ಚಿತ್ರದ ಪೋಸ್ಟರ್
‘ಕವಲುದಾರಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್ ಇದೀಗ ನಟ ಡಾಲಿ ಧನಂಜಯ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿರಲಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಬಳಿಕ ನಿರ್ದೇಶಕ ಹೇಮಂತ್ ಎಂ.ರಾವ್ ‘ಭೈರವನ ಕೊನೆ ಪಾಠ’ ಕೈಗೆತ್ತಿಕೊಂಡಿದ್ದರು. ನಟ ಶಿವರಾಜ್‌ಕುಮಾರ್ ಅವರು ಆ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾದ ಕಾರಣ ಅದನ್ನು ಹೇಮಂತ್ ಮುಂದೂಡಿ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡರು. ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರಕ್ಕೆ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂಬ ಶೀರ್ಷಿಕೆ ಇಡಲಾಗಿದೆ. ಚಿತ್ರತಂಡವು ಸದ್ಯ ಕಲಾವಿದರ ಹುಡುಕಾಟದಲ್ಲಿದೆ. ಸಿನಿಮಾವನ್ನು ಡಾ.ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
70ರ ದಶಕದ ಶೈಲಿ ಚಿತ್ರದ ವೈಶಿಷ್ಟ್ಯವಾಗಿದ್ದು ಶಿವರಾಜ್‌ಕುಮಾರ್ ಭಿನ್ನವಾದ ಪಾತ್ರದ ಮುಖಾಂತರ ಪ್ರೇಕ್ಷಕರ ಎದುರಿಗೆ ಬರಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ ಮತ್ತು ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನವಿರಲಿದೆ.
ಈ ಸಿನಿಮಾ ಬಳಿಕ ಹೇಮಂತ್ ‘ಭೈರವನ ಕೊನೆ ಪಾಠ’ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ. ‘ಈ ಸಿನಿಮಾದಲ್ಲಿನ ಶಿವರಾಜ್‌ಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ದೈಹಿಕ ಶ್ರಮದ ಅಗತ್ಯವಿದೆ. ಇದರಲ್ಲಿ ಕುದುರೆ ಓಡಿಸಬೇಕು, ತೂಕವುಳ್ಳ ವಸ್ತ್ರಗಳನ್ನು ಧರಿಸಬೇಕು. ಹೀಗಾಗಿ ಅವರು ಈ ಪಾತ್ರಕ್ಕೆ ದೈಹಿಕವಾಗಿ ಸಂಪೂರ್ಣ ಸಿದ್ಧರಿರುವವರೆಗೂ ಮುಂದೂಡುತ್ತಿದ್ದೇವೆ. ಇದೇ ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ’ ಎಂದು ಹೇಮಂತ್ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.