ADVERTISEMENT

ರುದ್ರ ರಮಣೀಯ ಆರ್‌ಆರ್‌ಆರ್‌: ಸಾಮಾಜಿಕ ಮಾಧ್ಯಮಗಳಲ್ಲಿ ವೀಕ್ಷಕರ ವಿಮರ್ಶೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 5:27 IST
Last Updated 25 ಮಾರ್ಚ್ 2022, 5:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' (ರೌದ್ರಂ, ರಣಂ, ರುಧಿರಂ) ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಿನಿಮಾ ರಸಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಟರಾದ ರಾಮ್‌ ಚರಣ್‌, ಜೂ.ಎನ್‌ಟಿಆರ್‌ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಮೊದಲ ದಿನವೇ ಸಿನಿಮಾ ವೀಕ್ಷಿಸಿದ ಪುಳಕವನ್ನು ಚಿತ್ರಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಎರಡು ಮೂರು ಸಾಲುಗಳಲ್ಲಿ ಚಿತ್ರ ವಿಮರ್ಶೆ ಮಾಡಿದ್ದಾರೆ.

ಬಾಹುಬಲಿ ಸರಣಿಯ ನಂತರ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾಗೆ ನೂರಾರು ಕೋಟಿ ವೆಚ್ಚ ಮಾಡಲಾಗಿದ್ದು, ಮೂರೂವರೆ ವರ್ಷಗಳ ಕಾಯುವಿಕೆಯೂ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಕೆ.ವಿ.ವಿಜಯೇಂದ್ರ ಪ್ರಸಾದ್‌ ಅವರು ಚಿತ್ರದ ಕಥೆ ಹೆಣೆದಿದ್ದಾರೆ. ಆಲಿಯಾ ಭಟ್‌ ಮತ್ತು ಅಜಯ್‌ ದೇವಗನ್‌ ಸಹ ಕಾಣಿಸಿಕೊಂಡಿದ್ದು, ದೇಶದಾದ್ಯಂತ ಹಲವು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.

ಬ್ರಿಟೀಷರು ಮತ್ತು ಹೈದರಾಬಾದ್‌ ನಿಜಾಮರ ಆಳ್ವಿಕೆಯ ಕಾಲದಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ಸಿನಿಮಾ ಮಾಡಲಾಗಿದೆ. ಇಬ್ಬರು ಕ್ರಾಂತಿಕಾರಿಗಳ ಹೋರಾಟ ಮತ್ತು ಜೀವನದ ಕಥೆಯನ್ನು ಅದ್ಭುತ ಮತ್ತು ಸಾಹಸಮಯ ದೃಶ್ಯಗಳೊಂದಿಗೆ ಕಟ್ಟಿಕೊಡಲಾಗಿದೆ ಎಂದು ಅಭಿಮಾನಿಗಳು ಹಂಚಿಕೊಂಡಿದ್ದಾರೆ. ಸಿನಿಮಾ ಪ್ರಿಯರಲ್ಲಿ ಕೆಲವರು ಗುರುವಾರ ರಾತ್ರಿಯೇ ಸಿನಿಮಾದ ಪ್ರೀಮಿಯರ್‌ ಪ್ರದರ್ಶನ ನೋಡಿದ್ದರೆ; ಹೆಚ್ಚಿನವರು ಶುಕ್ರವಾರ ಬೆಳ್ಳಂಬೆಳಗ್ಗೆ ಪ್ರದರ್ಶನ ನೋಡಿ ಬಂದಿದ್ದಾರೆ.

ADVERTISEMENT

'ಮಾಸ್ಟರ್‌ಪೀಸ್‌', 'ಬಾಹುಬಲಿಗೂ ಮೀರಿದ್ದು...', 'ಇಬ್ಬರೂ ನಾಯಕರ ನಟನೆ, ಪ್ರದರ್ಶನ ಅದ್ಭುತ,..', 'ಬಾಹುಬಲಿ 2ಕ್ಕಿಂತ ಹತ್ತು ಪಾಲು ಮೇಲು..', 'ಈ ಚಿತ್ರಕ್ಕೆ 5ಕ್ಕೆ 5 ಸ್ಟಾರ್‌', 'ಬ್ಲಾಕ್‌ಬಸ್ಟರ್‌...', 'ಚೆನ್ನಾಗಿದೆ, ಆದರೆ ಬಾಹುಬಲಿಯಷ್ಟು ಅಲ್ಲ...',...ಹೀಗೆ ವೀಕ್ಷಕರು ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ವಿಮರ್ಶೆಗೆ ಇಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.