ADVERTISEMENT

ಸಪ್ತಸಾಗರದಾಚೆ ಎಲ್ಲೋ ಟ್ರೇಲರ್‌: ರಕ್ಷಿತ್‌ ಶೆಟ್ಟಿಯ ನೀಲಿ ನೂಲಿನ ಪ್ರೇಮ ಕವಿತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2023, 14:31 IST
Last Updated 17 ಆಗಸ್ಟ್ 2023, 14:31 IST
ಸಪ್ತಸಾಗರದಾಚೆ ಎಲ್ಲೋ ಟ್ರೇಲರ್‌
ಸಪ್ತಸಾಗರದಾಚೆ ಎಲ್ಲೋ ಟ್ರೇಲರ್‌   

‘ಈ ಟ್ರೇಲರ್‌ ನೋಡುವಾಗ ಹೇಮಂತ್‌ ತಲೆಯಲ್ಲಿ ಸಿನಿಮಾದ ಕುರಿತು ಏನು ಓಡುತ್ತಿರಬಹುದು ಎಂದು ಯೋಚಿಸುತ್ತಿದೆ. ಸಿನಿಮಾವನ್ನು ತುಂಬ ಪ್ರೀತಿಸುವ ನಿರ್ದೇಶಕ ಹೇಮಂತ್‌ ರಾವ್‌ ಈ ಸಿನಿಮಾದ ಮೂಲಕ ಸಾಗರದಾಚೆಯ ಕವಿತೆಯನ್ನು ಹೇಳಿದ್ದಾರೆ. ನೀಲಿ ನೂಲಿನ ಮೂಲಕ ಬದುಕಿನ ಪ್ರೇಮ ಕವಿತೆಯನ್ನು ಬರೆದಿದ್ದಾರೆ. ‘ಸೈಡ್‌–ಎ’ನಲ್ಲಿ ಪ್ರಾರಂಭವಾದ ಕವಿತೆ, ‘ಸೈಡ್‌–ಬಿ’ನಲ್ಲಿ ಬೇರೆ ರೂಪದಲ್ಲಿ ಮುಂದುವರಿಯುತ್ತದೆ. ಇಂತಹ ಸಿನಿಮಾ ನಿರ್ಮಾಣ ಮಾಡುವ ಮಟ್ಟಕ್ಕೆ ಬಂದಿರುವುದು ಖುಷಿ ಎನಿಸುತ್ತಿದೆ’ ಎಂದು ಭಾವುಕರಾದರು ನಟ ರಕ್ಷಿತ್‌ ಶೆಟ್ಟಿ.

ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌ ಮುಖ್ಯಭೂಮಿಕೆಯಲ್ಲಿರುವ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಸೈಡ್‌–ಎ ಟ್ರೇಲರ್‌ ಬಿಡುಗಡೆಗೊಂಡಿದೆ. ಪರಂವಃ ಪಿಕ್ಚರ್ಸ್‌ ಈ ಸಿನಿಮಾ ನಿರ್ಮಿಸಿದ್ದು, ಹೇಮಂತ್‌ ರಾವ್‌ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ಮನು ಮತ್ತು ಪ್ರಿಯಾಳ ನಡುವಿನ ಉತ್ಕಟ ಪ್ರೇಮಕಥೆಯಲ್ಲಿ ಒಂದಷ್ಟು ಟ್ವಿಸ್ಟ್‌ ಇದೆ, ಕೊಲೆಯಿದೆ, ದುಃಖವಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇಡೀ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತಿರುವುದು ಹೇಮಂತ್‌ ರಾವ್‌ ಅವರ ತಾಂತ್ರಿಕ ಕಸುಬುದಾರಿಕೆ. ಟ್ರೇಲರ್‌ನ ಪ್ರತಿ ಫ್ರೇಂ ಅನ್ನು ಬದುಕಿನ ಕವಿತೆಯಂತೆ ಕೆತ್ತಿದ್ದಾರೆ ಚಿತ್ರದ ನಿರ್ದೇಶಕರು. ನಾಯಕ ಮನು ಮತ್ತು ಪ್ರಿಯಾಳ ನಡುವಿನ ಪ್ರೀತಿಯಲ್ಲಿ ಮನುವಿನ ಮೌನವೇ ಹೆಚ್ಚು ಆವರಿಸಿಕೊಂಡಿದೆ. 

‘ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದು ಪ್ರೇಮಕಥೆ ಇರುತ್ತದೆ ಮತ್ತು ಅದು ಎಲ್ಲರಿಗೂ ಕನೆಕ್ಟ್‌ ಆಗುತ್ತದೆ. ತಾಂತ್ರಿಕವಾಗಿ ಸಾಧ್ಯವಾದಷ್ಟು ಉತ್ಕೃಷ್ಟವಾದ ಸಿನಿಮಾ ಕೊಡಲು ಯತ್ನಿಸಿರುವೆ. ನಾನೇ ಎಷ್ಟೋ ಸಿನಿಮಾಗಳನ್ನು ನೋಡಿ ಬೈದುಕೊಂಡು ಚಿತ್ರಮಂದಿರದಿಂದ ಹೊರಬಂದಿರುವೆ. ನಮ್ಮ ಸಿನಿಮಾ ಕೂಡ ಆ ರೀತಿ ಆಗಬಾರದು ಎಂಬ ಕಾರಣಕ್ಕೆ ಕಣ್ಣಿಗೆ ಕಂಡ ಎಲ್ಲ ತಪ್ಪುಗಳನ್ನು ಸರಿಪಡಿಸುತ್ತ ಹೋಗುತ್ತೇನೆ. ಕ್ಲಾಸ್‌, ಮಾಸ್‌ ಯಾವುದನ್ನೂ ತಲೆಯಲ್ಲಿ ಇಟ್ಟುಕೊಳ್ಳದೆ ಪರಿಶುದ್ಧ ಪ್ರೇಮಕಥೆ ಹೇಳಿರುವೆ. ನನಗೆ ಬೇಕಾದಂತೆ ಕಥೆ ಹೇಳಲು ಬಿಟ್ಟರು ನಿರ್ಮಾಪಕ, ನಟ ರಕ್ಷಿತ್‌ ಶೆಟ್ಟಿ’ ಎಂದರು ಹೇಮಂತ್‌ ರಾವ್‌.

ADVERTISEMENT

ನಟನೆ ಕಡಿಮೆ ಮಾಡುವೆ

‘ಉಳಿದವರು ಕಂಡಂತೆ’ ನಂತರ ನಿರ್ದೇಶಕ ರಾಜಿಯಾಗದೇ ಸಿನಿಮಾ ಮಾಡುವ ವೇದಿಕೆ ಸೃಷ್ಟಿಸಬೇಕೆಂದು ನಿರ್ಧರಿಸಿದೆ. ಹಾಗಾಗಿ ನಾನು ನಿರ್ದೇಶನದಿಂದ ದೂರ ಉಳಿದು ನಟನೆಯತ್ತ ಹೊರಳಿದೆ. ಪರಂವಃ ಈಗ ಒಂದು ಉತ್ತಮ ವೇದಿಕೆಯಾಗಿದೆ. ಹೀಗಾಗಿ ‘ಚಾರ್ಲಿ’ ನಂತರ ನಾನು ನಟನೆ ಕಡಿಮೆ ಮಾಡಬೇಕೆಂದು ನಿರ್ಧರಿಸಿರುವೆ. ನಿರ್ದೇಶನಕ್ಕೆ ಮರಳುತ್ತೇನೆ. ಆದಾಗ್ಯೂ ಹೇಮಂತ್‌ ಯಾವಾಗ ಕಥೆಯಿದೆ ಎಂದು ಬಂದರೂ ನಟನೆ ಮಾಡುತ್ತೇನೆ. ನನ್ನಷ್ಟೇ ಅವರೂ ಸಿನಿಮಾವನ್ನು ಪ್ರೀತಿಸುತ್ತಾರೆ. ಸಿನಿಮಾಗಿಂತ ನಾವ್ಯಾರೂ ದೊಡ್ಡವರಲ್ಲ ಎಂಬುದು ಗೊತ್ತಿದೆ’ ಎಂದರು ರಕ್ಷಿತ್‌ ಶೆಟ್ಟಿ.

ಚೈತ್ರಾ ಆಚಾರ್‌ ಕೂಡ ಸಿನಿಮಾದ ಮತ್ತೋರ್ವ ನಾಯಕಿಯಾಗಿದ್ದು ‘ಸೈಡ್‌–ಬಿ’ನಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.