
2024ರಲ್ಲಿ ತೆರೆಕಂಡ ಪ್ರಭಾಸ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಕಲ್ಕಿ ಸಿನಿಮಾದ ಸಿಕ್ವೆಲ್ ಘೋಷಣೆ ಮಾಡಿತ್ತು.
ಕಲ್ಕಿ ಸಿಕ್ವೆಲ್‌ನಲ್ಲಿ ದೀಪಿಕಾ ಪಡುಕೋಣೆ ಇರುವುದಿಲ್ಲವೆಂದು ಕೆಲ ತಿಂಗಳುಗಳ ಹಿಂದೆ ಚಿತ್ರತಂಡ ಹೇಳಿತ್ತು. ಆದರೆ ಅವರ ಪಾತ್ರಕ್ಕೆ ಹೊಸ ನಾಯಕಿಯಾಗಿ ಯಾರು ಬರಲಿದ್ದಾರೆ ಎನ್ನುವ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಈಗ ಕಲ್ಕಿ ಸಿಕ್ವೆಲ್‌ನಲ್ಲಿ ಸಾಯಿ ಪಲ್ಲವಿ ಇರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ನಾಗ್ ಅಶ್ವಿನಿ ನಿರ್ದೇಶನದ ಕಲ್ಕಿ 2898 ಎಡಿ ಸಿಕ್ವೆಲ್‌ನಲ್ಲಿ ಸಾಯಿ ಪಲ್ಲವಿ ಹೆಸರು ಅಂತಿಮವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಈ ಹಿಂದೆ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ‘ಕಲ್ಕಿ 2898 ಎಡಿ–2 ಸಿನಿಮಾಕ್ಕೆ ಬದ್ಧತೆ ಅಗತ್ಯ. ದೀಪಿಕಾ ಪಡುಕೋಣೆ ಅವರು ಸಿನಿಮಾದ ಸಿಕ್ವೆಲ್‌ನ ಭಾಗವಾಗಿರುವುದಿಲ್ಲ’ ಎಂದು ಬರೆದುಕೊಂಡಿತ್ತು.
ವರದಿಗಳ ಪ್ರಕಾರ, ದೀಪಿಕಾ ಅವರು ಮೊದಲ ಭಾಗದ ನಟನೆಗೆ ಕೇಳಿದ್ದಕ್ಕಿಂತ ಶೇ 25 ರಷ್ಟು ಹೆಚ್ಚು ಸಂಭಾವನೆ ಕೇಳಿದ್ದರು, ಅದಕ್ಕೆ ಚಿತ್ರತಂಡ ಒಪ್ಪಲಿಲ್ಲ ಎನ್ನಲಾಗಿದೆ.
ಸಾಯಿ ಪಲ್ಲವಿ ಅವರು ರಾಮಾಯಣ ಚಿತ್ರದಲ್ಲಿ ಸೀತಾದೇವಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸದ್ಯ ಅದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಕಲ್ಕಿ ಸಿನಿಮಾದ ಮೊದಲ ಭಾಗದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮತ್ತು ಪ್ರಭಾಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮಹಾಭಾರತ ಮತ್ತು ವೈಜ್ಞಾನಿಕ ಕಾದಂಬರಿಗಳ ಮಿಶ್ರಣದ ₹600 ಕೋಟಿ ವೆಚ್ಚದ ಈ ಚಿತ್ರವನ್ನು ವೈಜಯಂತಿ ಮೂವೀಸ್ ನಿರ್ಮಿಸಿತ್ತು. ಸಿನಿಮಾ 2ಡಿ ಮತ್ತು 3ಡಿಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.