
ಪ್ರಗತಿ, ರಿಷಬ್ ಶೆಟ್ಟಿ
ಕೃಪೆ: ಇನ್‌ಸ್ಟಾಗ್ರಾಂ
ಚಂದನವನದಲ್ಲಿ ನಟನೆ, ನಿರ್ದೇಶನದ ಮೂಲಕ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದರೆ, ಪತಿಗೆ ಬೆಂಬಲ ನೀಡುವ ಮೂಲಕ, ರಿಷಬ್ ಅವರ ಸಿನಿಮಾಕ್ಕೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ಸುದ್ದಿಯಾದವರು ಪ್ರಗತಿ ರಿಷಬ್ ಶೆಟ್ಟಿ.
ಸದ್ಯ ಈ ಜೋಡಿ ಒಂಬತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಗತಿ ರಿಷಬ್ ಶೆಟ್ಟಿ, ‘ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಬತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ.. ಎಲ್ಲವನ್ನು ತೂಗುವ ಸಮರಸವಿದೆ.. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ.. ಅ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ. ನನ್ನ ಸತಿಯಾಗಿ, ಸಾಥಿಯಾಗಿ, ಸೌಭಾಗ್ಯ ದೇವತೆಯಾಗಿ, ಹಿಡಿಯಷ್ಟಿದ್ದ ಬದುಕನ್ನು ಕಡಲಷ್ಟು ಅಗಾಧವಾಗಿಸಿದ ನಿನಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.
ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿಗೆ ಶುಭಕೋರಿದ ಪ್ರಗತಿ, ‘ಜೀವನದ ಅದ್ಭುತ ಕ್ಷಣಗಳು. ಪ್ರತಿ ಕ್ಷಣವೂ ಒಂದು ಅಧ್ಯಾಯ. ಈ ಅಧ್ಯಾಯಗಳಿಗೆ ಜೀವ ತುಂಬುವ ನಿಮ್ಮ ನಗು ನನ್ನ ಪ್ರೇರಣೆ. ಈ ದಿನ ನಮ್ಮ ವಿವಾಹ ವಾರ್ಷಿಕೋತ್ಸವ. ನಾವು ಒಟ್ಟಿಗೆ ನಡೆಸಿದ ಬದುಕಿನ ಪ್ರಯಾಣವನ್ನು ನೆನಪಿಸಿಕೊಳ್ಳುತ್ತೇನೆ‘ ಎಂದಿದ್ದಾರೆ.
‘ಸಂತಸದ ಕ್ಷಣಗಳು ನಮ್ಮನ್ನು ಹೃದಯಪೂರ್ತಿ ನಗಿಸಿವೆ. ಕಷ್ಟದ ದಿನಗಳು ನಮ್ಮ ಧೈರ್ಯವನ್ನು ಪರೀಕ್ಷಿಸಿವೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ ನಾವು ಒಬ್ಬರ ಕೈ ಹಿಡಿದು ಮುಂದುವರೆದಿದ್ದೇವೆ. ಅದರಿಂದ ಇಂದು ನಾವು ಇನ್ನಷ್ಟು ಬಲಿಷ್ಠರಾಗಿದ್ದೇವೆ. ನೀನು ನನ್ನ ಶಕ್ತಿ, ಪ್ರತಿಯೊಂದು ಕಷ್ಟದಲ್ಲೂ ಮತ್ತು ಪ್ರತಿಯೊಂದು ಹೊಸ ದಿನದಲ್ಲೂ ನನ್ನ ಜೊತೆಯಾದ ಸಂಗಾತಿ. ಇಂದಿಗಿಂತಲೂ ಹೆಚ್ಚು ದೀರ್ಘಕಾಲ ಜೊತೆಸಾಗಬೇಕಿದೆ. ನಿಮ್ಮನ್ನು ನಿನ್ನೆಗಿಂತ ಇಂದು ಹೆಚ್ಚು, ನಾಳೆ ಇನ್ನೂ ಹೆಚ್ಚು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡು ಶುಭಹಾರೈಸಿದ್ದಾರೆ.
ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅವರು ‘ರಿಕ್ಕಿ’, ‘ಕಿರಿಕ್ ಪಾರ್ಟಿ’, ‘ಕಾಂತಾರ’ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಕಾಂತಾರ’, ‘ಗರುಡ ಗಮನ ವೃಷಭ ವಾಹನ’, ‘ಬೆಲ್ ಬಾಟಮ್’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.