
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು –ಪ್ರಜಾವಾಣಿ ಚಿತ್ರ
ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಅಧಿಕ ಅನುಭವ ಹೊಂದಿರುವ ಅವರು, ತಮ್ಮ ಸಿನಿಮಾ ಹಾಗೂ ಬದಲಾಗುತ್ತಿರುವ ಚಿತ್ರೋದ್ಯಮ, ಚಿತ್ರರಂಗದ ಇಂದಿನ ಸ್ಥಿತಿಗತಿ ಕುರಿತು ಮಾತನಾಡಿದ್ದಾರೆ....
‘ನಾಗರಹೊಳೆ’, ‘ಅಂತ’, ‘ಬಂಧನ’ ಚಿತ್ರದಿಂದ ಹಿಡಿದು ‘ಕುರಿಗಳು ಸಾರ್ ಕುರಿಗಳು’, ‘ಕೋತಿಗಳು ಸಾರ್ ಕೋತಿಗಳು’ ಮೊದಲಾದ ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು. 70ರ ದಶಕದಲ್ಲಿ ಸಿನಿಪಯಣ ಪ್ರಾರಂಭಿಸಿದ ಅವರು, ಸದ್ಯ ತುಳುನಾಡಿನ ಕಂಬಳ ಕುರಿತಾದ ಸಿನಿಮಾ ‘ವೀರ ಕಂಬಳ’ದೊಂದಿಗೆ ಮತ್ತೆ ಸುದ್ದಿಯಲ್ಲಿದ್ದಾರೆ.
‘ವೀರ ಕಂಬಳ’ ನನ್ನ ಹಿಂದಿನ ಸಿನಿಮಾಗಳ ರೀತಿಯಲ್ಲಿಯೇ ಬ್ರಿಡ್ಜ್ ಸಿನಿಮಾ. ಜನಕ್ಕೂ ಆಸಕ್ತಿದಾಯಕವಾಗಿದ್ದು, ಒಂದು ಗಟ್ಟಿಯಾದ ಸಂದೇಶವನ್ನು ಹೊಂದಿರುವ ಕಥೆ. ನಾನು ಮೊದಲಿನಿಂದಲೂ ಇದೇ ತತ್ವದಡಿಯಲ್ಲಿ ಸಿನಿಮಾ ಮಾಡಿಕೊಂಡು ಬಂದಿರುವೆ. ಪೂರ್ಣ ಕಮರ್ಷಿಯಲ್ ಕೂಡ ಅಲ್ಲ, ತೀರ ಬೋರ್ ಎನ್ನಿಸುವ ಸಿನಿಮಾವೂ ಅಲ್ಲ. ಎರಡರ ನಡುವೆ ನಿಲ್ಲುವ ಚಿತ್ರ. ಕುಟುಂಬ ಕುಳಿತು ನೋಡಬಹುದಾದ, ಹೊಸತನ ಇರುವ ಕಥೆ. ಕಂಬಳ ಕುರಿತು ಆಳವಾದ ವಿಷಯಗಳನ್ನು ಹೊಂದಿದೆ’ ಎಂದು ಮಾತು ಪ್ರಾರಂಭಿಸಿದರು.
‘ನನ್ನ ಹಿಂದಿನ ಸಿನಿಮಾಗಳ ಕಥೆಗಳನ್ನು ನೋಡಿಕೊಂಡು ಬಂದರೆ, ನಾನು ಪ್ರತಿ ಸಲವೂ ರಿಸ್ಕ್ ತೆಗೆದುಕೊಂಡೇ ಸಿನಿಮಾ ಮಾಡಿರುವೆ. ನಾಯಕನೇ ಖಳನಾಗುವ ಪರಿಕಲ್ಪನೆಯ ‘ಅಂತ’ ಚಿತ್ರವನ್ನು ಆವರೆಗೆ ಯಾರೂ ಪ್ರಯತ್ನಿಸಿರಲಿಲ್ಲ. ‘ನಾ ನಿನ್ನ ಮರೆಯಲಾರೆ’ ಬಳಿಕ ಲಕ್ಷ್ಮಿಯನ್ನು ಆಯ್ಕೆ ಮಾಡಿಕೊಂಡು ಈ ರೀತಿ ಸಿನಿಮಾ ಮಾಡಿದರೆ ಯಾರು ನೋಡುತ್ತಾರೆ ಎಂದು ಮೂದಲಿಸಿದರು. ಬಿಡುಗಡೆ ಬಳಿಕ ಆ ಚಿತ್ರ ಯಾವ ರೀತಿ ಸದ್ದು ಮಾಡಿತು ಎಂಬುದು ಗೊತ್ತೇ ಇದೆ. ‘ಬಂಧನ’ ಸಿನಿಮಾ ಮಾಡಿದಾಗಲೂ ಇದೇ ರೀತಿ ಟೀಕೆ ವ್ಯಕ್ತವಾಗಿತ್ತು. ಯಾವ ದೊಡ್ಡ ನಾಯಕರು ಇಲ್ಲದೆ ಕುರಿ, ಕೋತಿಗಳು ರೀತಿಯ ಸಿನಿಮಾ ಮಾಡಿದೆ. ಅದೇ ರೀತಿಯ ರಿಸ್ಕ್ ‘ವೀರ ಕಂಬಳ’ದಲ್ಲಿ ಕೂಡ ತೆಗೆದುಕೊಂಡಿರುವೆ’ ಎನ್ನುತ್ತಾರೆ ಅವರು.
‘700 ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ಜನಪದ ಕ್ರೀಡೆ. ಬೇರೆ ದೇಶಗಳಲ್ಲಿ ಕೋಣವನ್ನು ಕೊಲ್ಲುತ್ತಾರೆ. ಆದರೆ ತುಳುನಾಡಿನಲ್ಲಿ ಅದೇ ಪ್ರಾಣಿಯನ್ನು ದೈವ ಕ್ರೀಡೆಯಾದ ಕಂಬಳಕ್ಕೆ ಬಳಸುತ್ತಾರೆ. ಬಹಳ ಪ್ರೀತಿಯಿಂದ ಸಾಕುತ್ತಾರೆ. ಆ ಭಾವನೆಗಳು ಎಂದಿಗೂ ಶಾಶ್ವತ’ ಎಂಬುದು ಅವರ ಅಭಿಪ್ರಾಯ.
‘ಪ್ರೇಕ್ಷಕರು ಯಾವತ್ತಿಗೂ ಸರಿ. ಆಯಾಕಾಲಕ್ಕೆ ಆಯಾ ಸಿನಿಮಾಗಳನ್ನು ನೋಡಿದ್ದಾರೆ. ‘ಶೋಲೆ’ಯನ್ನು ಸ್ವೀಕರಿಸಿದ್ದಾರೆ, ‘ಬಂಗಾರದ ಮನುಷ್ಯ’ ಚಿತ್ರವನ್ನು ನೋಡಿದ್ದಾರೆ. ‘ಓಂ’ ಸಿನಿಮಾವನ್ನು ಗೆಲ್ಲಿಸಿದ್ದಾರೆ. ‘ಕೆಜಿಎಫ್’ ಚಿತ್ರವನ್ನು ಮೆಚ್ಚಿದ್ದಾರೆ. ಅವರನ್ನು ದೂಷಿಸುವುದರಲ್ಲಿ ಅರ್ಥವಿಲ್ಲ. ಅವರು ಅಪ್‌ಡೇಟ್ ಆಗುತ್ತಲೇ ಬಂದಿದ್ದಾರೆ.
ಇವತ್ತು ತಂತ್ರಜ್ಞಾನ ಬದಲಾಗಿರಬಹುದು. ಆದರೆ ಮನುಷ್ಯ ಭಾವನೆಗಳು ಬದಲಾಗಿಲ್ಲ. ಯಾವ ತಂತ್ರಜ್ಞಾನ ಬಂದರೂ ಅದನ್ನು ಬದಲಿಸಲು ಸಾಧ್ಯವಿಲ್ಲ. ರಾಮಾಯಣ, ಮಹಾಭಾರತ ತೆಗೆದುಕೊಂಡರೆ ಅದರ ಕಥೆಗಳನ್ನು, ಪಾತ್ರಗಳನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಚಿತ್ರದಲ್ಲಿ ಕಣ್ಣಿರು ಬರಿಸುವ ದೃಶ್ಯವೆಂದರೆ, ಅದು ಮನುಷ್ಯನ ಭಾವನೆ. ಆವತ್ತಿಗೂ ಇವತ್ತಿಗೂ ಅದು ಅಳುವನ್ನು ತರಿಸುವ ಸನ್ನಿವೇಶ. ಅದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ತಂತ್ರಜ್ಞಾನದಲ್ಲಿ ಸಾಕಷ್ಟು ಅಪ್‌ಡೇಟ್ ಆಗಿದೆ. ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಅದರ ಹೊರತಾಗಿ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಹಿಡಿದಿಡುವಲ್ಲಿ ನಾವು ವಿಫಲರಾಗುತ್ತಿದ್ದೇವೆ.
ಬೇರೆ ಭಾಷೆಯ ನಾಲ್ಕಾರು ಸಿನಿಮಾಗಳು, ವೆಬ್ ಸರಣಿಗಳನ್ನು ನೋಡಿಕೊಂಡು ಬಂದು, ಅದನ್ನೇ ನಕಲು ಮಾಡಿ ಇಲ್ಲಿ ಹೇಳಲು ಯತ್ನಿಸುತ್ತೇವೆ. ನಮ್ಮ ನೆಲದ ಕಥೆಗಳನ್ನು, ಮನುಷ್ಯ ಭಾವನೆಗಳನ್ನು ದೃಶ್ಯಗಳ ಮೂಲಕ ದಾಟಿಸಬೇಕು. ಆ ವಿಷಯದಲ್ಲಿ ನಾವು ಸೋಲುತ್ತಿದ್ದೇವೆ. ಸಿನಿಮಾ ಭಾಷೆಯ ಸರಿಯಾದ ಕಲಿಕೆ ಇಲ್ಲದೆ ಸಿನಿಮಾಗಳಾಗುತ್ತಿವೆ. ಹಾಗಾಗಿ ಇಲ್ಲಿ ಯಶಸ್ಸಿನ ಪ್ರಮಾಣ ಕುಸಿಯುತ್ತಿದೆ’ ಎಂಬ ಬೇಸರದೊಂದಿಗೆ ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.