ADVERTISEMENT

PV Cine Sammana-3: ನೃತ್ಯಸಖ ಶೇಖರ್‌ ಮಾಸ್ಟರ್‌ಗೆ ಪ್ರಶಸ್ತಿಯ ಖುಷಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 0:17 IST
Last Updated 4 ಜುಲೈ 2025, 0:17 IST
<div class="paragraphs"><p>ಬೆಂಗಳೂರಿನಲ್ಲಿ ಜೂನ್‌27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ನಿರ್ದೇಶನ ಪ್ರಶಸ್ತಿ ಪಡೆದ ಶೇಖರ್‌</p></div>

ಬೆಂಗಳೂರಿನಲ್ಲಿ ಜೂನ್‌27ರಂದು ನಡೆದ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನದ ಮೂರನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ನೃತ್ಯ ನಿರ್ದೇಶನ ಪ್ರಶಸ್ತಿ ಪಡೆದ ಶೇಖರ್‌

   

ಅತ್ಯುತ್ತಮ ನೃತ್ಯ ನಿರ್ದೇಶನ- ಶೇಖರ್ ಮಾಸ್ಟರ್, ಸಿನಿಮಾ- ಕೃಷ್ಣಂ ಪ್ರಣಯ ಸಖಿ

ನಾಮನಿರ್ದೇಶನಗೊಂಡವರು:
* ಶೋಭಿ ಪೌಲ್‌ರಾಜ್– ಮ್ಯಾಕ್ಸ್- ಮ್ಯಾಕ್ಸಿಮಮ್ ಮಾಸ್
* ಪ್ರಭುದೇವ, ಭೂಷಣ್- ಕರಟಕ ದಮನಕ– ಹಿತ್ತಲಕ ಕರಿಬ್ಯಾಡ
* ದೀಕ್ಷಿತ್ ಕುಮಾರ್ -ಇಬ್ಬನಿ ತಬ್ಬಿದ ಇಳೆಯಲಿ-ರಾಧೆ
* ಬಿ. ಧನಂಜಯ -ಭೀಮ- ಐ ಲವ್‌ ಯು ಕಣೆ
* ಬಿ. ಧನಂಜಯ- ಕಾಲಾಪತ್ಥರ್- ಬಾಣ್ಲಿ ಸ್ಟವ್
* ಶೇಖರ್ ಮಾಸ್ಟರ್‌- ಕೃಷ್ಣಂ ಪ್ರಣಯ ಸಖಿ- ದ್ವಾಪರ...

ಕನ್ನಡದಲ್ಲಿ ಈಚೆಗೆ ಅತಿ ಹೆಚ್ಚು ವೈರಲ್ ಆದ ಹಾಡು ಹಾಗೂ ನೃತ್ಯ ಎನ್ನಬಹುದಾದರೆ, ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ದ್ವಾಪರ ದಾಟುತಾ...’ ಹಾಡು. ‘ಸರಿಗಮಪ’ ಸ್ಪರ್ಧಿ ಜಸ್ಕರಣ್ ಸಿಂಗ್ ದನಿಯೊಂದಿಗೆ ಹಾಡಿನಲ್ಲಿ ಗಣೇಶ್ ಹಾಕಿದ್ದ ಸ್ಟೆಪ್‌ಗಳು ಫೇಮಸ್ ಆದವು. ಮಾತ್ರವಲ್ಲ, ಅದನ್ನು ಅನುಕರಿಸಿದ ರೀಲ್ಸ್‌ಗಳು ಒಂದಾದ ಮೇಲೊಂದರಂತೆ ವೈರಲ್ ಆದವು.

ADVERTISEMENT

ಈ ಸ್ಟೆಪ್‌ಗಳ ಹಿಂದಿನ ಕೊರಿಯೊಗ್ರಾಫರ್, ತಮಿಳು, ತೆಲುಗು, ಹಿಂದಿ, ಕನ್ನಡ ಎಲ್ಲೆಡೆಯೂ ಟ್ರೆಂಡಿಂಗ್ ಹೆಸರಾಗಿರುವ ಶೇಖರ್ ಮಾಸ್ಟರ್‌ಗೆ ಈ ಬಾರಿ ‘ಅತ್ಯುತ್ತಮ ನೃತ್ಯ ನಿರ್ದೇಶನ’ ಪ್ರಶಸ್ತಿ ಮುಡಿಗೇರಿದ್ದು, ಹಿರಿಯ ನಿರ್ದೇಶಕ ಪಿ.ಎಚ್. ವಿಶ್ವನಾಥ್ ಹಾಗೂ ನಟಿ ಪೂಜಾ ಗಾಂಧಿ ಪ್ರಶಸ್ತಿ ಪ್ರದಾನ ಮಾಡಿದರು.

ಸಿನಿಮಾಗಳಲ್ಲಿ ನೃತ್ಯದ ಪ್ರಾಮುಖ್ಯದ ಕುರಿತು ಮಾತನಾಡಿದ ವಿಶ್ವನಾಥ್ ಅವರು, ‘ಹಾಡು, ನೃತ್ಯಗಳು ನಾಟಕಗಳಿಂದ ಬಂದಿದ್ದು. ನೃತ್ಯಕ್ಕೆ ಪರಂಪರೆಯೇ ಇದೆ. ಹಾಡು, ನೃತ್ಯಗಳು ಸಿನಿಮಾದ ಆಕರ್ಷಣೆ’ ಎನ್ನುತ್ತಾ, ‘ಎಷ್ಟೊ ಹೀರೊಗಳನ್ನು ಹುಟ್ಟುಹಾಕಿದ್ದೇ ನೃತ್ಯ ಹಾಗೂ ನೃತ್ಯಗಾರರು. ನೃತ್ಯವೇ ಸಿನಿಮಾಗೆ ಅಲಂಕಾರ’ ಎಂದು ಹೇಳಿದರು.

ನಟಿ ಪೂಜಾ ಗಾಂಧಿ, ದ್ವಾಪರ ಹಾಡಿಗೆ ಹೆಜ್ಜೆ ಹಾಕಿದ ನಂತರ ಮಾತನಾಡಿ, ‘ಡಾನ್ಸ್ ಎಂದರೆ ನನಗೆ ಆಗುವುದಿಲ್ಲ, ತುಂಬಾ ಕಷ್ಟಪಟ್ಟು ನನ್ನಿಂದ ನೃತ್ಯ ಮಾಡಿಸುತ್ತಾರೆ. ಈಗ ನಟ ನಟಿಯರು ಎಲ್ಲವನ್ನೂ ಕಲಿತು ಬರುತ್ತಾರೆ. ನನಗೆ ಚೆನ್ನಾಗಿ ಡಾನ್ಸ್ ಮಾಡಲು ಬರುವುದಿಲ್ಲ ಎಂಬ ಬೇಜಾರಿದೆ’ ಎಂದು ನಕ್ಕರು.

ಪ್ರಶಸ್ತಿ ಸ್ವೀಕರಿಸಿದ ಶೇಖರ್ ಮಾಸ್ಟರ್, ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಮಾತನಾಡಿ, ‘ಕನ್ನಡ ಭಾಷೆ ಕೇಳಲು ಸುಲಭ. ಮಾತಾಡುವುದು ಕಷ್ಟ. ಆದರೆ ನನಗೆ ಕನ್ನಡದಲ್ಲಿ ಮಾತನಾಡಬೇಕೆಂಬ ಆಸೆಯಿದೆ. ಕನ್ನಡ ಪ್ರೇಕ್ಷಕರಿಗೆ ಬಹಳ ಧನ್ಯವಾದ. ತುಂಬಾ ಜನರು ಈ ಹಾಡು, ನೃತ್ಯವನ್ನು ನೋಡಿದ್ದಾರೆ. ಡಾನ್ಸ್‌ ರೀಲ್ಸ್ ಕೂಡ ಮಾಡಿದ್ದಾರೆ’ ಎಂದು ಅಭಿಮಾನ ತುಂಬಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.