ನಟ ಆಶಿಶ್ ಕಪೂರ್
ನವದೆಹಲಿ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಕಿರುತೆರೆ ನಟ ಆಶಿಶ್ ಕಪೂರ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ.
ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭೂಪಿಂದರ್ ಸಿಂಗ್, ಭವಿಷ್ಯದಲ್ಲಿ ಇದೇ ರೀತಿಯ ಕೃತ್ಯ ಎಸಗಬಹುದು ಎಂದು ಪೊಲೀಸರು ಭಾವಿಸಿದ್ದಾರೆ ಎಂಬ ಮಾತ್ರಕ್ಕೆ ಅವರನ್ನು ಕಂಬಿಗಳ ಹಿಂದೆ ಇಡಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣದ ಇಬ್ಬರು ಸಹ-ಆರೋಪಿಗಳಿಗೆ ಈ ಹಿಂದೆ ಜಾಮೀನು ನೀಡಲಾಗಿದೆ. ದೂರುದಾರರ ಮೇಲೆ ಪ್ರಭಾವ ಬೀರಬಹುದೆಂದು ಪೊಲೀಸರಿಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಅದನ್ನು ಪ್ರಶ್ನಿಸುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ.
ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಮನೆ ಪಾರ್ಟಿಯಲ್ಲಿ ನನಗೆ ಮದ್ಯ ಕುಡಿಸಿ, ಸ್ನಾನಗೃಹಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಈ ಹಿಂದೆ ಆರೋಪಿಸಿದ್ದರು. ಈ ಘಟನೆಯನ್ನು ತನ್ನ ಫೋನ್‌ನಲ್ಲಿ ಚಿತ್ರೀಕರಿಸಿ ನಂತರ ಫೋನ್ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಘಟನೆ ನಡೆದ ಮೂರು ವಾರಗಳ ಬಳಿಕ ಆರೋಪಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಕ್ಕಿಂತ ಮುಂಚೆ ಏಕೆ ನೋಟಿಸ್ ನೀಡಲಿಲ್ಲ. ಏಕೆ ವಿಚಾರಣೆ ನಡೆಸಲಿಲ್ಲ. ಕಳೆದು ಹೋಗಿರುವ ಫೋನ್ ಪತ್ತೆ ಹಚ್ಚಲು ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಆರೋಪಿಯು ಈ ಹಿಂದೆ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ. ಆರೋಪಿ ಪರಾರಿಯಾಗುವ ಅವಕಾಶವಿದೆ ಎಂಬ ಹೇಳಿಕೆಗೆ ಉತ್ತರಿಸಿದ ನ್ಯಾಯಾಲಯ ಪ್ರಕರಣ ದಾಖಲಾದ ದಿನವೇ ಆರೋಪಿ ಪರಾರಿಯಾಗಬೇಕಿತ್ತಲ್ಲವೇ?, ಪೊಲೀಸರು ಶಂಕೆ ವ್ಯಕ್ತಪಡಿಸಿದ ಮಾತ್ರಕ್ಕೆ ಜಾಮೀನು ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣ ಸಂಬಂಧ ವರದಿ ಸಲ್ಲಿಸಲು ಹಾಗೂ ಮುಂದಿನ ಪ್ರಕ್ರಿಯೆಗಳಿಗೆ ಪೊಲೀಸರು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ನ್ಯಾಯಾಲಯದ ಗಮನಕ್ಕೆ ತರಲಾದ ಸಂಗತಿಗಳನ್ನು ಪರಿಶೀಲಿಸಿ ಜಾಮೀನು ಅರ್ಜಿಗೆ ಅರ್ಹತೆ ಹೊಂದಿರುವುದರಿಂದ ಜಾಮೀನನ್ನು ಅನುಮತಿಸಲಾಗಿದೆ ಎಂದು ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.