
ಅದಿತಿ ಪ್ರಭುದೇವ ಮತ್ತು ಹರ್ಷಿಕಾ ಪೂಣಚ್ಚ
ಚಿತ್ರ: ಇನ್‌ಸ್ಟಾಗ್ರಾಂ
ಮಕ್ಕಳಿರಲವ್ವಾ ಮನೆತುಂಬಾ ಎಂಬ ಮಾತು ಹಳತಾಯಿತು, ಗಂಡು ಮಕ್ಕಳೇ ಬೇಕು ಎಂಬ ಕಾಲವೂ ದೂರವಾಯಿತು. ಈಗ ಏನಿದ್ದರೂ ಮಗಳೊಬ್ಬಳಾದರೂ ಇರಲಿ, ಸಂಭ್ರಮ ಮನೆಮಾಡಿರಲಿ, ಸಂತಸ ತುಂಬಿರಲಿ ಎನ್ನುತ್ತಿರುವ ಕುಟುಂಬಗಳ ಕಾಲವಿದು. ಇಂಥ ಕಾಲದಲ್ಲಿ ಮಗಳನ್ನು ಪಡೆದು ತಾವೆಷ್ಟು ಧನ್ಯ ಎಂದು ಚಂದನವನದ ತಾರೆಯರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟಿ ಅದಿತಿ ಪ್ರಭುದೇವ ಅವರು ‘ಪ್ರಜಾವಾಣಿ ಡಿಜಿಟಲ್’ ಜತೆಗೆ ಮಾತನಾಡಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಹೆಣ್ಣುಮಕ್ಕಳಿಗೂ ಸಮಾನತೆ ಸಿಗಲಿ, ಸಮಾಜದಲ್ಲಿ ಉನ್ನತ ಸ್ಥಾನ ಸಿಗುವಂತಾಗಲಿ ಎನ್ನುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣುಮಗುವಿನ ದಿನವನ್ನು ಆಚರಿಸಲಾಗುತ್ತದೆ.
ಚಂದನವನದ ಚೆಂದದ ನಟಿ ಅದಿತಿ ಪ್ರಭುದೇವ ಅವರು 2024ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ನೇಸರ ಎಂದು ಹೆಸರಿಟ್ಟಿರುವ ನಟಿ, ಹೆಣ್ಣು ಮಕ್ಕಳ ಸಮಾನತೆ, ಮಗಳಾಗಿರುವುದು ಎಷ್ಟು ಖುಷಿ ಇದೆ ಎನ್ನುವ ಬಗ್ಗೆ ವಿವರಿಸಿದ್ದು ಹೀಗೆ...
ಮಗಳೊಂದಿಗೆ ನಟಿ ಅದಿತಿ ಪ್ರಭುದೇವ
ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿದ್ದಾರೆ. ಹೀಗಿದ್ದರೂ ಈಗಿನ ಕಾಲದಲ್ಲಿ ಹೆಣ್ಣುಮಕ್ಕಳನ್ನು ಬೆಳೆಸುವ ಹಂತದಲ್ಲೇ ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕು. ಬೇರೆಯವರು ಹೇಳಿದ್ದನ್ನು ಕೇಳಿ ಎನ್ನುವುದಕ್ಕಿಂತ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಎನ್ನುವುದನ್ನು ಕಲಿಸಬೇಕು. ಹೆಣ್ಣುಮಕ್ಕಳು ಅಪ್ಪಂದಿರನ್ನು ಎಷ್ಟು ಪ್ರೀತಿಸಿದರೂ ಒಂದು ಹಂತದ ನಂತರ ಅಮ್ಮಂದಿರಿಗೆ ತೀರಾ ಹತ್ತಿರವಾಗುತ್ತಾರೆ. ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಜೀವನದ ಉತ್ತಮ ಗೆಳತಿ ಎಂದರೆ ಅಮ್ಮ ಎಂದರೆ ತಪ್ಪಾಗಲಾರದು. ಹೀಗಾಗಿ ನನಗೂ ಜೀವನದಲ್ಲಿ ಅಮ್ಮನಷ್ಟೇ ಆತ್ಮೀಯ ಸ್ನೇಹಿತೆ ಸಿಗಬೇಕೆಂದು ಮಗಳು ಹುಟ್ಟಬೇಕೆಂಬ ಆಸೆ ಇತ್ತು. ಅದು ಆಗಿದೆ. ಹೀಗಾಗಿ ಹೆಣ್ಣು ಮಗುವಿನ ತಾಯಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
ಹೆಣ್ಣುಮಕ್ಕಳಿಗೆ ಬದುಕಲು ಬೇಕಾಗಿರುವುದು ಧೈರ್ಯ, ಸಮಾಜದಲ್ಲಿ ನಡೆಯುವ ಘಟನೆಗಳ ಅರಿವು. ಇವಿದ್ದರೆ ಬದುಕನ್ನು ಕಟ್ಟಿಕೊಳ್ಳಬಲ್ಲರು. ವಿದ್ಯೆಯೊಂದೇ ಇರಬೇಕು ಎನ್ನುವುದಕ್ಕಿಂತ ಬದುಕನ್ನು ಪ್ರೀತಿಸುವ, ಆನಂದಿಸುವ, ನಮಗಾಗಿ ಜೀವಿಸುವ ಕಲೆಯನ್ನು ಹೆಣ್ಣುಮಕ್ಕಳು ಕಲಿತಿರಬೇಕು.
ಈಗಿನ ಹೆಣ್ಣುಮಕ್ಕಳಿಗೆ ಹೇಳುವುದೆಂದರೆ ಜೀವನದಲ್ಲಿ ತಾಳ್ಮೆ ಆದ್ಯತೆಯಾಗಿರಲಿ. ಸಮಾನತೆ ಸಿಗಬೇಕೆಂಬ ಭರದಲ್ಲಿ ಹುಚ್ಚುತನ ಬೇಡ. ಓದು, ಸಾಧನೆ, ಕಲಿಕೆಯಲ್ಲಿ ಸಮಾನತೆ ಸಿಗಲಿ ಎಂದು ಬಯಸಿದರೆ ಬದುಕು ಉಜ್ವಲವಾಗಿರುತ್ತದೆ.
2025ರಲ್ಲಿ ತಾಯಿಯಾದ ನಟಿ ಹರ್ಷಿಕಾ ಪೂಣಚ್ಚ ತಮ್ಮ ಮಗುವಿಗೆ ತ್ರಿದೇವಿ ಪೊನ್ನಕ್ಕ ಎಂದು ನಾಮಕರಣ ಮಾಡಿದ್ದಾರೆ. ಹೆಣ್ಣುಮಕ್ಕಳ ಬೆಳವಣಿಗೆಯ ಬಗ್ಗೆ, ಹೆಣ್ಣು ಮಗುವಿನ ತಾಯಿಯಾದ ಬಗ್ಗೆ ಹಂಚಿಕೊಂಡಿದ್ದು ಹೀಗೆ...
ಮಗಳೊಂದಿಗೆ ನಟಿ ಹರ್ಷಿಕಾ ಪೂಣಚ್ಚ
ಹೆಣ್ಣುಮಕ್ಕಳೆಂದರೇ ಒಂದು ಆಶೀರ್ವಾದ. ಗಂಡಾಗಲೀ, ಹೆಣ್ಣಾಗಲೀ ಮಕ್ಕಳ ಪ್ರತಿ ಬೆಳವಣಿಗೆಯನ್ನೂ ನಾವು ಸಂಭ್ರಮಿಸುತ್ತೇವೆ. ಆದರೆ ಹೆಣ್ಣುಮಕ್ಕಳು ಹುಟ್ಟಿದಾಗಿನಿಂದಲೇ ಹೊರಗಿನ ಪ್ರಪಂಚಕ್ಕಿಂತ ತಂದೆ–ತಾಯಿಯ ಸನಿಹವನ್ನು ಹೆಚ್ಚು ಬಯಸುತ್ತಾರೆ, ಪ್ರೀತಿಸುತ್ತಾರೆ.
ಬದುಕಿನ ಪ್ರತಿ ಹಂತದಲ್ಲೂ ತನ್ನವರನ್ನು ಸಲುಹಲು, ಕಾಪಾಡಿಕೊಳ್ಳಲು ಹೆಣ್ಣುಮಕ್ಕಳು ಬದ್ಧರಾಗಿರುತ್ತಾರೆ. ನನಗೆ ಆರೋಗ್ಯಕರ ಮಗುವಾಗಲಿ ಎನ್ನುವ ಬಯಕೆ ಇತ್ತು. ಅದರಲ್ಲೂ ಹೆಣ್ಣು ಮಗು ಹುಟ್ಟಿರುವುದು ಜೀವನಕ್ಕೆ ಬೆಳಕು ಬಂದಂತಾಗಿದೆ.
ಬದುಕು ಕಟ್ಟಿಕೊಳ್ಳುವ, ಆಶಿಸಿದಂತೆ ಬೆಳೆಯುವ ಸ್ವಾತಂತ್ರ್ಯವನ್ನು ಹೆಣ್ಣುಮಕ್ಕಳಿಗೆ ನೀಡಲೇಬೆಕು. ಅದನ್ನು ನನ್ನ ಮಗಳಿಗೆ ನೀಡುತ್ತೇವೆ. ಅವಳಿಷ್ಟದ ಹಾದಿಯಲ್ಲಿ ಸಾಗಲು ನಮ್ಮ ಪ್ರೋತ್ಸಾಹ ಇರುತ್ತದೆ. ನಾನು ನನ್ನ ತಂದೆ ತಾಯಿಯ ಆಶಯದಂತೆ ಪದವಿ ಓದಿದ್ದೆ. ಆ ಬಳಿಕ ನಟಿಯಾಗುವ ನನ್ನ ಕನಸಿಗೆ ಅವರು ಬೆನ್ನೆಲುಬಾಗಿದ್ದರು. ಈಗ ನಮ್ಮ ಮಗಳಿಗೂ ಉತ್ತಮ ವಿದ್ಯಾಭ್ಯಾಸವಂತೂ ಸಿಗಲೇಬೇಕು. ಅದರ ಹೊರತಾಗಿ ಅವಳ ಆಯ್ಕೆಯ ಅನುಸಾರ ಸಾಗಲಿ ಎಂದೇ ಬಯಸುತ್ತೇವೆ.
ಪ್ರತಿ ಮಕ್ಕಳಿಗೂ ಒಂದು ಹಂತದ ಪ್ರೌಢಿಮೆ ಬಂದಾಗ ಯಾವುದು ತಮ್ಮ ಆಸಕ್ತಿಯ ಕ್ಷೇತ್ರ ಎನ್ನುವುದು ಅರಿವಾಗುತ್ತದೆ. ಹೀಗಾಗಿ ಅವರ ಆಯ್ಕೆ ಸರಿಯಾಗಿದೆಯೋ ಎಂದು ತಿಳಿದು ಜೊತೆ ನಿಲ್ಲುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.