
ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'SSMB29' ಚಿತ್ರದ ಟೀಸರ್ ಸೇರಿದಂತೆ ಅನೇಕ ಸಂಗತಿಗಳು ನವೆಂಬರ್ 15ರ ಶನಿವಾರದಂದು 'ಗ್ಲೋಬ್ ಟ್ರಾಟರ್' ಕಾರ್ಯಕ್ರಮದಲ್ಲಿ ಅನಾವರಣ ಆಗಲಿವೆ.
ಈ ಕಾರ್ಯಕ್ರಮವು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಜಿಯೋಹಾಟ್‌ಸ್ಟಾರ್‌ನಲ್ಲೂ ಪ್ರತ್ಯೇಕವಾಗಿ ಪ್ರಸಾರವಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಕಾರ್ಯಕ್ರಮದಲ್ಲಿ ‘SSMB29‘ ಚಿತ್ರದ ಟೀಸರ್, ಫಸ್ಟ್ ಲುಕ್ ಅನಾವರಣ, ಮಹೇಶ್ ಬಾಬು ಅವರ ಪಾತ್ರದ ಪರಿಚಯ ಹಾಗೂ ಶ್ರುತಿ ಹಾಸನ್ ಅವರ ಶೀರ್ಷಿಕೆ ಗೀತೆಯ ವಿಶೇಷ ಪ್ರದರ್ಶನ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಈ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ 50 ಸಾವಿರಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಸಿನಿಮಾದ ಫಸ್ಟ್ ಲುಕ್, ಟೀಸರ್ 130 ಅಡಿ x 100 ಅಡಿ ಅಗಲದ ಬೃಹತ್ ಪರದೆಯ ಮೇಲೆ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಈ ಚಿತ್ರದಲ್ಲಿ ಶ್ರುತಿ ಹಾಸನ್ ಅವರು ಹಾಡಿರುವ ‘ಸಂಚಾರ' ಎಂಬ ಶೀರ್ಷಿಕೆ ಗೀತೆಯು ಬಿಡುಗಡೆಯಾಗಿ 5 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.
ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಪೃಥ್ವಿರಾಜ್ ಸುಕುಮಾರನ್ ಅವರು ಖಳನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
‘ರಾಜಮೌಳಿ ಅವರ ಚಿತ್ರಕ್ಕೆ ತಾತ್ಕಾಲಿಕವಾಗಿ SSMB29 ಎಂದು ಶೀರ್ಷಿಕೆ ನೀಡಲಾಗಿದೆ. ಸಿನಿಮಾ ಕುರಿತ ಹೊಸ ಅಪ್‌ಡೇಟ್‌ನಲ್ಲಿ ‘ಗ್ಲೋಬ್ ಟ್ರಾಟರ್‘ (GlobeTrattor) ಎಂಬ ಹ್ಯಾಷ್‌ಟ್ಯಾಗ್ ಅನ್ನು ಚಿತ್ರತಂಡ ಬಳಸುತ್ತಿದೆ. ಹಾಗಾಗಿ ಸಿನಿಮಾ ಹೆಸರು ಇದೇ ಅಂತಿಮವಾಗಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.