ಮಲ್ಟಿಪ್ಲೆಕ್ಸ್
ರಾಯಿಟರ್ಸ್ ಚಿತ್ರ
ಬೆಂಗಳೂರು: ಸಿನಿಮಾ ಪ್ರಿಯರ ದಿನವೆಂದು ಮೇ 31ರಂದು ಆಚರಿಸಲಾಗುತ್ತಿದೆ. ಹೆಚ್ಚು ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯಲು ಏಕ ಪರದೆ ಹಾಗೂ ಮಲ್ಟಿಪ್ಲೆಕ್ಸ್‌ಗಳು ಜತೆಗೂಡಿ ವಿನೂತನ ಪ್ರಯತ್ನಕ್ಕೆ ಕೈಹಾಕಿವೆ.
ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ಇಂಡಿಯಾ, ಮೂವಿಮ್ಯಾಕ್ಸ್ ಸೇರಿದಂತೆ ಹಲವು ಸಿನಿಮಾ ಚಿತ್ರಮಂದಿರಗಳು ಮೇ 31ರಂದು ಟಿಕೆಟ್ ದರವನ್ನು ₹99ಕ್ಕೆ ನೀಡಲು ನಿರ್ಧರಿಸಿವೆ. ಇದರಿಂದ ದುಬಾರಿ ಶುಲ್ಕದ ಸಿನಿಮಾಗಳನ್ನೂ ಮೇ 31ರಂದು ₹99ಕ್ಕೆ ವೀಕ್ಷಿಸಲು ಚಿತ್ರಮಂದಿರಗಳು ಅವಕಾಶ ಕಲ್ಪಿಸಿವೆ.
ಮಲ್ಟಿಪ್ಲೆಕ್ಸ್ ಸಂಘದ ಅಧ್ಯಕ್ಷ ಹಾಗೂ ಪಿವಿಆರ್ ಐನಾಕ್ಸ್ ಸಿನಿಮಾಸ್‌ನ ಸಿಇಒ ಕಮಲ್ ಗಿಯಾನ್‌ಚಂದಾನಿ ಮಾಹಿತಿ ನೀಡಿ, ‘ದೇಶವ್ಯಾಪಿ ಸುಮಾರು ನಾಲ್ಕು ಸಾವಿರ ಪರದೆಗಳಿವೆ. ಇವುಗಳಲ್ಲಿರುವ ಆರಾಮ ಚೇರ್‌ಗಳನ್ನೊಳಗೊಂಡ ವಿಶೇಷ ಸವಲತ್ತಿನ ಆಸನಗಳನ್ನು ಹೊರತುಪಡಿಸಿ ಉಳಿದ ಶೇ 90ರಿಂದ 95ರಷ್ಟು ಆಸನಗಳ ಬೆಲೆ ಮೇ 31ರಂದು ₹99 ಇರಲಿದೆ’ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
‘ದಕ್ಷಿಣ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಏಕ ಪರದೆ ಚಿತ್ರಮಂದಿರಗಳೂ ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿವೆ. ಕೆಲವೆಡೆ ₹99, ಇನ್ನೂ ಕೆಲವೆಡೆ ₹70ಕ್ಕೂ ಟಿಕೆಟ್ ನೀಡಲಾಗುತ್ತಿದೆ. ಇದು ಒಂದು ದಿನದ ಮಟ್ಟಿಗೆ ನೀಡಲಾಗುತ್ತಿರುವ ಕೊಡುಗೆ. ಇದು ಬಾಕ್ಸ್ ಆಫೀಸ್ ಮೇಲೆ ದೊಡ್ಡ ಪರಿಣಾಮ ಬೀರದಿದ್ದರೂ, ಒಂದಷ್ಟು ಕೊಡುಗೆಯನ್ನಂತೂ ನೀಡಲಿದೆ’ ಎಂದಿದ್ದಾರೆ.
’ಚಿತ್ರಮಂದಿರಗಳಿಗೆ ಬರುವವರಲ್ಲಿ ಯುವಜನತೆಯ ಪಾಲು ಶೇ 50ರಷ್ಟಿದೆ. ಕುಟುಂಬದವರು ಒಟ್ಟಾಗಿ ಬರುವವರ ಸಂಖ್ಯೆ ಶೇ 25ರಿಂದ 30 ಹೀಗೆ ಈ ಕೊಡುಗೆಯಿಂದ ಮೇ 31ರಂದು ಶೇ 70ರಿಂದ 80ರಷ್ಟು ಆಸನಗಳು ಭರ್ತಿಯಾಗುವ ನಿರೀಕ್ಷೆ ಇದೆ’ ಎಂದಿದ್ದಾರೆ.
‘2022ರಲ್ಲಿ ರಾಷ್ಟ್ರೀಯ ಸಿನಿಮಾ ದಿನದ ಅಂಗವಾಗಿ ಇದೇ ರೀತಿಯ ಕೊಡುಗೆಯನ್ನು ಘೋಷಿಸಲಾಗಿತ್ತು. ಸುಮಾರು ₹65 ಲಕ್ಷದಷ್ಟು ಹೆಚ್ಚಿನ ವಹಿವಾಟು ನಡೆದಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಶ್ರೀಕಾಂತ್, ಮ್ಯಾಡ್ ಮ್ಯಾಕ್ಸ್ ಚಿತ್ರಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಗೂ ಉತ್ತಮ ಪ್ರತಿಕ್ರಿಯೆ ಇದೆ. ಮಿಸ್ಟರ್ ಹಾಗೂ ಮಿಸಸ್ ಮಹಿ, ಚೋಟಾ ಭೀಮ್, ಕರ್ಸ್ ಆಫ್ ಡಮ್ಯಾನ್ ಚಿತ್ರಗಳು ಮೇ 31ರಂದು ಬಿಡುಗಡೆಯಾಗುತ್ತಿವೆ’ ಎಂದು ಗಿಯಾನ್‌ಚಂದಾನಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.