌಡ ಅವರು ಹೇಳಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಿತ್ವಿಕ್ ಮಠದ್ ಹಾಗೂ ಚೈತ್ರಾ ಜೆ.ಅಚಾರ್ ಹಾಗೂ ಹಿರಿಯ ನಟಿ ರಾಧಾ ಅವರು ನಟಿಸಿದ್ದಾರೆ. 

ಚಿತ್ರಕ್ಕೆ ಶಿವಸೇನಾ ಅವರ ಛಾಯಾಚಿತ್ರಗ್ರಹಣ, ಅರ್ಜುನ್ ರಾಜ್ ಅವರ ಸಾಹಸ ನಿರ್ದೇಶನ, ವರದರಾಜ್ ಕಾಮತ್ ಕಲಾನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.