ADVERTISEMENT

ರಿಷಬ್‌ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ: ಚರ್ಚೆಗೆ ಕಾರಣವಾದ ದೈವ ನರ್ತಕರ ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2025, 10:31 IST
Last Updated 15 ಡಿಸೆಂಬರ್ 2025, 10:31 IST
<div class="paragraphs"><p>ದೈವದ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ</p></div>

ದೈವದ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ

   

ಚಿತ್ರ: ಇನ್‌ಸ್ಟಾಗ್ರಾಂ

ಕಾಂತಾರ ಚಾಪ್ಟರ್‌ 1 ಸಿನಿಮಾ ತಂಡ ಹಾಗೂ ನಟ ರಿಷಬ್‌ ಶೆಟ್ಟಿ ಮಂಗಳೂರಿನಲ್ಲಿ ಇತ್ತೀಚಿಗೆ ನಡೆಸಿದ ಹರಕೆಯ ಕೋಲ ಬಹು ಚರ್ಚಿತ ವಿಷಯವಾಗಿದೆ. ದೈವ ನರ್ತಕ ‘ಸಾಂ‌ಪ್ರದಾಯದ ಕಟ್ಟುಪಾಡು ಮೀರಿ ಅತಿರೇಕವಾಗಿ ವರ್ತಿಸಿದ್ದಾರೆ’ ಎಂಬ ಆರೋಪ ಮತ್ತು ಅದಕ್ಕೆ ಸಂಬಂಧಿಸಿದ ಪರ–ವಿರೋಧ ಚರ್ಚೆಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ.

ADVERTISEMENT

‘ತಮ್ಮಿಂದ ಯಾವುದೇ ಅಚಾತುರ್ಯ ನಡೆದಿಲ್ಲ’ ಎಂದು ದೈವ ನರ್ತಕ ಹಾಗೂ ದೈವಸ್ಥಾನ ಆಡಳಿತ ಮಂಡಳಿಯವರು ಸ್ಪಷ್ಟನೆ ನೀಡುವ ಮೂಲಕ ವಿವಾದ ತಣ್ಣಗಾಗಿಸಲು ಯತ್ನಿಸಿದ್ದಾರೆ. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

ಅಸಲಿಗೆ ಆಗಿದ್ದೇನು?

ಕಾಂತಾರ ಚಾಪ್ಟರ್‌ 1 ಸಿನಿಮಾ ಯಶಸ್ಸಿನ ಕಾರಣ ಏನೆಂದರೆ ಹೊಂಬಾಳೆ ಫಿಲ್ಮ್ಸ್ ಹಾಗೂ ನಟ ರಿಷಬ್‌ ಶೆಟ್ಟಿ ಅವರು ತಮ್ಮ ಪತ್ನಿ, ಮಕ್ಕಳ ಜೊತೆ ಮಂಗಳೂರಿನ ಯೆಯ್ಯಾಡಿಯಲ್ಲಿರುವ ಶ್ರೀ ಅರಸು ಧರ್ಮ ಜಾರಂದಾಯ, ಬಂಟ ಮತ್ತು ವಾರಾಹಿ ದೈವಸ್ಥಾನದಲ್ಲಿ ಇತ್ತೀಚೆಗೆ ಹರಕೆಯ ಕೋಲ ನಡೆಸಿದ್ದರು.

‘ಕಣ್ಣೀರು ಸುರಿಸಬೇಡ; ನಿನ್ನ ಜೊತೆ ನಾನಿದ್ದೇನೆ’ ಎಂದು ದೈವ ಅಭಯ

ಹರಕೆಯ ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿ ದೈವ ನರ್ತನ ಮಾಡುತ್ತ ರಿಷಬ್‌ ಶೆಟ್ಟಿ ಅವರ ಮಡಿಲಿನಲ್ಲಿ ಹೊರಳಾಡಿದ್ದಾರೆ (ಎಣ್ಣೆಬೂಳ್ಯ) ಎಂಬ ವಿಡಿಯೊ ಎಲ್ಲೆಡೆ ಹರಿದಾಡಿತ್ತು. ರಿಷಬ್‌ ಶೆಟ್ಟಿ ಮಡಿಲಲ್ಲಿ ದೈವ ಮಲಗಿದ್ದು ಸರಿಯೇ? ಎಂಬ ಚರ್ಚೆಗಳು ಜೋರಾಗಿ ನಡೆದವು.

‘ದೈವರಾಧಾನೆಗೆ ಲಿಖಿತ ನಿಯಮ ಇಲ್ಲ ಎಂಬುದು ನಿಜ. ಆದರೆ, ಮೌಖಿಕ ಪರಂಪರೆ ಇದೆ. ಅದರದ್ದೇ ಆದ ನಿಯಮವನ್ನು ಪೂರ್ವಜರು ಹಾಕಿದ್ದಾರೆ. ಇಲ್ಲಿ ಮೊದಲ ಬಾರಿಗೆ ಹರಕೆ ಹೇಳುವಾಗ ವಾರಾಹಿ ಪಂಜುರ್ಲಿಗೆ ಅಪಚಾರವೆಸಗಲಾಗಿದೆ. ದೈವ ನರ್ತಕ ಅತಿರೇಕವಾಗಿ ಸಂಪ್ರದಾಯ ಮೀರಿ ವರ್ತಿಸಿದ್ದಾರೆ’ ಎಂದು ತಮ್ಮಣ್ಣ ಶೆಟ್ಟಿ ಎಂಬುವವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಇನ್ನು, ಈ ದೈವ ನರ್ತನದ ವೇಳೆ ಕಾಂತಾರ ಚಿತ್ರ ತಂಡದವರು ಭಾಗವಹಿಸಿದ್ದರು. ದೈವ ನರ್ತನದ ದೃಶ್ಯಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂಬ ಚಿತ್ರಗಳನ್ನು ಹಂಚಿಕೊಂಡ ಕೆಲವರು ‘ದೈವ ನರ್ತಕ ಹರಕೆ ಕೊಟ್ಟವರ ಮಡಿಲಲ್ಲಿ ಮಲಗಿರುವುದು ತಪ್ಪು’ ಎಂದೂ ವಾದಿಸಿದರು.

ಈ ಬೆಳವಣಿಗೆಗಳ ನಡುವೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ದೈವ ನರ್ತಕ ಮುಖೇಶ್‌ ಪಂಬದ, ‘ನಮ್ಮ ಅಜ್ಜ, ಹಿರಿಯರು ಹೇಳಿದ ಉಪದೇಶದ ರೀತಿ ದೈವ ನರ್ತನ ಮಾಡಿದ್ದೇನೆ. ನಾನು ಯಾವುದೇ ಅತಿರೇಕದ ವರ್ತನೆ ತೋರಿಲ್ಲ. ನಾನು ಇರುವುದು ಬಾಡಿಗೆ ಮನೆಯಲ್ಲಿ. ನಮ್ಮ ಮನೆ ಹೇಗಿದೆ ಎಂದು ನೋಡಬಹುದು’ ಎಂದೂ ತಮ್ಮ ಬಗ್ಗೆ ಟೀಕೆ ಮಾಡುವವರಿಗೆ ಉತ್ತರ ನೀಡಿದ್ದಾರೆ.

ಈ ಬಗ್ಗೆ ಶ್ರೀ ಅರಸು ಧರ್ಮ ಜಾರಂದಾಯ ಬಂಟ ಮತ್ತು ವಾರಾಹಿ ದೈವಸ್ಥಾನದ ಪ್ರಮುಖರು, ದೈವ ಪರಿಚಾರಕರೊಂದಿಗೆ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ‌ದೈವಸ್ಥಾನದ ಗೌರವ ಅಧ್ಯಕ್ಷ ರವಿ ಪ್ರಸನ್ನ ಸಿ.ಕೆ. ಹೇಳಿದ್ದು ಹೀಗೆ ‘ದೈವದ ಕಟ್ಟುಕಟ್ಟಳೆಯಲ್ಲಿ ಯಾವುದೇ ಲೋಪ ಆಗಿಲ್ಲ. ನಮಗೆ ದೈವ ನರ್ತಕ, ಪೂಜಾರಿ, ನಮ್ಮ ಮೇಲೆ, ದೈವದ ಮೇಲೆ ಸಂಶಯವಿಲ್ಲ. ನಂಬಿಕೆ ಫಲಿಸುತ್ತದೆ ಎಂಬ ಉದ್ದೇಶದಿಂದ ಆರಾಧನೆ ನಡೆಯುತ್ತಿದೆ. ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ಕಟ್ಟುಕಟ್ಟಳೆ ಇದ್ದು, ನಮ್ಮ ಕಟ್ಟುಕಟ್ಟಳೆ ನಮ್ಮ ಕ್ಷೇತ್ರಕ್ಕೆ ಸೀಮಿತ’ ಎಂದರು.

‘ಕಳೆದ ಬಾರಿ ನಡೆದಿದ್ದ ನೇಮದ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ತನ್ನ ಮಗನ ಹುಟ್ಟುಹಬ್ಬ ಇದೆ ಎಂದು ಪ್ರಸಾದ ತೆಗೆದುಕೊಂಡು ಹೋಗಿದ್ದರು. ದೀಪೋತ್ಸವದ ಸಂದರ್ಭದಲ್ಲಿ ಜಾರಂದಾಯ ದೈವ ಅನುಮತಿ ನೀಡಿತ್ತು. ಹೀಗಾಗಿ ರಿಷಬ್‌ ಶೆಟ್ಟಿ ಇಲ್ಲಿ ಹರಕೆಯ ನೇಮ ಸಲ್ಲಿಸಿದ್ದಾರೆ. ಎಣ್ಣೆ ಬೂಳ್ಯದ ಸಂದರ್ಭದಲ್ಲಿ ದೈವ ಉಗ್ರ ಆವೇಶದಲ್ಲಿತ್ತು. ನಾವು ದೈವ ಕಟ್ಟುವವರಿಗೆ ಹೀಗೆಯೇ ಮಾಡು ಎಂದು ಹೇಳಿಕೊಡುವಂತಿಲ್ಲ. ಈ ವಿಷಯದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರೇ ಹರಕೆ ಕೊಡಲಿ, ಅವರ ಮೇಲೆ ಪ್ರೀತಿಯಿಂದ ಆ ರೀತಿ ಮಾಡುವುದು ಸಹಜ. ಕೆಲವು ಕಡೆ ದೈವ ಇದಕ್ಕಿಂತಲೂ ಉಗ್ರವಾಗಿರುತ್ತದೆ. ಅದು ಆಯಾ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಚಾರ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಟ್ಟದಾಗಿ ಕಮೆಂಟ್‌ ಹಾಕುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದಿದ್ದಾರೆ.

ಕಾಂತಾರ ಸಿನಿಮಾದಲ್ಲಿ ದೈವವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಚರ್ಚೆಯೂ ನಡೆದಿತ್ತು. ಈಗ ಆ ತಂಡ ನಡೆಸಿದ ಕೋಲ ಸೇವೆಯೂ ಚರ್ಚೆಯ ವಿಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.