ADVERTISEMENT

PV Cine Sammana-3: ಚಂದನವನದ ಶೋಮ್ಯಾನ್‌ ರವಿಚಂದ್ರನ್

ಎಸ್.ರಶ್ಮಿ
Published 4 ಜುಲೈ 2025, 0:15 IST
Last Updated 4 ಜುಲೈ 2025, 0:15 IST
<div class="paragraphs"><p>‘ಯಾರಿವಳು ಯಾರಿವಳು.. ಹಾಡಿಗೆ ಹೆಜ್ಜೆ ಹಾಕಿದ ನಟ ರವಿಚಂದ್ರನ್‌ ಹಾಗೂ ನಟಿ ಮಾಲಶ್ರೀ ಪ್ರೇಕ್ಷಕರನ್ನು ಮೂರು ದಶಕಗಳ ಹಿಂದಕ್ಕೆ ಕರೆದೊಯ್ದರು...</p></div>

‘ಯಾರಿವಳು ಯಾರಿವಳು.. ಹಾಡಿಗೆ ಹೆಜ್ಜೆ ಹಾಕಿದ ನಟ ರವಿಚಂದ್ರನ್‌ ಹಾಗೂ ನಟಿ ಮಾಲಶ್ರೀ ಪ್ರೇಕ್ಷಕರನ್ನು ಮೂರು ದಶಕಗಳ ಹಿಂದಕ್ಕೆ ಕರೆದೊಯ್ದರು...

   

ಟ್ರಿಂಗ್‌... ಟ್ರಿಂಗ್‌... ಟ್ರಿಂಗ್‌ ಟ್ರಿಂಗ್‌...

ರವಿಚಂದ್ರನ್‌: ಹಲೋ..

ADVERTISEMENT

ಮಾಲಾಶ್ರೀ: ರೆಡಿ

ಇಂಥದ್ದೊಂದು ಕುತೂಹಲಕಾರಿ ಪ್ರಹಸನ ‘ಪ್ರಜಾವಾಣಿ ಸಿನಿ ಸಮ್ಮಾನ’ದ ಮೂರನೆಯ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ನಡೆಯಿತು.

ಕತೆ ಇಷ್ಟೇ. ಮಾಲಾಶ್ರೀ ಅವರಿಗೆ ರವಿಚಂದ್ರನ್‌, ಹಿಂದೊಮ್ಮೆ ನಾನು ಯಾವತ್ತಾದರೂ ಕಾಲ್‌ ಮಾಡಿದ್ರೆ, ದೂಸರಾ ಮಾತಿಲ್ದೆ ಹೂಂ ಅಥವಾ ರೆಡಿ ಅಂತಷ್ಟೇ ಹೇಳಬೇಕು ಅಂದಿದ್ರಂತೆ. ರಾಮಾಚಾರಿ ಸಿನಿಮಾ ಕುರಿತು ಯೋಜಿಸುವಾಗ ರವಿಚಂದ್ರನ್‌ ಕಾಲ್‌ ಮಾಡಿದ ತಕ್ಷಣ ಮಾಲಾಶ್ರೀ ನಾನು ರೆಡಿ ಅಂದ್ರಂತೆ.

ನಲ್ವತ್ತು ದಿನಗಳಲ್ಲಿ ಸಿನಿಮಾ ಮುಗಿಸಿದ್ದು, ಹನ್ನೆರಡು ದಿನಗಳಲ್ಲಿ ಮಾಲಾಶ್ರೀ ಅವರ ದೃಶ್ಯಗಳ ಚಿತ್ರೀಕರಣ, ನಾಲ್ಕು ದಿನಗಳಲ್ಲಿ ಬೆಳಗಿನ ದೃಶ್ಯಗಳ ಚಿತ್ರೀಕರಣ, ಹೀಗೆ ಎಲ್ಲವೂ ಅವರ ಸ್ಮೃತಿಪಟಲದಲ್ಲಿ ನಿನ್ನೆ ಮೊನ್ನೆ ನಡೆದಿದೆಯೇನೋ ಎಂಬಂತೆ ನಿರೂಪಿಸುತ್ತಿದ್ದರು ರವಿಚಂದ್ರನ್‌.

ಹೆಚ್ಚೂಕಮ್ಮಿ ಮೂರು ದಶಕಗಳ ಹಿಂದಿನ ಕತೆ ಇದು. ಹಿನ್ನೆಲೆಯಲ್ಲಿ ‘ಯಾರಿವಳು.. ಯಾರಿವಳು..’ ಹಾಡು ಬಂದ ತಕ್ಷಣ, ಅದೇ ಕೆನ್ನೆ ಮೇಲೆ ಸೇಬಿರಿಸಿಕೊಂಡಂತೆಯೇ ನಸುನಾಚಿದ, ತುಸುಗುಲಾಬಿ ವರ್ಣಕ್ಕೆ ತಿರುಗಿದ ಮಾಲಾಶ್ರೀ ಹೆಜ್ಜೆ ಹಾಕಿದರು. ರವಿಚಂದ್ರನ್‌ ಜೊತೆಗೂಡಿದರು. ನೆರೆದವರಿಂದ ಜೋರು ಚಪ್ಪಾಳೆ, ಸಿಳ್ಳೆಗಳ ಮೊರೆತ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಹಂಸಲೇಖ ಅವರ ಮುಗುಳ್ನಗು ಮರೆಯಾಗಲೇ ಇಲ್ಲ. ಅದೆಂಥ ಗಳಿಗೆ.. ಆ ಗಳಿಗೆಗೆ ಸಾಕ್ಷಿಯಾದವರು ಅದೆಷ್ಟೋ ಜನರು.

‘ಪ್ರಜಾವಾಣಿ ಸಿನಿ ಸಮ್ಮಾನ–2025’ ಮೂರನೆ ಆವೃತ್ತಿಯ ‘ಕನ್ನಡ ಸಿನಿ ಧ್ರುವತಾರೆ’ ಪ್ರಶಸ್ತಿ ಸ್ವೀಕರಿಸಿ ಮಾತಾಡುವಾಗ ರವಿಚಂದ್ರನ್‌ ಕೆಲ ಗಳಿಗೆ ಭಾವುಕರಾದರು. ಇನ್ನೂ ಕೆಲವು ಗಳಿಗೆ ತಮ್ಮ ಸಂಘರ್ಷವನ್ನು ಹೇಳುತ್ತ ಹೊಂಗನಸಿನ ಯುವಕರಿಗೆ ಸ್ಫೂರ್ತಿಯೇ ಮೈದಳೆದಂತೆ ನಿಂತರು.

ರವಿಚಂದ್ರನ್‌ ಅವರಿಗೆ ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಚೈತನ್ಯ ನೆಟ್ಟಕಲ್ಲಪ್ಪ ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ಟ ಪ್ರಶಸ್ತಿ ಪ್ರದಾನ ಮಾಡಿದರು.

ನಿರೂಪಕ ಅಕುಲ್‌ ಬಾಲಾಜಿ, ರವಿಚಂದ್ರನ್‌ ನೆನಪಿನ ಬತ್ತಳಿಕೆಯಿಂದ ಒಂದೊಂದೇ ಬಾಣ ತೆಗೆಯುವಂತೆ ಪುಸಲಾಯಿಸುತ್ತಲೇ ಇದ್ದರು. ಸಣ್ಣದೊಂದು ಬೈಕಿನ ಪ್ರತಿಕೃತಿ ಅದಕ್ಕಂಟಿದ ಕೋಳಿಮೊಟ್ಟೆ ನೋಡಿದ ತಕ್ಷಣ, ‘ಮಲ್ಲ’ ಸಿನಿಮಾ ಹಾಡಿನ ಚಿತ್ರೀಕರಣವನ್ನು ನೆನಪಿಸಿಕೊಂಡರು.

ಕೋಳಿಪಿಳ್ಳೆಗಳೆಲ್ಲ ಬೆಚ್ಚಗಿರುವ ತಾಣವನ್ನು ಅರಸುತ್ತವೆ. ಒಂದು ಮೂಲೆಯಲ್ಲಿ ಲೈಟ್‌ ಇರಿಸಿದಾಗ ಅದರ ಸುತ್ತ ಅವು ನೆರೆಯುತ್ತಿದ್ದವು. ಸೆಟ್‌ನಲ್ಲಿದ್ದ ಇತರ ಎಲ್ಲ ಲೈಟುಗಳನ್ನೂ ಆರಿಸಿ, ಸ್ಪಾಟ್‌ಲೈಟ್‌ ತಮ್ಮ ಮೇಲಿರಿಸಿದಾಗ ಅವು ಶಿಸ್ತುಬದ್ಧವಾಗಿ ತಮ್ಮ ಕಡೆ ನಡೆದುಕೊಂಡು ಬರುವ ದೃಶ್ಯ ಚಿತ್ರೀಕರಿಸಿದ್ದಾಗಿ ತಿಳಿಸಿದರು. ಸಿನಿಮಾ ನಿರ್ಮಾಣದಲ್ಲಿ ತಂತ್ರಜ್ಞಾನದ ಜೊತೆಗೆ ಇಂಥ ಕಾಮನ್‌ ಸೆನ್ಸ್‌ ಮತ್ತು ಜಾಣ್ಮೆ ಹೆಚ್ಚು ಉಪಯೋಗಕ್ಕೆ ಬರುತ್ತದೆ ಎಂದೂ ಹೇಳುವುದು ಮರೆಯಲಿಲ್ಲ.

‘ರಾಜಾ ರಾಜಾ’ ಹಾಡಿನ ಚಿತ್ರೀಕರಣದ ಸಂದರ್ಭವನ್ನೂ ನೆನಪಿಸಿಕೊಂಡವರು, ರಾಜ್‌ಕುಮಾರ್‌ ಅವರ ಜೊತೆಗೆ ಬಾಲನಟರಾಗಿ ನಟಿಸಿದಾಗ ಅವರಿಂದ ಸಿಕ್ಕ ಅಪ್ಪುಗೆಯ

ಬಿಸುಪು ಅವರನ್ನು ಸಿನಿಮಾರಂಗದತ್ತ ಸೆಳೆಯಿತು ಎಂದೂ ಹೇಳಿದರು. ಅವರ ಆಶೀರ್ವಾದವೇ ಯಶಸ್ಸಿನ ಉತ್ತುಂಗಕ್ಕೆ ಕರೆದೊಯ್ದಿತು ಎಂದು ಹೇಳಿದರು. ಆ ಸಿನಿಮಾ ದೃಶ್ಯದಲ್ಲಿದ್ದಂತೆ ಎಂಟು ನಾಣ್ಯಗಳ ಕುಡಿಕೆಯನ್ನು ಬಿಚ್ಚಿದವರೇ ರವಿಚಂದ್ರನ್‌ ತಮ್ಮ ಸಿನಿಯಾನದ ಹಲವಾರು ನೆನಪುಗಳನ್ನು ಹಂಚಿಕೊಂಡರು.

ಆರನೇ ಕ್ಲಾಸು ಫೇಲು, ಬದುಕಿನಲ್ಲಿ ಪಾಸು

ಓದುವುದರಲ್ಲಿ ಆರನೇ ಕ್ಲಾಸು ಫೇಲು. ಆದ್ರೆ ಸಿನಿಮಾದಿಂದ ಜೀವನ ಕಟ್ಕೊಂಡು, ಉಳಿದವರಿಗೂ ಆ ಅವಕಾಶ ಮಾಡಿಕೊಡುವುದರಲ್ಲಿ ಪಾಸಾದೆ. ಪ್ಯಾನ್‌ ಇಂಡಿಯಾ ಎನ್ನುವ ಪರಿಕಲ್ಪನೆಯನ್ನು ತಂದಿದ್ದೇ ಆ ಕಾಲದಲ್ಲಿ. ಆಗ ಬೇರೆ ಭಾಷೆಗಳಿಂದ ರಿಮೇಕ್‌ ಮಾಡಿದರೂ ಕನ್ನಡದ ನೆಲದ ಕತೆಗೆ ಹೊಂದಿಕೊಳ್ಳುವಂತೆ ಮಾಡಿದೆ. ರಣಧೀರ ನೋಡಿ ಹೀರೊ ಸಿನಿಮಾ ನಿರ್ದೇಶಕ ಸುಭಾಷ್‌ ಘೈ ಸಹ ಅಚ್ಚರಿ ಪಟ್ಟಿದ್ದರು. ನಮ್ಮೊಳಗಿನ ಸೃಜನಶೀಲ ಮನಸನ್ನು ಕ್ರಿಯಾಶೀಲವಾಗಿ ದುಡಿಸಿಕೊಂಡರೆ ಇದೆಲ್ಲವೂ ಸಾಧ್ಯವಾಗುತ್ತದೆ ಎಂದು ರವಿಚಂದ್ರನ್‌ ಹೇಳಿದರು.

ಮೌಲಿಕ ರಿವ್ಯೂ

‘ಪ್ರತಿ ಶುಕ್ರವಾರ ತಪ್ಪದೇ ‘ಪ್ರಜಾವಾಣಿ’ ಓದು. ಸಿನಿಮಾ ವಿಮರ್ಶೆಯಲ್ಲಿರೋದನ್ನ ತಲೆಗೆ ಹಚ್ಕೊ, ಹೊಗಳಿದ್ದರೆ ಕೋಡು ಬರದಿರಲಿ, ಟೀಕಿಸಿದ್ದರೆ ಸರಿಪಡಿಸಿಕೊ ಎಂದು ಅಪ್ಪ ಹೇಳಿದ್ದರು’ ಎಂದ ನಟ ರವಿಚಂದ್ರನ್‌ ಅವರು ತಮ್ಮ ತಂದೆ ವೀರಾಸ್ವಾಮಿ ಅವರನ್ನು ನೆನಪಿಸಿಕೊಳ್ಳುತ್ತಲೇ ‘ಪ್ರಜಾವಾಣಿ’ಯೊಂದಿಗಿನ ತಮ್ಮ ನಂಟನ್ನು ವೀಕ್ಷಕರ ಎದುರಿಗೆ ಬಿಚ್ಚಿಟ್ಟರು.

ಹಾರ್ಟು–ಹಾರ್ಟ್‌ಬೀಟು

ನಾನು ಹಾರ್ಟು, ಹಂಸಲೇಖ ಹಾರ್ಟ್‌ಬೀಟು, ನಮ್ಮಿಬ್ಬರ ಸ್ನೇಹ ಸಾಂಗತ್ಯದ ಬಗ್ಗೆ ಹೆಚ್ಚು ಮಾತಾಡುವುದೇ ಬೇಡ. ನನ್ನ ಸ್ನೇಹ ಮತ್ತು ಪ್ರೀತಿ ಎರಡೂ ಅವರೇನೆ. ನಮ್ಮಿಬ್ಬರ ಸಾಂಗತ್ಯವನ್ನು ಹೀಗೆ ಮಾತ್ರ ಹೇಳಬಲ್ಲೆ ನಾನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.