
ಸಣ್ಣ ಪುಟ್ಟ ವಿಚಾರಗಳಿಗೆ ಉಂಟಾಗುವ ಮನಸ್ತಾಪದಿಂದ ಅನೇಕ ಜೋಡಿಗಳು ದಾಂಪತ್ಯ ಜೀವನ ಕೊನೆಗೊಳಿಸಿ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಆದರೆ ಸಿನಿಮಾವೊಂದರಿಂದ ಪ್ರೇರಿತರಾಗಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 38 ದಂಪತಿ ವಿಚ್ಛೇದನ ಪಡೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ತಮಿಳಿನ ‘ಇರುಗಪಟ್ರು’ ಸಿನಿಮಾ ಈ ಘಟನೆಗೆ ಕಾರಣವಾಗಿದೆ. ಈ ಬಗ್ಗೆ ಸಿನಿಮಾದ ನಟ ವಿಕ್ರಮ್ ಬಾಬು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ‘ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಸುದ್ದಿಯಾಗಿತ್ತು, ಯಶಸ್ಸು ಗಳಿಸಿತ್ತು. ಇದರ ನಡುವೆ ತಿರುಚನಾಪಳ್ಳಿಯಲ್ಲಿ 38 ವಿಚ್ಛೇದನ ಪ್ರಕರಣಗಳು ಸುಖಾಂತ್ಯ ಕಂಡಿದ್ದವು’ ಎಂದು ಹೇಳಿಕೊಂಡಿದ್ದಾರೆ.
2023ರ ಅಕ್ಟೋಬರ್ 6ರಂದು ತಮಿಳಿನ ‘ಇರುಗಪಟ್ರು’ ಸಿನಿಮಾ ಬಿಡಗುಡೆಯಾಗಿತ್ತು. ಈ ಸಿನಿಮಾವನ್ನು ಯುವರಾಜ್ ಧಯಾಲನ್ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಪ್ರಭು, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್, ಸಾನಿಯಾ ಅಯ್ಯಪ್ಪನ್ ಸೇರಿ ಹಲವರು ನಟಿಸಿದ್ದಾರೆ.
ಅಂಥಹದ್ದೇನಿದೆ ಸಿನಿಮಾದಲ್ಲಿ?
ಇರುಗಪಟ್ರು ಎಂದರೆ ‘ಬಿಗಿಯಾಗಿ ಹಿಡಿದುಕೊಳ್ಳಿ’ ಎಂದರ್ಥ. ಮೂವರು ದಂಪತಿ ನಡುವೆ ಹುಟ್ಟಿಕೊಳ್ಳುವ ಸಾಂಸಾರಿಕ ಸಮಸ್ಯೆಗಳ ನಡುವೆ ಈ ಚಿತ್ರದ ಕಥೆ ಸುತ್ತುತ್ತದೆ. ಸದಾ ಖುಷಿಯಿಂದ ಜಗಳವನ್ನೇ ಮಾಡದೆ ಬದುಕುವ ಜೋಡಿ, ಪ್ರೀತಿ ಮಾಡಿ ಒಂದಾದರೂ ಮದುವೆಯಾದ ಮೇಲೆ ಹೊಂದಿಕೊಳ್ಳಲಾಗದೆ ಜಗಳವಾಡಿ ಸಮಾಲೋಚಕರ ಭೇಟಿ ಮಾಡುವ ಜೋಡಿ ಒಂದೆಡೆಯಾದರೆ, ಮಗುವಾದ ಮೇಲೆ ಹೆಂಡತಿ ದಪ್ಪ ಆಗಿದ್ದಾಳೆ ಎಂದು ಕೊಂಕು ಮಾತನಾಡುವ ಗಂಡನೊಂದಿಗೆ ಯಾತನೆಯನ್ನು ಅನುಭವಿಸುತ್ತಾ ಬದುಕುವ ಪತ್ನಿಯ ಕಥೆ ಇನ್ನೊಂದೆಡೆ.
ದಾಂಪತ್ಯದಲ್ಲಿ ಜಗಳ, ಮನಸ್ತಾಪ ಎಲ್ಲವೂ ಸಹಜ ಎನ್ನುವುದನ್ನು ನಿರ್ದೇಶಕರು ತೋರಿಸಿದ್ದಾರೆ. ಜತೆಗೆ ಜೀವನದಲ್ಲಿ ಎಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗದಿದ್ದಾಗ ಅದರ ಒತ್ತಡವನ್ನು ಸಂಸಾರದ ಮೇಲೆ ಹಾಕುವುದರಿಂದ ಆಗುವ ದುಷ್ಪರಿಣಾಮಗಳು, ದಾಂಪತ್ಯದಲ್ಲಿ ಪ್ರೀತಿ ಎಷ್ಟು ಮುಖ್ಯ, ಮಾತುಕತೆ, ಹೊಂದಾಣಿಕೆಯೇ ಸುಂದರ ದಾಂಪತ್ಯದ ಭದ್ರ ಬುನಾದಿ, ಸಮಸ್ಯೆ ಬಂದರೆ ಸಂಬಂಧವನ್ನು ಬಿಟ್ಟುಕೊಡಬೇಡಿ. ಗಟ್ಟಿಯಾಗಿ ಹಿಡಿಯಿರಿ ಎನ್ನುವುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ಈ ಎಲ್ಲ ದೃಶ್ಯಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಿನಿಮಾಗಳು ನೋಡುಗರ ಮನಸ್ಥಿತಿಯನ್ನು ಹಾಳು ಮಾಡುತ್ತವೆ ಎನ್ನುವ ಈ ಕಾಲದಲ್ಲಿ ಬದುಕನ್ನು ಸರಿದಾರಿಗೂ ತರಬಲ್ಲದು ಎಂದು ತೋರಿಸಿಕೊಟ್ಟ ಸಿನಿಮಾ ‘ಇರುಗಪಟ್ರು’ ಎನ್ನುವ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ.
ಇರುಗಪಟ್ರು ಸಿನಿಮಾವನ್ನು ಈಗ ಒಟಿಟಿಯಲ್ಲೂ ನೋಡಬಹುದಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಸಿಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.