ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ‘ಪ್ರಣಯರಾಜ’ ಶ್ರೀನಾಥ್‌ಗೆ ಜೀವಮಾನದ ಸಾಧನೆ ಪ್ರಶಸ್ತಿ

‘ಪ್ರಜಾವಾಣಿ’ ಕನ್ನಡ ಸಿನಿ ಸಮ್ಮಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 22:50 IST
Last Updated 27 ಜೂನ್ 2025, 22:50 IST
   

ಬೆಂಗಳೂರು: ‘ಪ್ರಜಾವಾಣಿ’ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಪ್ರಶಸ್ತಿಯನ್ನು ‘ಪ್ರಣಯರಾಜ’ ಶ್ರೀನಾಥ್‌ ಅವರಿಗೆ ನೀಡಿ ಗೌರವಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ, ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೆಟ್‌ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್‌. ತಿಲಕ್‌ ಕುಮಾರ್‌ ಭಾಗಿಯಾಗಿದ್ದರು.

ಪ್ರಶಸ್ತಿ ಪುರಸ್ಕೃತರಾದ ಶ್ರೀನಾಥ್‌ ಮಾತನಾಡಿ, ‘ಎಂಜಿನಿಯರ್‌, ವೈದ್ಯ, ವಕೀಲ ಆಗಬೇಕು ಎಂಬ ಅನೇಕ ಯೋಚನೆಗಳು ಬಾಲ್ಯದಲ್ಲಿ ಬಂದಿದ್ದವು. ಆದರೆ, ನಟನಾಗಬೇಕು ಎಂಬುದು ಅದಮ್ಯ ಬಯಕೆಯಾಗಿತ್ತು. ಸಿನಿಮಾದಲ್ಲಿ ನಟಿಸಬೇಕಿದ್ದರೆ ಮೊದಲು ನಾಟಕದಲ್ಲಿ ಪಾತ್ರ ಮಾಡಬೇಕಿತ್ತು. ನಾನು ಏಳನೇ ವರ್ಷದಲ್ಲಿ ಕಲಾವಿದನಾದೆ. ಮುಂದೆ ನಾಟಕದಿಂದ ಚಲನಚಿತ್ರ ರಂಗಕ್ಕೆ ಕಾಲಿಟ್ಟೆ. 1969ರಿಂದ ಇಲ್ಲಿಯವರೆಗೆ ನಟಿಸುತ್ತಲೇ ಇದ್ದೇನೆ’ ಎಂದು ನೆನಪು ಮಾಡಿಕೊಂಡರು.

ADVERTISEMENT

‘ನಾನು ಮಾಡಿರುವುದು ಸಣ್ಣ ಕೆಲಸ. ಶ್ರೀನಾಥ್‌ ನಮ್ಮವನು, ನಮ್ಮವನು ಎಂದು ಕನ್ನಡಿಗರು ತಬ್ಬಿಕೊಂಡು ಬೆಳೆಸಿದ್ದಾರೆ. ರಾಜಕುಮಾರ್‌ ಸಹಿತ ಚಿತ್ರರಂಗದ ಹಿರಿಯರೆಲ್ಲ ತಿದ್ದಿ ತೀಡಿದ್ದಾರೆ. ಈಶ್ವರಿ ಪಿಕ್ಚರ್ಸ್‌ನ ವೀರಸ್ವಾಮಿ ಮತ್ತು ಪುಟ್ಟಣ್ಣ ಅವರನ್ನು ಮರೆಯುವಂತಿಲ್ಲ’ ಎಂದು ಚಿತ್ರರಂಗದ ಅನೇಕ ಹಿರಿಯರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ನಿರೂಪಕಿ ಅನುಶ್ರೀ ಅವರು ‘ಆಶಾ’ ಭಂಗದ ಪ್ರಸಂಗದ ಬಗ್ಗೆ ಕೇಳಿದಾಗ ಶ್ರೀನಾಥ್‌ ಅವರು ಹರೆಯದ ಪ್ರೇಮಘಟನೆಯನ್ನು ಬಿಚ್ಚಿಟ್ಟರು. ‘ನನಗೆ 16ನೇ ವಯಸ್ಸಿನಲ್ಲಿ ಆಶಾ ಪರೇಖ್‌ ಮೇಲೆ ಪ್ರೀತಿ ಹುಟ್ಟಿತು. ಅವಳನ್ನು ಕಾಣಬೇಕು. ಅವಳ ಜೊತೆಗೆ ನಟಿಸಬೇಕು ಎಂದು ಬಾಂಬೆಗೆ ಓಡಿದೆ. ಆದರೆ ಭೇಟಿಯಾಗಲು ಸಾಧ್ಯವಾಗಲಿಲ್ಲ. ಕೊನೆಗೆ ಹೇಗೋ ವಾಪಸ್ಸಾದೆ’ ಎಂದು ಹೇಳಿದರು.

‘ಇದಾಗಿ 30 ವರ್ಷಗಳ ಬಳಿಕ ಎಸ್‌. ಬಂಗಾರಪ್ಪ ಕುಟುಂಬ ‘ಶರವೇಗದ ಸರದಾರ’ ಚಿತ್ರ ಮಾಡಲು ಮುಂದಾಗಿತ್ತು. ನನ್ನನ್ನು ತಂದೆ ಪಾತ್ರ ಮಾಡಲು ಅವರು ಕೇಳಿಕೊಂಡರು. ಆಗ ನಾಯಕ ನಟನಾಗಿ ಪ್ರಚಲಿತದಲ್ಲಿದ್ದ ನಾನು ತಂದೆಯ ಪಾತ್ರವೇ ಎಂದು ಕೇಳಿದ್ದೆ. ಆನಂತರ ತಾಯಿ ಪಾತ್ರ ಯಾರು ಎಂದಾಗ ಆಶಾ ಪರೇಖ್‌ ಎಂದುತ್ತರಿಸಿದ್ದರು. ಕೂಡಲೇ ತಂದೆ ಪಾತ್ರ ಮಾಡಲು ಒಪ್ಪಿದೆ. 1958ರಲ್ಲಿ ಯಾರನ್ನು ಹುಡುಕಿಕೊಂಡು ಹೋದಾಗ ಸಿಕ್ಕಿರಲಿಲ್ಲವೋ ಅವರೊಂದಿಗೆ 1988ರಲ್ಲಿ ನಟಿಸುವ ಭಾಗ್ಯ ನನ್ನದಾಯಿತು’ ಎಂದರು.

‘ಇನ್ನೂ 20 ವರ್ಷ ನಟನೆ ಮಾಡುತ್ತೇನೆ. 100ನೇ ವರ್ಷಕ್ಕೆ ಪ್ರಜಾವಾಣಿ ಮತ್ತೆ ನಡೆಸುವ ಕಾರ್ಯಕ್ರಮದಲ್ಲಿ ನೀವೇ ಬಂದು ಸನ್ಮಾನಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶ್ರೀನಾಥ್‌ ಮನವಿ ಮಾಡಿದರು. 

ಶಕ್ತಿ ಇರುವವರೆಗೆ ನಟಿಸಿ: ಸಿದ್ದರಾಮಯ್ಯ

‘ಸಿನಿಮಾರಂಗಕ್ಕೆ ಒಮ್ಮೆ ಬಂದ ಮೇಲೆ ಬಿಡಲಾಗುವುದಿಲ್ಲ. ನೀವು ಶಕ್ತಿ ಇರುವವರೆಗೆ ನಟಿಸುತ್ತಲೇ ಇರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಾಥ್‌ ಅವರಿಗೆ ಹಾರೈಸಿದರು.

‘ಸಿನಿಮಾ ಅಂದರೆ ಮನರಂಜನೆ ಒಂದೇ ಅಲ್ಲ. ಕನ್ನಡದ ಕಂಪು, ನಮ್ಮ ಸಂಸ್ಕೃತಿ, ಕನ್ನಡ ಭಾಷೆಯ ವೈಭವವನ್ನು ಎತ್ತಿ ಹಿಡಿಯುವ ಕೆಲಸ. ಇದನ್ನು ಆಸಕ್ತಿಯಿಂದ ಮಾಡಿಕೊಂಡು ಬಂದಿರುವ ಶ್ರೀನಾಥ್‌ ಅವರು ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿಯೂ ಜನಪರ ಕೆಲಸ ಮಾಡಿದ್ದರು’ ಎಂದರು.

‘ನಾನು ವಿದ್ಯಾರ್ಥಿಯಾಗಿದ್ದಾಗ, ವಕೀಲನಾಗಿದ್ದಾಗ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ರಾಜಕುಮಾರ್‌ ಅವರ ಚಿತ್ರಗಳನ್ನು ಆನಂತರ ನಿಮ್ಮ ಚಿತ್ರಗಳನ್ನು ನೋಡಿ ಆನಂದಿಸಿದ್ದೇನೆ. ಮಂಜುಳಾ ಮತ್ತು ನೀವು ನನ್ನ ಇಷ್ಟದ ಜೋಡಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.