ADVERTISEMENT

ಬದಲಾಗು ನೀನು: ಬದಲಾವಣೆಯ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 19:30 IST
Last Updated 7 ಜೂನ್ 2020, 19:30 IST
ಬದಲಾಗು ನೀನು ಹಾಡಿನ ಪೋಸ್ಟರ್‌
ಬದಲಾಗು ನೀನು ಹಾಡಿನ ಪೋಸ್ಟರ್‌   

ಕನ್ನಡದ ಇನ್ನಷ್ಟು ಜನಪ್ರಿಯ ತಾರೆಯರು ಸೇರಿದಂತೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌‌ ಅವರು ‘ಬದಲಾಗೋಣ, ಬದಲಾಯಿಸೋಣ’ ಎನ್ನುವ ಕೊರೊನಾ ವಿರುದ್ಧ ಜಾಗೃತಿಯ ಮಾತು ಹೇಳಿರುವುದು ಈ ದೃಶ್ಯರೂಪಕದಲ್ಲಿದೆ.

ಕೊರೊನಾ ಸಮಸ್ಯೆಯನ್ನಷ್ಟೇ ಹೊತ್ತು ತರಲಿಲ್ಲ. ಜೀವನ ಪಾಠ ಮತ್ತು ಆರೋಗ್ಯ, ನೈರ್ಮಲ್ಯದ ಪಾಠ ಹೇಳಿಕೊಡುತ್ತಿದೆ ಎನ್ನುವ ಮಾತನ್ನು ಬಲ್ಲವರ ಬಾಯಿಯಿಂದ ನಾವು– ನೀವೆಲ್ಲ ಅನೇಕ ಬಾರಿ ಈ ನಡುವೆ ಕೇಳಿರಬಹುದು. ಕೊರೊನಾ ಪೂರ್ವ ನಮ್ಮ ಬದುಕು ಹೇಗಿತ್ತು, ಕೊರೊನೋತ್ತರ ಭಾರತದಲ್ಲಿ ನಮ್ಮ ಬದುಕು ಹೇಗಿರಬೇಕೆಂಬ ಅರಿವನ್ನು ಜನರಲ್ಲಿ ಮೂಡಿಸಲು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಅದ್ಭುತ ದೃಶ್ಯರೂಪಕದ ಹಾಡೊಂದನ್ನು ಹೊರತಂದಿದೆ. ‘ಬದಲಾಗು ನೀನು’ ಶೀರ್ಷಿಕೆಯ ಈ ಹಾಡು ಇತ್ತೀಚೆಗಷ್ಟೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಈ ಹಾಡಿನಪರಿಕಲ್ಪನೆನಿರ್ದೇಶಕ ಪವನ್ ಒಡೆಯರ್ ಮತ್ತು ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಅವರದ್ದು. ಇದಕ್ಕೆ ಸಾಥ್‌ ಕೊಟ್ಟವರು ವೈದ್ಯಕೀಯ ಶಿಕ್ಷಣ ಸಚಿವರ ಡಾ.ಕೆ.ಸುಧಾಕರ್‌. 10.38 ನಿಮಿಷಗಳ ಅವಧಿಯ ಈ ಹಾಡಿಗೆ ದನಿಯಾಗಿದ್ದಾರೆ ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕರು. ಈ ದೃಶ್ಯ ರೂಪಕದಲ್ಲಿಕನ್ನಡದ ಚಿತ್ರತಾರೆಯರೆಲ್ಲರೂ ಜಾಗೃತಿ ಸಂದೇಶ ನೀಡಿದ್ದಾರೆ. ಇದಕ್ಕೆ ಕ್ರಿಕೆಟಿಗರೂ ಕೈಜೋಡಿಸಿದ್ದಾರೆ. ಎಲ್ಲರೂಕೊರೊನಾ ವಾರಿಯರ್ಸ್‌ಗಳಿಗೆ ನುಡಿ ನಮನ ಸಲ್ಲಿಸಿದ್ದಾರೆ.

ADVERTISEMENT

ಈ ಹಾಡಿನಲ್ಲಿ ಮೊದಲು ಎಂಟ್ರಿಕೊಡುವ ನಟ ಶಿವಣ್ಣ ‘ನನ್ನ ದೃಷ್ಟಿಯಲ್ಲಿ ನಿಜವಾದ ಹೀರೊಗಳು ಕೊರೊನಾ ವಿರುದ್ಧ ಹೋರಾಡುತ್ತಿರುವ ಸ್ವಯಂಸೇವಕರು, ಆಶಾಕಾರ್ಯಕರ್ತರು ಹಾಗೂ ಕಣ್ಣಿಗೆ ಕಾರಣದ ಹಲವಾರು ವ್ಯಕ್ತಿಗಳು’ ಎನ್ನುವ ಮಾತು ಹೇಳಿದ್ದಾರೆ.

‘ಗೋಡೆ’ ಖ್ಯಾತಿಯ ಕ್ರಿಕೆಟಿಗರಾಹುಲ್‌ ದ್ರಾವಿಡ್‌ ‘ನಾವೆಲ್ಲರೂ ನಮ್ಮ ಮತ್ತು ಕೊರೊನಾ ನಡುವೆ ವಾಲ್‌ ನಿರ್ಮಿಸಬೇಕು’ ಎಂದಿದ್ದಾರೆ. ಕ್ರಿಕೆಟಿಗ ಅನಿಲ್‌ ಕುಂಬ್ಳೆ ‘ಜೀವನದ ವಿಕೆಟ್‌ ಉಳಿಸುತ್ತಿರುವ ಪೊಲೀಸರೇ ನಿಜವಾದ ಹೀರೊಗಳು’ ಎಂದಿದ್ದಾರೆ.

‘ನನ್ನ ಪ್ರಕಾರ ನಮ್ಮನಿಮ್ಮೆಲ್ಲರ ಹಸಿವು ನೀಗಿಸುವ, ಭಗವಂತನ ಹನ್ನೊಂದನೆಯ ಅವತಾರ ರೈತನೇ ನಿಜವಾದ ರಿಯಲ್‌ಸ್ಟಾರ್‌’ ಎನ್ನುವುದುರಿಯಲ್‌ ಸ್ಟಾರ್‌ ಉಪೇಂದ್ರ ಮಾತು.

ದರ್ಶನ್ ಅವರು ‘ನಮ್ಮ ಜೀವಗಳನ್ನು ಉಳಿಸುವ ಸವಾಲು ಎದುರಿಸುತ್ತಿರುವ ಪೊಲೀಸ್‌ ಇಲಾಖೆ ನಮ್ಮ ನಿಜವಾದ ಹೀರೋ’ ಎಂದು ಸ್ಮರಿಸಿದ್ದಾರೆ.‘ಖಾಕಿ ಕಾನೂನು ಕಾಯ್ದರೆ, ಬಿಳಿ ಕೋಟು ಪ್ರಾಣ ಕಾಯುತ್ತಿದೆ. ಹಾಗಂಥ ಮಾಸ್ಕ್‌ ಇಲ್ಲದೆ ಆಚೆ ಕಾಲಿಟ್ಟರೆ ಕೊರೊನಾ ವಕ್ಕರಿಸಲು ನಿಮ್ಮನ್ನು ಕಾಯುತ್ತಿರುತ್ತದೆ’ ಎನ್ನುವ ಎಚ್ಚರಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಪ್ರೇರಣೆಯ ಮಾತು ಸಖತ್ ಆಗಿದೆ. ‘ಕಣ್ಣಿಗೆ ಕಾಣದೆ ಗುಂಪುಗುಂಪಾಗಿ ನಮ್ಮನ್ನು ಅಟ್ಯಾಕ್‌ ಮಾಡಲು ಬಂದಿರುವ ಕೊರೊನಾ ವೈರಸ್‌ ಬರೀ ಗ್ಯಾಂಗ್‌ಸ್ಟರ್‌. ಆದರೆ, ಅದರ ವಿರುದ್ಧ ಮುನ್ನೆಚ್ಚರಿಕೆ ತೆಗೆದುಕೊಂಡು ಅದನ್ನು ಮೆಟ್ಟಿನಿಲ್ಲುವವನೇ ನಿಜವಾದಮಾನ್‌ಸ್ಟಾರ್‌’ ಎಂದು ಕೆಜಿಎಫ್‌ ಸಿನಿಮಾ ಡೈಲಾಗ್‌ ನೆನಪಿಸುವಂತೆ ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್ ‘ತಮ್ಮ ಪ್ರಾಣ ಪಣಕ್ಕಿಟ್ಟು ಜನರ ಜೀವ ಉಳಿಸುತ್ತಿರುವ ಡಾಕ್ಟರ್ಸ್‌ ನನ್ನಹೀರೋ’ ಎಂದರೆ,ಗೋಲ್ಡನ್ ಸ್ಟಾರ್ ಗಣೇಶ್ ‘ಕೊರೊನಾ ವಿರುದ್ಧ ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ವಿಜ್ಞಾನಿಗಳೇ ನಮ್ಮ ಹೀರೋಗಳು’ ಎನ್ನುವ ಮಾತು ಸೇರಿಸಿದ್ದಾರೆ.

ರವಿಚಂದ್ರನ್ ‘ಕೊರೊನಾ ಏಕಾಂಗಿ ಆಗಬೇಕೆಂದರೆ ನೀವು ನಿಮ್ಮ ಪ್ರೇಮಲೋಕ ಉಳಿಸಿಕೊಳ್ಳುವ ಸಿಪಾಯಿಗಳಾಗಬೇಕು’ ಎಂದಿದ್ದಾರೆ.ರಮೇಶ್ ಅರವಿಂದ್ ಅವರು ‘ಚಿಕ್ಕ ಸಮಸ್ಯೆ ಬಂದರೆ ಫೋನ್ ಚೇಂಜ್ ಮಾಡ್ತೀವಿ. ಇನ್ನು ಜೀವನದಲ್ಲೇ ಸಮಸ್ಯೆ ಬಂದಾಗ ನಮ್ಮ ಮೈಂಡ್‌ಸೆಟ್‌ ಏಕೆ ಚೇಂಜ್ ಮಾಡಿಕೊಳ್ಳಬಾರದು?’ ಎನ್ನುವ ಸಲಹೆ ಕೊಟ್ಟಿದ್ದಾರೆ.

ಕನ್ನಡದ ಇನ್ನಷ್ಟು ಜನಪ್ರಿಯ ತಾರೆಯರು ಸೇರಿದಂತೆ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌‌ ಅವರು ‘ಬದಲಾಗೋಣ, ಬದಲಾಯಿಸೋಣ’ ಎನ್ನುವ ಕೊರೊನಾ ವಿರುದ್ಧ ಜಾಗೃತಿಯ ಮಾತು ಹೇಳಿರುವುದು ಈ ದೃಶ್ಯರೂಪಕದಲ್ಲಿದೆ.

ಕಾಲ ಕಲಿಸಿದ ಪಾಠ

ಕೊರೋನಾ ಸಂಕಷ್ಟದಲ್ಲಿ ಸಾವಿರಾರು ಸಾವು ನೋವಾದವು. ಲಕ್ಷಾಂತರ ಜನರ ಬದುಕು ಅತಂತ್ರವಾಯಿತು. ಅಷ್ಟೆಲ್ಲ ಅನಾಹುತಗಳ ನಡುವೆ ಪ್ರಕೃತಿ ಮತ್ತು ನಮ್ಮ ಜೀವನ ಶೈಲಿ ನಮಗೆ ಅನೇಕ ಪಾಠಗಳನ್ನು ಹೇಳಿದವು. ನಿಜವಾದ ಬದುಕು ಮತ್ತು ಅದರ ಸುಖ ಏನೆಂದು ಅರಿತೆವು. ಆ ಪಾಠಗಳನ್ನು ನೆನಪಿಟ್ಟುಕೊಂಡು ಸಾಗುತ್ತೇವಾ? ಅಥವಾ ಮತ್ತದೇ ಧಾವಂತವಾ? ಉತ್ತರ ನಮಗೇ ಬಿಟ್ಟಿದ್ದು ಎನ್ನುತ್ತಲೇ ಚಿತ್ರ ಸಾಹಿತಿ ಡಾ.ವಿ.ನಾಗೇಂದ್ರ ಪ್ರಸಾದ್‌ ‘ಕಾಲ ಕಲಿಸಿದ ಪಾಠ, ಬಿಡಿಸಿ ಹೇಳಬೇಕೇ ಪಡೆದ ಸುಖಗಳಾ...’ ಹಾಡನ್ನು ಬರೆದು, ನಿರ್ದೇಶಿಸಿದ್ದಾರೆ.

3.47 ನಿಮಿಷಗಳ ಅವಧಿಯ ಈ ಹಾಡಿಗೆ ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿಹಾಡಿದ್ದಾರೆ. ಈಗೀತೆ ತುಂಬಾ ಅರ್ಥಪೂರ್ಣವಾಗಿದೆ. ಇದಕ್ಕೆ ಅಷ್ಟೇ ಸೊಗಸಾಗಿ ಶ್ರೀನಿವಾಸ್‌ ಆಚಾರ್‌ ಗಿಟಾರ್‌ ಸಾಥ್‌ ನೀಡಿದ್ದಾರೆ.‘ನಾನು, ನಾನು’ ಎನ್ನುವ ಮನುಷ್ಯನ ಅಹಂ ಅಡಗಿಸಿ, ‘ನಾವು’ ಎನ್ನುವುದನ್ನು ಹೇಗೆ ಉಳಿಸಿತು ಕೊರೊನಾ ಎನ್ನುವುದನ್ನು ಈ ಹಾಡು ಧ್ವನಿಸುತ್ತದೆ.

ಮ್ಯೂಸಿಕ್‌ ಬ್ಯಾನರ್‌ನಡಿ ಈ ಹಾಡನ್ನು ಹೊರತರಲಾಗಿದ್ದು, ಉಪ್ಪಿ ಮತ್ತು ವೆಸ್ಲಿ ಬ್ರೌನ್‌ ಛಾಯಾಗ್ರಹಣ, ಸಂಕಲನ ಪ್ರದೀಪ್‌ ವಿ.ಬಂಗಾರಪೇಟೆ ಅವರದು. ಈ ಹಾಡು ಸಹ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.