ಚಿತ್ರದ ಪೋಸ್ಟರ್
ಚಿತ್ರಕೃಪೆ: ಎಕ್ಸ್ ಖಾತೆ
ಕೋಲ್ಕತ್ತ: ದಿ ಬೆಂಗಾಲ್ ಫೈಲ್ಸ್ ಚಿತ್ರ ಬಿಡುಗಡೆ ಮಾಡದಂತೆ ಟಿಎಂಸಿ ಕಾರ್ಯಕರ್ತರು ಬೆದರಿಕೆ ಹಾಕುತ್ತಿದ್ದು, ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕೆಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮನವಿ ಮಾಡಿದ್ದಾರೆ.
1946ರ ಆಗಸ್ಟ್ 16ರಂದು ಕೋಲ್ಕತ್ತದಲ್ಲಿ ನಡೆದ ದಂಗೆಯ ಕುರಿತ ನೈಜ ಘಟನೆಯಾಧಾರಿತ 'ದಿ ಬೆಂಗಾಲ್ ಫೈಲ್ಸ್' ಸಿನಿಮಾ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ 'ಫೈಲ್ಸ್' ಸರಣಿಯ ಮೂರನೇ ಚಲನಚಿತ್ರವಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅಗ್ನಿಹೋತ್ರಿ, ಚಿತ್ರ ಪ್ರದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಬ್ಯಾನರ್ಜಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
'ರಾಜ್ಯದ ಚಿತ್ರಮಂದಿರಗಳ ಮಾಲೀಕರಿಗೆ ಚಿತ್ರ ಬಿಡುಗಡೆಗೊಳಿಸದಂತೆ ಟಿಎಂಸಿ ಕಾರ್ಯಕರ್ತರು ಬೆದರಿಕೆ ಹಾಕುತ್ತಿದ್ದಾರೆ. ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯವನ್ನು ರಕ್ಷಿಸುವುದು ನಿಮ್ಮ (ಮಮತಾ ಬ್ಯಾನರ್ಜಿ) ಜವಾಬ್ದಾರಿಯಾಗಿದೆ. ಸಿಬಿಎಫ್‌ಸಿ ಈ ಚಿತ್ರಕ್ಕೆ ಅನುಮತಿ ನೀಡಿದೆ. ಈ ಅಂಶವನ್ನು ನೀವು ಪರಿಗಣಿಸಬೇಕು. ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದಂತೆ ಅವಕಾಶ ಮಾಡಿಕೊಡಿ' ಎಂದು ಬ್ಯಾನರ್ಜಿಗೆ ಅಗ್ನಿಹೋತ್ರಿ ತಿಳಿಸಿದ್ದಾರೆ.
'ನಿಜವಾದ ಬೆಂಗಾಲಿ ಯಾವುದೇ ಕಾರಣಕ್ಕೂ ಈ ಚಿತ್ರವನ್ನು ನಿಷೇಧಿಸುವುದಿಲ್ಲ. ಈ ಚಿತ್ರ ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲೂ ಸಾಧ್ಯವಿಲ್ಲ' ಎಂದೂ ಅಗ್ನಿಹೋತ್ರಿ ಹೇಳಿದ್ದಾರೆ.
'ಆಲ್ ಇಂಡಿಯಾ ಮುಸ್ಲಿಂ ಲೀಗ್' ಪ್ರತ್ಯೇಕ ರಾಜ್ಯಕ್ಕೆ ಕರೆ ನೀಡಿದ ನಂತರ ಕೋಲ್ಕತ್ತದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದನ್ನೇ ಆಧರಿಸಿ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 5ರಂದು ಬಿಡುಗಡೆಗೆ ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.