‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯ ಸಮಾರಂಭ ಜೂನ್ 27ರಂದು ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಹೆಸರುಗಳನ್ನು, ನಾಮನಿರ್ದೇಶನಗೊಂಡ ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ವರ್ಷದ ಅತ್ಯುತ್ತಮ ಚಿತ್ರ’ವನ್ನು ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್ ನೋಡಿ. https://www.prajavani.net/cinesamman/season3
ಸಂದೀಪ್ ಸುಂಕದ್ ನಿರ್ದೇಶನದ ಈ ಸಿನಿಮಾ ಭಿನ್ನವಾದ ಶೀರ್ಷಿಕೆಯಿಂದಲೇ ಸೆಳೆದಿತ್ತು. ನಟರಾದ ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅವರು ಹೊಸಬರ ಜೊತೆಗೂಡಿ ಚಿತ್ರಕ್ಕೆ ಇಂಬು ನೀಡಿದ್ದರು. ಅವರ ನಟನೆಯ ಪಯಣಕ್ಕೂ ಈ ಸಿನಿಮಾ ಹೊಸ ತಿರುವು ನೀಡಿತ್ತು. ತಮ್ಮ ಚೊಚ್ಚಲ ಚಿತ್ರದಲ್ಲೇ ನಾಟಕದ ಒಂದೆಳೆಯನ್ನು ಹಿಡಿದು ಭಿನ್ನವಾದ ಒಂದು ಕಥಾಲೋಕವನ್ನು ಸೃಷ್ಟಿಸಿ ಜಿಹ್ವಾನಂದ ನೀಡಿದ್ದರು ಸಂದೀಪ್ ಸುಂಕದ್. ‘ಸುಬ್ಬಣ್ಣ’ನ ‘ದುರ್ಗಾ ಪ್ರಸಾದ್’ ಎಂಬ ಸಣ್ಣ ಶುದ್ಧ ಶಾಕಾಹಾರಿ ಹೋಟೆಲ್‌ನಲ್ಲಿ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ. ಒಂದು ಅಚ್ಚುಕಟ್ಟಾದ ಸಿನಿಮಾ ನೀಡಿ, ಆರಂಭಿಕ ಹೆಜ್ಜೆಯಲ್ಲೇ ಸಿದ್ಧಸೂತ್ರದ ಸಿನಿಮಾ ಜಗತ್ತಿನಿಂದ ಹೊರಗುಳಿದು ಪ್ರಬುದ್ಧತೆ, ನಿರ್ದೇಶನದ ಮೇಲಿನ ಬದ್ಧತೆ ತೋರಿದ್ದರು ಸಂದೀಪ್. ಚಿತ್ರದ ಹಾಡುಗಳು, ಛಾಯಾಚಿತ್ರಗ್ರಹಣ ಸಿನಿಮಾ ಯಶಸ್ಸಿನಲ್ಲಿ ಪ್ರಮುಖ ಭಾಗವಾಗಿತ್ತು.
ಮಿಥಿಲೇಶ್ ಎಡವಲತ್ ನಿರ್ದೇಶನದ ಈ ಚಿತ್ರಕ್ಕೆ ರಾಜ್ ಬಿ.ಶೆಟ್ಟಿ ಸಂಭಾಷಣೆ ಮತ್ತು ಹೆಚ್ಚುವರಿ ಚಿತ್ರಕಥೆ ಬರೆದಿದ್ದರು. ಭಾವನೆಗಳಿಗೆ, ಸಂದೇಶಕ್ಕೆ, ರೂಪಾಂತರಗೊಳ್ಳುವ ಪ್ರಕ್ರಿಯೆ; ಘಟನೆಗಳಿಗಷ್ಟೇ ಆದ್ಯತೆ ನೀಡಿ ಕೆತ್ತಿದ ಈ ಸಿನಿಮಾವು ಬರವಣಿಗೆಯ ಶಕ್ತಿ ಪ್ರದರ್ಶಿಸಿತ್ತು. ಈ ಬರವಣಿಗೆಯೂ ನವೀನವಾಗಿತ್ತು. ನಾಲ್ಕು ಕಥೆಗಳ ಗುಚ್ಛವಾದರೂ ಅದನ್ನು ಪೋಣಿಸಿದ ರೀತಿ ಭಿನ್ನರೂಪ ನೀಡಿತ್ತು. ರಾಜ್ ಬರೆದ ‘ಕಿತ್ತಾಳೆ..’ ಹಾಡು ಅರ್ಥಗರ್ಭಿತವಾಗಿತ್ತು. ರಾಜ್ ಬಿ.ಶೆಟ್ಟಿ, ಲೇಖಾ ನಾಯ್ಡು, ಸೋಮಶೇಖರ್ ಬೋಳೆಗಾಂವ್, ಹನುಮಕ್ಕ ಜೋಡಿಯ ನಟನೆ ಈ ಚಿತ್ರದ ಕಥೆಯ ಬೆನ್ನೆಲುಬು. ಸಂಕಲನ ಈ ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿತ್ತು.
ಶ್ರೀನಿವಾಸ ರಾಜು ನಿರ್ದೇಶನದ ಈ ಸಿನಿಮಾ ಬಿಡುಗಡೆ ಮುನ್ನವೇ ತನ್ನ ಹಾಡುಗಳಿಂದಲೇ ಜನರನ್ನು ತಲುಪಿತ್ತು. ವಿ.ನಾಗೇಂದ್ರ ಪ್ರಸಾದ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ದ್ವಾಪರ’ ಹಾಗೂ ‘ಚಿನ್ನಮ್ಮ’ ಹಾಡುಗಳು ಈ ಚಿತ್ರದ ಯಶಸ್ಸಿನ ಬಹುಪಾಲು ಭಾಗ ಪಡೆದಿದ್ದವು. ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ, ಸಾಧು ಕೋಕಿಲ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಗುಣಮಟ್ಟದಲ್ಲಿ ಹಾಗೂ ರಿಚ್‌ನೆಸ್‌ನಲ್ಲಿ ಉತ್ಕೃಷ್ಟವಾಗಿ ಮೂಡಿಬಂದಿತ್ತು. ಗಣೇಶ್ ಹಾಗೂ ಸಾಧು ಕೋಕಿಲ ಅವರ ಕಾಮಿಡಿ ಟೈಮಿಂಗ್ ಈ ಸಿನಿಮಾದ ಪ್ರಮುಖ ಅಂಶ. ಗಣೇಶ್ ಅವರ ಸಿನಿಮಾಗಳಲ್ಲಿ ಕಾಣಸಿಗುವ ಫ್ಯಾಮಿಲಿ ಎಂಟರ್‌ಟೈನರ್ ಅಂಶಗಳು ಸಿನಿಮಾ ಯಶಸ್ಸಿಗೆ ಕಾರಣವಾದವು.
ಶಿವಮ್ಮ ಯರೇಹಂಚಿನಾಳ
ಬೂಸಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ನ್ಯೂ ಕರೆಂಟ್ಸ್’ ವಿಭಾಗದಲ್ಲಿ ಪ್ರಶಸ್ತಿ ಪಡೆದ, ರಿಷಬ್ ಶೆಟ್ಟಿ ನಿರ್ಮಾಣದ ಸಿನಿಮಾವಿದು. ‘ಕಥಾಸಂಗಮ’ ಸಿನಿಮಾದಲ್ಲಿ ಏಳು ಕಥೆಗಳಲ್ಲಿ ಒಂದು ಕಥೆ ಬರೆದಿದ್ದ ಜೈಶಂಕರ್ ಆರ್ಯರ್ ಈ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾಗಾಗಿ ಇಡೀ ಊರಿನ ಜನರಿಗೇ ನಟನೆಯ ತರಬೇತಿ ನೀಡಿದ ಸಿನಿಮಾ ಇದಾಗಿದೆ. ಹೀಗಾಗಿ ದೃಶ್ಯಗಳು ನೈಜವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಮಣ್ಣಿನ, ಭಾಷೆಯ ಸೊಗಡು ಅಡಕವಾಗಿದೆ. ಶರಣಮ್ಮ ಚೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಗ್ರಾಮೀಣ ಜನರ ವ್ಯವಹಾರದ ಕೌಶಲ, ಆತ್ಮವಿಶ್ವಾಸದ ಕಥೆಯಿದೆ. ಗ್ರಾಮೀಣ ಜಗತ್ತಿನ ಪ್ರತಿನಿಧಿಯಾಗಿ ಪ್ರೇಕ್ಷಕರ ಎದುರಿಗೆ ಬರುವ ಶಿವಮ್ಮ ಚೈನ್ ಮಾರ್ಕೆಟಿಂಗ್ ಕೂಪದ ಕಥೆ ಹೇಳಿದ್ದಾರೆ.
ಕೆರೆಬೇಟೆ
ಮಲೆನಾಡಿನ ವಿಶಿಷ್ಟವಾದ ‘ಕೆರೆಬೇಟೆ’ ಆಚರಣೆಯೊಂದಿಗೆ ಅಲ್ಲಿನ ಪಾತ್ರಗಳನ್ನು ಪರಿಚಯಿಸುತ್ತ, ಬದುಕನ್ನು ಕಟ್ಟಿಕೊಡುವ ಕಥೆ ಹೊಂದಿರುವ ಚಿತ್ರವಿದು. ಚಿತ್ರದ ನಾಯಕ ನಾಗ ಕಳ್ಳನಾಟ ಕುಯ್ದಿದ್ದಕ್ಕೆ ಜೈಲಿಗೂ ಹೋಗಿ ಬಂದಿರುತ್ತಾನೆ. ಮೈ-ಮನಸ್ಸಿನ ತುಂಬ ರೋಷಾವೇಶವನ್ನೇ ತುಂಬಿಕೊಂಡಿರುವ ನಾಗನ ಬದುಕಿಗೆ ಮೀನಾ ಬರುತ್ತಾಳೆ. ನಂತರ ಇದೊಂದು ಜಾತಿ ಬಲೆಯೊಳಗಿನ ಪ್ರೇಮಕಥೆಯಾಗಿ ಬದಲಾಗುತ್ತದೆ. ನಾಗನಾಗಿ ನಾಯಕ ಗೌರಿಶಂಕರ್ ಮೀನಾಳಾಗಿ ಬಿಂದು ನಟನೆ ಗಮನ ಸೆಳೆಯುತ್ತದೆ. ಸುತ್ತಲಿನ ಪರಿಸರ, ಸಂಗೀತ, ಶಬ್ದ ವಿನ್ಯಾಸ, ಕಥೆಯ ನಿರೂಪಣೆಯಿಂದಾಗಿ ಸಿನಿಮಾ ಗಮನ ಸೆಳೆದಿತ್ತು. ರಾಜ್‌ಗುರು ಈ ಚಿತ್ರದ ನಿರ್ದೇಶಕ.
ಬ್ಲಿಂಕ್
ಭಿನ್ನ ಕಥೆಯಿಂದಲೇ ಗಮನ ಸೆಳೆದ ಚಿತ್ರವಿದು. ಟೈಮ್ ಟ್ರಾವೆಲಿಂಗ್ ಕುರಿತ ಸಿನಿಮಾ. ಇಲ್ಲಿ ಕಥಾನಾಯಕ ಅಪೂರ್ವ ಟೈಮ್ ಟ್ರಾವೆಲಿಂಗ್‌ನಲ್ಲಿ ಸಿಲುಕಿಕೊಂಡು ಭೂತ-ವರ್ತಮಾನ-ಭವಿಷ್ಯದ ನಡುವೆ ಸಂಚರಿಸುತ್ತಾನೆ. ತನ್ನ ಹುಟ್ಟಿನ ಕುರಿತ ಅನೇಕ ಸತ್ಯಗಳನ್ನು ತಿಳಿದುಕೊಳ್ಳುತ್ತಾನೆ. ತನ್ನ ಬದುಕಿನಲ್ಲಿ ಹಿಂದೆ ನಡೆದ ಘಟನೆಗಳನ್ನು ಸರಿ ಮಾಡಲು ಹೇಗೆಲ್ಲ ಒದ್ದಾಡುತ್ತಾನೆ ಎಂಬುದೇ ಚಿತ್ರದ ಕಥೆ. ಅಪೂರ್ವನಾಗಿ ದೀಕ್ಷಿತ್ ಶೆಟ್ಟಿ ನಟನೆ ನೆನಪಿನಲ್ಲಿ ಉಳಿಯುವಂತೆ ಇತ್ತು. ಚೊಚ್ಚಲ ನಿರ್ದೇಶಕನಾಗಿ, ವಿಭಿನ್ನ ನಿರೂಪಣೆಯೊಂದಿಗೆ ಶ್ರೀನಿಧಿ ಬೆಂಗಳೂರು ಅವರ ಕೆಲಸ ಗಮನ ಸೆಳೆದಿತ್ತು. ಚಿತ್ರದ ಛಾಯಾಚಿತ್ರಗ್ರಹಣ, ಸಂಕಲನ ಮತ್ತು ಸಂಗೀತ ಸಂಯೋಜನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಕಾಲೇಜು ವಿದ್ಯಾರ್ಥಿಗಳಿಬ್ಬರ ಖಾಸಗಿ ಕ್ಷಣದ ವಿಡಿಯೊ ವೈರಲ್ ಆಗಿ, ನಂತರ ಈ ವಿವಾದ ಜಾತಿ ಸಮಸ್ಯೆಗೆ ತಿರುಗುವ ವಿಶಿಷ್ಟ ಕಥೆಯನ್ನು ಹೊಂದಿರುವ ಚಿತ್ರವಿದು. ನಿರ್ದೇಶಕ ಪೃಥ್ವಿ ಕೊಣನೂರು ತಮ್ಮ ಹಿಂದಿನ ಸಿನಿಮಾಗಳಂತೆ ಇಲ್ಲಿಯೂ ವಿಭಿನ್ನವಾದ ನಿರೂಪಣೆಯಿಂದಲೇ ಚಿತ್ರವನ್ನು ಗಟ್ಟಿಯಾಗಿ ನಿಲ್ಲಿಸಿದ್ದಾರೆ. ಹದಿಹರೆಯದವರ ಸಮಸ್ಯೆಗಳನ್ನು ಬಹಳ ನೈಜವಾಗಿ ಹೇಳಿರುವುದು ಈ ಸಿನಿಮಾದ ಹೆಚ್ಚುಗಾರಿಕೆ. ಎಲ್ಲರ ನಟನೆಯೂ ಬಹಳ ಸಹಜತೆಯಿಂದ ಕೂಡಿದೆ. ಸಾಕಷ್ಟು ಚಿತ್ರೋತ್ಸವಗಳಿಗೆ ಆಯ್ಕೆಗೊಂಡು ಪ್ರಶಸ್ತಿ ಪಡೆದ ಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ ಎರಡನೇ ಬಹುಮಾನ ಪಡೆದಿತ್ತು.
ಕುಬುಸ
ಕುಂ.ವೀರಭದ್ರಪ್ಪ ಅವರ ಕಥೆ ಆಧರಿಸಿದ ಸಿನಿಮಾವಿದು. ರಘು ರಾಮಚರಣ್ ಹೂವಿನಹಡಗಲಿ ನಿರ್ದೇಶನದ ಚಿತ್ರದಲ್ಲಿ ನಟರಾಜ್ ಭಟ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಗ್ರಾಮೀಣ ಭಾಗದಲ್ಲಿ ಕಲ್ಲು ಒಡೆದು ಜೀವನ ಸಾಗಿಸುವ ತಾಯಿ, ತನ್ನ ಮಗನನ್ನು ದೂರದ ಊರಿನಲ್ಲಿ ಓದಿಸುತ್ತಾಳೆ. ನಗರಕ್ಕೆ ಕಾಲೇ ಇಡದ ತಾಯಿ ಬಸ್ಸು ಕೂಡ ಹತ್ತಿರುವುದಿಲ್ಲ. ಮಗನಿಗೆ ಕೆಲಸ ಸಿಕ್ಕ ಬಳಿಕ ಅಮ್ಮನನ್ನು ನಗರಕ್ಕೆ ಕರೆದುಕೊಂಡು ಬರುತ್ತಾನೆ. ಮೊದಲಿನಿಂದಲೂ ‘ಕುಬುಸ’ ಧರಿಸಿ ಅಭ್ಯಾಸವಿರದ ಆಕೆ ನಗರಕ್ಕೆ ಬಂದಾಗ ಹೇಗೆಲ್ಲ ಜನರಿಂದ ಮುಜುಗರಕ್ಕೆ ಒಳಗಾಗುತ್ತಾಳೆ ಎಂಬ ವಿಭಿನ್ನ ಕಥೆಯನ್ನು ಹೊಂದಿರುವ ಚಿತ್ರ ಒಂದಷ್ಟು ಚಿತ್ರೋತ್ಸವಗಳಲ್ಲಿ ಗಮನ ಸೆಳೆದಿತ್ತು. ಜೋಗುತಿ ಮಂಜಮ್ಮ ಈ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್, ಫ್ರೀಡಂ ಹೆಲ್ತಿ ಕುಕ್ಕಿಂಗ್ ಆಯಿಲ್, ಹೋಂಡಾ, ವಿ, ಸದ್ಗುರು ಆಯುರ್ವೇದ, ದಿ ಬೆಂಗಳೂರ್ ಸಿಟಿ ಕೊ–ಆಪರೇಟಿವ್ ಬ್ಯಾಂಕ್, ದಿ ಜನತಾ ಕೊ–ಆಪರೇಟಿವ್ ಬ್ಯಾಂಕ್, ಕೆಎಸ್‌ಡಿಎಲ್.
ಮೊಬಿಲಿಟಿ ಪಾರ್ಟ್‌ನರ್: ಮರ್ಸಿಡೀಸ್ ಬೆಂಜ್–ಅಕ್ಷಯ್ ಮೋಟರ್ಸ್.
ಬ್ಯಾಂಕಿಂಗ್ ಪಾರ್ಟ್‌ನರ್: ಕೆನರಾ ಬ್ಯಾಂಕ್.
ಸ್ಟೈಲ್ ಪಾರ್ಟ್‌ನರ್: ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್.
ಟ್ರಾವೆಲ್ ಪಾರ್ಟ್‌ನರ್: ಟ್ರಾವೆಲ್‌ಮಾರ್ಟ್.
ವಾರ್ಡ್‌ರೋಬ್ ಪಾರ್ಟ್‌ನರ್: ನ್ಯುಮೆನ್.
ನಾಲೆಜ್ ಪಾರ್ಟ್‌ನರ್ಸ್: ಇನ್‌ಸೈಟ್ಸ್‌ಐಎಎಸ್ ಮತ್ತು ಗೀತಂ ಬೆಂಗಳೂರು
ಇನ್‌ಶ್ಯೂರೆನ್ಸ್ ಪಾರ್ಟ್‌ನರ್: ನ್ಯಾಷನಲ್ ಇನ್‌ಶ್ಯೂರೆನ್ಸ್.
ಟೆಲಿಕಾಸ್ಟ್ ಪಾರ್ಟ್‌ನರ್: ಜೀ ಕನ್ನಡ.
ಆಡಿಟ್ ಪಾರ್ಟ್‌ನರ್: ಇ ಆ್ಯಂಡ್ ವೈ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.