ADVERTISEMENT

ಇದು ಫೈನಲ್: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಬಿಡುಗಡೆಯ ಹೊಸ ದಿನಾಂಕ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2021, 9:59 IST
Last Updated 2 ಅಕ್ಟೋಬರ್ 2021, 9:59 IST
ಪುಷ್ಪ ಪೋಸ್ಟರ್
ಪುಷ್ಪ ಪೋಸ್ಟರ್   

ಬೆಂಗಳೂರು: ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಿಡುಗಡೆಯ ಹೊಸ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ.

ಡಿಸೆಂಬರ್ 17 ರಂದು ‘ಪುಷ್ಪ‘ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಈ ವಿಷಯವನ್ನು ಟ್ವಿಟರ್‌ನಲ್ಲಿ ಚಿತ್ರತಂಡ ಪ್ರಕಟಿಸಿದೆ. ಈ ಮೊದಲು ಡಿಸೆಂಬರ್ 25 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅದೇ ದಿನ ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ‘83‘ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ ಒಂದು ವಾರ ಮೊದಲೇ ‘ಪುಷ್ಪ’ಬಿಡುಗಡೆಯಾಗುತ್ತಿದೆ.

ಆಗಸ್ಟ್‌ 13 ಕ್ಕೆ ಬಿಡುಗಡೆಯಾಗಬೇಕಿದ್ದಪುಷ್ಪ ಕೋವಿಡ್ ಕಾರಣದಿಂದ ಒಂದು ಬಾರಿ ಮುಂದೂಡಲಾಗಿತ್ತು.

ADVERTISEMENT

ಆಂಧ್ರಪ್ರದೇಶದ ರಕ್ತಚಂದನ ಚೋರರ ಕಥೆ ಹೊಂದಿರುವ ‘ಪುಷ್ಪ’ದಲ್ಲಿ ಅಲ್ಲು ಅರ್ಜುನ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇವರಿಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಅಲ್ಲದೇ ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು, ವೆನಿಲಾ ಕಿಶೋರ್ ತಾರಾಗಣದಲ್ಲಿದ್ದಾರೆ.

‘ಪುಷ್ಪ’ ಚಿತ್ರತಂಡವು ಕಳೆದ ವಾರವಷ್ಟೇ ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರದಫಸ್ಟ್‌ಲುಕ್‌ ಬಿಡುಗಡೆ ಮಾಡಿತ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ ನೋಡಿದರೆ ರಶ್ಮಿಕಾ ವಿಭಿನ್ನ ಪಾತ್ರ ಮಾಡುತ್ತಿರುವುದು ಗೊತ್ತಾಗುತ್ತದೆ.

‘ಆರ್ಯ’ ಹಾಗೂ ‘ಆರ್ಯ 2’ ಚಿತ್ರಗಳನ್ನು ನಿರ್ದೇಶಿಸಿದ್ದ ಸುಕುಮಾರ್‌ ನಿರ್ದೇಶನದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಯಲ್ಲಿ ತೆರೆಕಾಣಲಿದೆ.

ರಕ್ತಚಂದನ ಚೋರರ ಕಥೆಯುಳ್ಳ ಈಸಿನಿಮಾ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.