
ಸಮಂತಾ ರುತ್ ಪ್ರಭು, ನಟ ದಿಗಂತ್
ಚಿತ್ರ: ಇನ್‌ಸ್ಟಾಗ್ರಾಂ
ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ಮತ್ತೆ ನಟನೆಗೆ ಮರಳಿದ್ದಾರೆ. ಕನ್ನಡದ ನಟ ‘ದೂದ್ ಪೇಡಾ’ ಎಂದೇ ಮುದ್ದಾಗಿ ಕರೆಯಿಸಿಕೊಳ್ಳುವ ದಿಗಂತ್ ಮಂಚಾಲೆ ಹಾಗೂ ಸಮಂತಾ ನಟನೆಯಲ್ಲಿ ಮೂಡಿಬರುತ್ತಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟ್ರೇಲರ್ ನಿನ್ನೆ (ಜ.9) ಶುಕ್ರವಾರದಂದು ಬಿಡುಗಡೆಯಾಗಿದೆ.
ಈ ಬಗ್ಗೆ ಖುದ್ದು ನಟಿ ಸಮಂತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮುಂಬರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗಿದ್ದಾರೆ. ಈಗಾಗಲೇ ಟ್ರೇಲರ್ ವೀಕ್ಷಿಸಿದವರು ನಟಿ ಸಮಂತಾ ನಟನೆಯನ್ನು ಹಾಡಿ ಹೊಗಳುತ್ತಿದ್ದಾರೆ.
ಟ್ರೇಲರ್‌ನಲ್ಲಿ ನಟಿಯ ಮುದ್ದತೆ, ಸಾಹಸ ದೃಶ್ಯಗಳು ಎಲ್ಲರೂ ಅಚ್ಚರಿ ಪಡುವಂತೆ ಮಾಡಿದೆ. ಜೊತೆಗೆ ಪತಿ ಜೊತೆಗೆ ಅತ್ತೆ-ಮಾವನ ಮನೆಗೆ ಆಗಮಿಸಿದ ಸಮಂತಾ ಒಂದು ವಾರದೊಳಗೆ ಅವರ ವಿಶ್ವಾಸ ಗಳಿಸುತ್ತೇನೆ ಎಂದು ಭರವಸೆ ನೀಡುತ್ತಾರೆ. ಪರಿಪೂರ್ಣವಾಗಿ ಸೊಸೆಯಾಗಲು ಸತತ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಗಲಿನಲ್ಲಿ ಮಾತು ಬಾರದಂತೆ ನಟಿಸಿರುವ ಸಮಂತಾ, ರಾತ್ರಿಯಾಗುತ್ತಿದ್ದಂತೆ ಕಾಳಿ ಸ್ವರೂಪ ತಾಳುತ್ತಾರೆ. ಅವರು ಗೂಂಡಾಗಳನ್ನು ಒಂಟಿಯಾಗಿ ಹೊಡೆದುರುಳಿಸುವುದು, ಗುಂಡು ಹಾರಿಸಿ ಅವರನ್ನು ಕೊಂದ ನಂತರ ಸ್ವತಃ ತಾವೇ ಶವಗಳನ್ನು ವಿಲೇವಾರಿ ಮಾಡುವ ಮೂಲಕ ರಕ್ತಸಿಕ್ತ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ನಟಿಯ ಇದೇ ಅವತಾರವನ್ನು ನೋಡಿದ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಇನ್ನು, ವಿಶೇಷ ಎಂಬಂತೆ ಈ ಸಿನಿಮಾದಲ್ಲಿ ಸಮಂತಾ ಪತಿಯ ಪಾತ್ರದಲ್ಲಿ ಕನ್ನಡದ ನಟ ದಿಗಂತ್ ಅವರು ನಟಿಸಿದ್ದಾರೆ. ಈ ಸಿನಿಮಾವನ್ನು ಸಮಂತಾ ಅವರ ಪತಿ, ನಿರ್ದೇಶಕ ರಾಜ್ ನಿಧಿಮೋರು, ಸಮಂತಾ ರುತ್ ಪ್ರಭು ಮತ್ತು ಹಿಮಂಕ್ ದುವ್ವುರು ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ಗುಲ್ಶನ್ ದೇವಯ್ಯ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ನಟರಾದ ಗೌತಮಿ ಮತ್ತು ಮಂಜುಷಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.