ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ 3ನೇ ಆವೃತ್ತಿಗೆ ಚಾಲನೆ. ನಟ ಕಿಶೋರ್, TPML ನಿರ್ದೇಶಕರಾದ ಸೌಭಾಗ್ಯಲಕ್ಷ್ಮಿ, ನಿರ್ದೇಶಕಿ ಸುಮನ್ ಕಿತ್ತೂರು, ನಟಿ ಪೂಜಾ ಗಾಂಧಿ, ಮುಖ್ಯ ತೀರ್ಪುಗಾರರ ಮಂಡಳಿ ಅಧ್ಯಕ್ಷ ಟಿ.ಎಸ್.ನಾಗಾಭರಣ, ಶೇಷಾದ್ರಿ, TPML ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ತಿಲಕ್ ಕುಮಾರ್ ಇದ್ದರು.
‘ಪ್ರಜಾವಾಣಿ’ ದಿನಪತ್ರಿಕೆ ಹಾಗೂ ಕನ್ನಡ ಚಿತ್ರರಂಗದ ಒಡನಾಟಕ್ಕೆ ಹಲವು ದಶಕಗಳ ಇತಿಹಾಸವಿದೆ. ಚಿತ್ರರಂಗದ ಏಳುಬೀಳುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅದರ ನಾಡಿಮಿಡಿತ ಕೇಳಿಸಿಕೊಳ್ಳುತ್ತಾ, ಅದರೊಳಗಿನ ಸರಿ–ತಪ್ಪುಗಳನ್ನು ಹೊಣೆಗಾರಿಕೆಯಿಂದ ಓದುಗರಿಗೆ ದಾಟಿಸುತ್ತಾ, ಸಿನಿಮಾಗಳನ್ನು ಸಾಂಸ್ಕೃತಿಕ ದೃಷ್ಟಿಯಿಂದಲೂ ನೋಡುವ ಗಾಂಭೀರ್ಯವನ್ನು ‘ಪ್ರಜಾವಾಣಿ’ ಇಂದಿಗೂ ಉಳಿಸಿಕೊಂಡು ಬಂದಿದೆ. ಸದ್ಯ 78 ವರ್ಷಗಳನ್ನು ಪೂರೈಸುತ್ತಿರುವ ‘ಪ್ರಜಾವಾಣಿ’ಯು 2023ರಲ್ಲಿ ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಕಾರ್ಯಕ್ರಮ ಆರಂಭಿಸಿತ್ತು. ಈ ಕಾರ್ಯಕ್ರಮದ ಮೂರನೇ ಆವೃತ್ತಿಯ ಸಮಯ ಇದಾಗಿದೆ.
ಚಂದನವನದ ಘಮಲನ್ನು ಪಸರಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ತನ್ನ ‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ‘ಪ್ರಜಾವಾಣಿ’ ಆರಂಭಿಸಿದ್ದ ಈ ವರ್ಣರಂಜಿತ, ಅರ್ಥಗರ್ಭಿತ ಕಾರ್ಯಕ್ರಮದ ಮೂರನೇ ಆವೃತ್ತಿ ಜೂನ್ 27ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಮೂರನೇ ಆವೃತ್ತಿಯ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಬುಧವಾರ (ಮೇ 28) ಸಿನಿ ಸಮ್ಮಾನದ ಮುಖ್ಯ ತೀರ್ಪುಗಾರರು ಹಾಗೂ ತಾಂತ್ರಿಕ ತೀರ್ಪುಗಾರರ ಸಮ್ಮಿಲನವಿತ್ತು. ಈ ಕಾರ್ಯಕ್ರಮದ ಮುಖಾಂತರ ಮೂರನೇ ಆವೃತ್ತಿಗೆ ಅಧಿಕೃತ ಚಾಲನೆ ದೊರೆಯಿತು.
ಹೊಸಬರು–ಅನುಭವಿಗಳ ಸಮ್ಮಿಲನ
‘ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ತೀರ್ಪುಗಾರರ ಮಂಡಳಿಯಲ್ಲಿ ಕೆಲವು ಹೊಸ ಮುಖಗಳು ಈ ವರ್ಷ ಸೇರ್ಪಡೆಗೊಂಡಿದ್ದವು. ತಮ್ಮದೇ ರಂಗದ ಗೆಳೆಯರ ಬಳಿ ಹರಟುತ್ತಾ, ಸಿನಿ ಸಮ್ಮಾನದ ಪ್ರಕ್ರಿಯೆಗಳ ಬಗ್ಗೆ ಚರ್ಚಿಸುತ್ತಾ ಮೊದಲ ಮತ್ತು ಎರಡನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನೆನಪುಗಳನ್ನು ಅವರೆಲ್ಲರೂ ಮೆಲುಕು ಹಾಕಿದರು. ತೀರ್ಪುಗಾರರ ಸಮ್ಮಿಲನಕ್ಕೂ ಮುನ್ನ ‘ಕನ್ನಡ ಚಿತ್ರರಂಗದ ಸದ್ಯದ ಸ್ಥಿತಿಗತಿ’ ಕುರಿತ ದುಂಡು ಮೇಜಿನ ಸಭೆ ನಡೆಯಿತು. ಈ ಸಭೆಯಲ್ಲಿ ಚರ್ಚೆಗೊಂಡ ಅಂಶಗಳ ಬಗ್ಗೆಯೂ ತೀರ್ಪುಗಾರರು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದರು. ಮೊದಲೆರಡು ಆವೃತ್ತಿಗಳ ವಿಡಿಯೊ ತುಣುಕುಗಳು ಇಡೀ ಸಭೆಗೆ ಚೈತನ್ಯ ತುಂಬಿತು.
ಮೂರನೇ ಆವೃತ್ತಿಯ ಮುಖ್ಯ ತೀರ್ಪುಗಾರರ ಮಂಡಳಿ ಮುಖ್ಯಸ್ಥರಾದ ನಿರ್ದೇಶಕ ಟಿ.ಎಸ್.ನಾಗಾಭರಣ, ಮುಖ್ಯ ತೀರ್ಪುಗಾರರಾದ ನಿರ್ದೇಶಕ ಪಿ.ಶೇಷಾದ್ರಿ, ನಿರ್ದೇಶಕಿ ಡಿ. ಸುಮನ್ ಕಿತ್ತೂರು, ನಟ ಕಿಶೋರ್, ನಟಿ ಪೂಜಾ ಗಾಂಧಿ ಹಾಗೂ ತಾಂತ್ರಿಕ ತೀರ್ಪುಗಾರರ ಮಂಡಳಿಯಲ್ಲಿರುವ ಕಲಾ ನಿರ್ದೇಶಕ ಶಶಿಧರ ಅಡಪ, ಸಿನಿಮಾ ವಿಮರ್ಶಕರಾದ ಗಂಗಾಧರ್ ಮೊದಲಿಯಾರ್ ಹಾಗೂ ಬಾ.ನಾ.ಸುಬ್ರಹ್ಮಣ್ಯ, ಸಂಕಲನಕಾರರಾದ ಎಂ.ಎನ್.ಸ್ವಾಮಿ ಹಾಗೂ ಕೆಂಪರಾಜು, ನೃತ್ಯ ನಿರ್ದೇಶಕಿ ಹರಿಣಿ, ಚಿತ್ರಸಾಹಿತಿ–ನಿರ್ದೇಶಕ ನಾಗೇಂದ್ರ ಪ್ರಸಾದ್, ಛಾಯಾಚಿತ್ರಗ್ರಾಹಕ ಸತ್ಯ ಹೆಗಡೆ, ಸಾಹಿತಿ–ಸಿನಿಮಾ ವಿಮರ್ಶಕಿ ಪ್ರತಿಭಾ ನಂದಕುಮಾರ್, ಧ್ವನಿ ಗ್ರಹಣ ಪರಿಣಿತ ಜಾನ್ಸನ್, ನಿರ್ದೇಶಕರಾದ ಜಯತೀರ್ಥ ಹಾಗೂ ಬಿ.ಎಂ.ಗಿರಿರಾಜ್, ನಟರಾದ ಶಿವಧ್ವಜ್ ಹಾಗೂ ಪಿ.ಡಿ.ಸತೀಶ್‌ಚಂದ್ರ, ಸಾಹಿತಿ–ಸಿನಿಮಾ ವಿಮರ್ಶಕಿ ಸಂಧ್ಯಾರಾಣಿ, ಸಿನಿಮಾ ವಿಮರ್ಶಕಿ ಪ್ರೀತಿ ನಾಗರಾಜ್, ಸಿನಿಮಾ ವಿಮರ್ಶಕ ಹರೀಶ್ ಮಲ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ತಿಲಕ್ ಕುಮಾರ್, ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್, ಪಾರುಲ್ ಶಾ, ಚೈತನ್ಯ ನೆಟ್ಟಕಲ್ಲಪ್ಪ, ಸೌಭಾಗ್ಯಲಕ್ಷ್ಮಿ, ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ.ವಿಶ್ವನಾಥ್, ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಜೆ.ಜಿ.ಕೃಷ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
2024ರಲ್ಲಿ ತೆರೆಕಂಡ ಸಿನಿಮಾಗಳನ್ನು ಮೂರನೇ ಆವೃತ್ತಿಗೆ ಪರಿಗಣಿಸಲಾಗಿದ್ದು, ಶೀಘ್ರದಲ್ಲೇ ನಾಮನಿರ್ದೇಶನ ಪಟ್ಟಿ ಬಿಡುಗಡೆಯಾಗಲಿದೆ. 15 ವಿಭಾಗಗಳಲ್ಲಿ ಅಸಾಧಾರಣ ಪ್ರತಿಭೆಗಳ ಗುರುತಿಸುವಿಕೆ ಈ ಮೂಲಕ ನಡೆಯಲಿದ್ದು, ಜೊತೆಗೆ ಸಾರ್ವಜನಿಕರೂ ಶ್ರೇಷ್ಠ ನಟ, ನಟಿ, ಚಿತ್ರ ಹಾಗೂ ಅತ್ಯುತ್ತಮ ಸಂಗೀತ ನಿರ್ದೇಶಕರನ್ನು ಮತದಾನದ ಮುಖಾಂತರ ಆಯ್ಕೆ ಮಾಡುವ ಪ್ರಕ್ರಿಯೆ ಇರಲಿದೆ.
‘ನಮ್ಮ ಸಿನಿಮಾ–ನಮ್ಮ ಹೆಮ್ಮೆಯ ಕನಸು’
ಮೂರನೇ ಆವೃತ್ತಿಗೆ ಅಧಿಕೃತ ಚಾಲನೆ ನೀಡಿ ಮಾತನಾಡಿದ ಮುಖ್ಯ ತೀರ್ಪುಗಾರರ ಮಂಡಳಿ ಮುಖ್ಯಸ್ಥರಾದ ಟಿ.ಎಸ್.ನಾಗಾಭರಣ, ‘ಸಾಹಿತ್ಯ ಕೃತಿಯನ್ನು, ಚಿತ್ರಕಲೆಯನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಕೆಲವೇ ಅಂಶಗಳಲ್ಲಿ ಮಾತನಾಡಬಹುದು. ಆದರೆ ಸಿನಿಮಾವನ್ನು ಅವಲೋಕಿಸಿ ಶ್ರೇಷ್ಠ ಗುಣಗಳನ್ನು ಹುಡುಕುವುದು ಕಷ್ಟಕರ. ಏಕೆಂದರೆ ಇದೊಂದು ಸಾಂಘಿಕ ಕಾರ್ಯ. ಒಂದು ಕಮ್ಮಿ ಒಂದು ಹೆಚ್ಚು ಎಂದಿಲ್ಲ’ ಎಂದರು.
‘ಪ್ರೇಕ್ಷಕನಿಗೆ ಸಿನಿಮಾ ಮನರಂಜನೆಯ ಜೊತೆಗೆ ಮನೋವಿಸ್ತಾರವನ್ನು ಮಾಡುತ್ತದೆ. ಸಿನಿಮಾದ ಗುಣಾತ್ಮಕ ಅಂಶಗಳನ್ನು ಪರಿಗಣಿಸಿ ಅದಕ್ಕೊಂದು ಸಮ್ಮಾನ ನೀಡಿ ಅದನ್ನು ಚಿರಸ್ಥಾಯಿಯಾಗಿಸುವ ಕೆಲಸ ಈ ಕಾರ್ಯಕ್ರಮದ ಮೂಲಕ ಆಗುತ್ತಿದೆ. ಹೊಸ ಹೊಸ ಯೋಜನೆಗಳು ‘ಸಿನಿ ಸಮ್ಮಾನ’ದ ಪ್ರತಿ ಆವೃತ್ತಿಯಲ್ಲೂ ಕಾರ್ಯಗತವಾಗಿದೆ. ಈ ವರ್ಷ ಕನ್ನಡ ಸಿನಿಮಾಗೆ ನಮ್ಮ ಕೊಡುಗೆ ಏನಿರಬೇಕು ಎನ್ನುವ ಚಿಂತನೆ ನಡೆಯಿತು. ಇದೊಂದು ಸಣ್ಣ ಹೆಜ್ಜೆ. ಇಂತಹ ಸಣ್ಣ ಸಣ್ಣ ಹೆಜ್ಜೆಗಳ ಮೂಲಕ ಭವಿಷ್ಯದಲ್ಲಿ ನಮ್ಮ ಸಿನಿಮಾ ನಮ್ಮ ಹೆಮ್ಮೆಯಾಗಬೇಕು, ವೈಭವವಾಗಬೇಕು ಎನ್ನುವ ಕನಸನ್ನು ಪ್ರಜಾವಾಣಿ ಕಾಣುತ್ತಿದೆ. ಇದು ಅಭಿನಂದನಾರ್ಹ’ ಎಂದರು ನಾಗಾಭರಣ.
ತಾಂತ್ರಿಕ ತೀರ್ಪುಗಾರರಾದ ಜಾನ್ಸನ್ ಶಿವಧ್ವಜ್ ಬಿ.ಎಂ.ಗಿರಿರಾಜ್ ಕೆಂಪರಾಜು ಶಶಿಧರ ಅಡಪ ಪ್ರತಿಭಾ ನಂದಕುಮಾರ್ ಮುಖ್ಯ ತೀರ್ಪುಗಾರರಾದ ಪೂಜಾಗಾಂಧಿ ಪಿ.ಡಿ.ಸತೀಶ್‌ಚಂದ್ರ ಸಂಧ್ಯಾರಾಣಿ ಪ್ರೀತಿ ನಾಗರಾಜ್ ಜಯತೀರ್ಥ ಗಂಗಾಧರ ಮೊದಲಿಯಾರ್ ಮುಖ್ಯ ತೀರ್ಪುಗಾರರಾದ ಸುಮನ್ ಕಿತ್ತೂರು ಬಾ.ನಾ.ಸುಬ್ರಹ್ಮಣ್ಯ ಎಂ.ಎನ್.ಸ್ವಾಮಿ ಹರೀಶ್ ಮಲ್ಯ ಹರಿಣಿ.
ಪ್ರಶಸ್ತಿಯ ವಿಭಾಗಗಳು: ಒಟ್ಟು 25
ಪ್ರತಿಭಾನ್ವಿತ ಕಲಾವಿದರು
ಅತ್ಯುತ್ತಮ ನಟ
ಅತ್ಯುತ್ತಮ ನಟಿ
ವರ್ಷದ ಅತ್ಯುತ್ತಮ ಚಿತ್ರ
ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಪೋಷಕ ನಟಿ
ಅತ್ಯುತ್ತಮ ನಿರ್ದೇಶನ
ಅತ್ಯುತ್ತಮ ಚೊಚ್ಚಲ ನಿರ್ದೇಶನ
ಅತ್ಯುತ್ತಮ ಸಂಗೀತ ನಿರ್ದೇಶನ
ಅತ್ಯುತ್ತಮ ಛಾಯಾಚಿತ್ರಗ್ರಹಣ
ಅತ್ಯುತ್ತಮ ಸಂಕಲನ
ಅತ್ಯುತ್ತಮ ಚಿತ್ರಕಥೆ
ಅತ್ಯುತ್ತಮ ಹಿನ್ನೆಲೆ ಗಾಯಕ
ಅತ್ಯುತ್ತಮ ಹಿನ್ನೆಲೆ ಗಾಯಕಿ
ಅತ್ಯುತ್ತಮ ಗೀತ ಸಾಹಿತ್ಯ
ಅತ್ಯುತ್ತಮ ನೃತ್ಯ ನಿರ್ದೇಶನ
ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು
ಸಾಮಾಜಿಕ ಪರಿಣಾಮ ಬೀರಿದ ಅತ್ಯುತ್ತಮ ಚಿತ್ರ
ಅತ್ಯುತ್ತಮ ನಿರ್ಮಾಣ ವಿನ್ಯಾಸ
ಅತ್ಯುತ್ತಮ ವಿಎಫ್‌ಎಕ್ಸ್, ಪೋಸ್ಟ್ ಪ್ರೊಡಕ್ಷನ್ ಹಾಗೂ ಆ್ಯನಿಮೇಷನ್
ಅತ್ಯುತ್ತಮ ಧ್ವನಿಗ್ರಹಣ ಹಾಗೂ ಶಬ್ದವಿನ್ಯಾಸ
ಜನಮೆಚ್ಚಿದ ವಿಭಾಗದ ಪ್ರಶಸ್ತಿ
ಜನಮೆಚ್ಚಿದ ಸಿನಿಮಾ
ಜನಮೆಚ್ಚಿದ ನಟ
ಜನಮೆಚ್ಚಿದ ನಟಿ
ಜನಮೆಚ್ಚಿದ ಸಂಗೀತ
ಸಂಪಾದಕರ ಆಯ್ಕೆ
ವರ್ಷದ ಗಮನಾರ್ಹ ಸಾಧನೆ
ಕನ್ನಡ ಸಿನಿಮಾಗೆ ಶ್ರೇಷ್ಠ ಕೊಡುಗೆ
ಬಹಳ ದೊಡ್ಡ ತೀರ್ಪುಗಾರರ ಸಾಗರವಿದು. ಈ ಪ್ರಶಸ್ತಿಯ ಪ್ರಕ್ರಿಯೆಯನ್ನು ಗಮನಿಸಿದಾಗ ಯಾರು ಯಾರನ್ನೂ ಶಿಫಾರಸು ಮಾಡುವುದಕ್ಕಾಗಲಿ, ಪ್ರಭಾವ ಬೀರಲು ಸಾಧ್ಯವಿಲ್ಲ. ಇಲ್ಲಿ ಸಿನಿಮಾ ಹಾಗೂ ಅದರ ಗುಣಗಳಷ್ಟೇ ಪ್ರಭಾವ ಬೀರಲು ಸಾಧ್ಯ. ಪಾರದರ್ಶಕವಾಗಿರುವ ಏಕೈಕ ತೀರ್ಪುಗಾರರ ಸಮಿತಿ ಇದ್ದರೆ ಅದು ‘ಪ್ರಜಾವಾಣಿ’ಯ ಈ ‘ಸಿನಿ ಸಮ್ಮಾನ’ದಲ್ಲಿದೆ.–ಟಿ.ಎಸ್.ನಾಗಾಭರಣ, ಮುಖ್ಯ ತೀರ್ಪುಗಾರರ ಮಂಡಳಿ ಮುಖ್ಯಸ್ಥ
ನನಗೆ ವೈಯಕ್ತಿಕವಾಗಿ ಪೈಪೋಟಿಯಲ್ಲಿ ನಂಬಿಕೆ ಇಲ್ಲ. ಆದರೂ ಒಳ್ಳೆಯ ಕೆಲಸವನ್ನು ಗುರುತಿಸಿ, ದಾಖಲಿಸಬೇಕು. ನನ್ನ ಪ್ರಕಾರದಲ್ಲಿ ನಾಮನಿರ್ದೇಶಿತರೆಲ್ಲರೂ ವಿಜೇತರೇ. ಒಳ್ಳೆಯ ಕೆಲಸವನ್ನು ಗುರುತಿಸುವ ಕೆಲಸ ಇಲ್ಲಿ ಪ್ರಾಮಾಣಿಕವಾಗಿ ಆಗುತ್ತದೆ ಎನ್ನುವ ನಂಬಿಕೆ ನನಗಿದೆ.–ಕಿಶೋರ್, ಮುಖ್ಯ ತೀರ್ಪುಗಾರ
ನಮ್ಮನ್ನೆಲ್ಲರನ್ನು ರೂಪಿಸಿದ್ದೇ ಪ್ರಜಾವಾಣಿ. ಇದೇ ಸಂಸ್ಥೆಯ ಪ್ರಶಸ್ತಿ ಕಾರ್ಯಕ್ರಮಕ್ಕೆ ಮುಖ್ಯ ತೀರ್ಪುಗಾರಳಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ತಂದಿದೆ. ಇದು ಬೇರೆ ಪ್ರಶಸ್ತಿಗಳಂತಲ್ಲ. ಇದೀಗ ಚಿತ್ರತಂಡಗಳೇ ‘ಪ್ರಜಾವಾಣಿ ಪ್ರಶಸ್ತಿ ಯಾವಾಗ?’ ಎಂದು ಕೇಳುವ ಹಂತಕ್ಕೆ ಇದು ಬೆಳೆದಿದೆ.–ಡಿ. ಸುಮನ್ ಕಿತ್ತೂರು, ಮುಖ್ಯ ತೀರ್ಪುಗಾರ್ತಿ
ಮೂರನೇ ಆವೃತ್ತಿಗೆ ಕಾಲಿಡುತ್ತಿದ್ದೇವೆ. ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ದೊರಕಿದೆ. ತಾಂತ್ರಿಕ ತೀರ್ಪುಗಾರಳಾಗಿದ್ದ ನಾನು ಈ ವರ್ಷ ಮುಖ್ಯ ತೀರ್ಪುಗಾರಳಾಗಿದ್ದೇನೆ. ಇದರಿಂದ ಜವಾಬ್ದಾರಿಯೂ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಅದ್ಧೂರಿಯಾಗಿ ಈ ವರ್ಷ ಕಾರ್ಯಕ್ರಮ ನಡೆಯಲಿದೆ.–ಪೂಜಾ ಗಾಂಧಿ, ಮುಖ್ಯ ತೀರ್ಪುಗಾರ್ತಿ
ಪ್ರಶಸ್ತಿಯನ್ನು ಯಾವ ಸಂಸ್ಥೆ ಯಾರಿಗೆ ಕೊಡುತ್ತಿದೆ ಎನ್ನುವುದರಲ್ಲಿ ಪ್ರಶಸ್ತಿಯ ಗೌರವ ಅಡಗಿದೆ. ಇಂತಹ ವಿಶ್ವಾಸಾರ್ಹತೆ ಹೊಂದಿರುವ ಸಂಸ್ಥೆಗಳಲ್ಲಿ ಪ್ರಜಾವಾಣಿಯೂ ಒಂದು. ಈ ಪ್ರಶಸ್ತಿಯ ಪ್ರಕ್ರಿಯೆ ಸರಳವಾಗಿಲ್ಲ. ರಾಷ್ಟ್ರಪ್ರಶಸ್ತಿಗೆ ಹತ್ತಿರವಾಗಿ ಈ ಪ್ರಶಸ್ತಿ ಇದೆ. ಹೀಗಾಗಿ ಅರ್ಹರಿಗೆ ಪ್ರಶಸ್ತಿ ದೊರಕುತ್ತಿದೆ.–ಪಿ.ಶೇಷಾದ್ರಿ, ಮುಖ್ಯ ತೀರ್ಪುಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.