ಬಾಬಿ ಚೆಮ್ಮನ್ನೂರ್ ಮತ್ತು ನಟಿ ಹನಿ ರೋಸ್
ಕೊಚ್ಚಿ: ಬಹುಭಾಷಾ ನಟಿ ಹನಿ ರೋಸ್ ಅವರ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುವ ಮೂಲಕ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಬಂಧನಕ್ಕೊಳಗಾಗಿರುವ ಚೆಮ್ಮನ್ನೂರ್ ಜುವೆಲ್ಲರ್ಸ್‌ನ ಮಾಲೀಕ ಬಾಬಿ ಚೆಮ್ಮನ್ನೂರ್ ಅಲಿಯಾಸ್ ‘ಬೋಚೆ’ ಅವರಿಗೆ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
ಬಾಬಿ ಅವರು ಯಾವುದೇ ತಪ್ಪು ಮಾಡಿಲ್ಲ. ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರು ವಾದಿಸಿದ್ದರು. ಆದಾಗ್ಯೂ, ಬಾಬಿ ಅವರು ಗಂಭೀರವಾದ ಅಪರಾಧವನ್ನು ಮಾಡಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ.
ಹನಿ ರೋಸ್ ಅವರು ಕೊಚ್ಚಿ ಸಿಟಿ ಪೊಲೀಸ್ ಠಾಣೆಯಲ್ಲಿ ಈಚೆಗೆ ದೂರು ದಾಖಲಿಸಿದ್ದರು. ನಿರೀಕ್ಷಣಾ ಜಾಮೀನು ಪಡೆಯುವ ಯತ್ನದಲ್ಲಿದ್ದ ಚೆಮ್ಮನ್ನೂರ್ ಅವರನ್ನು ವಯನಾಡ್‌ನ ಅವರ ತೋಟದಲ್ಲಿ ಎಸ್‌ಐಟಿ ಪೊಲೀಸರು ಬುಧವಾರ ಬಂಧಿಸಿದ್ದರು.
ಬೋಚೆ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 75 ಸೇರಿದಂತೆ ವಿವಿಧ ಜಾಮೀನು ರಹಿತ ಕಲಂಗಳಡಿ ಪ್ರಕರಣ ದಾಖಲಾಗಿದೆ.
ದೂರು ದಾಖಲಿಸಿದ ಬೆನ್ನಲ್ಲೇ ಪೊಲೀಸರು ತ್ವರಿತವಾಗಿ ಕ್ರಮ ತೆಗೆದು ಕೊಂಡಿದ್ದಕ್ಕೆ ನಟಿ ರೋಸ್ ಸಂತಸ ವ್ಯಕ್ತಪಡಿಸಿದ್ದು, ‘ಪದೇ ಪದೇ ನನ್ನ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡುತ್ತಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಂಡಿರುವುದು ನೆಮ್ಮದಿ ತರಿಸಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.