
ಚಲನಚಿತ್ರ ನಟಿ, ಉಮಾಶ್ರೀ ಅಭಿನಯದ 'ಶರ್ಮಿಷ್ಠೆ' ಏಕವ್ಯಕ್ತಿ ನಾಟಕವನ್ನು ಕುರಿತು ಸಾಹಿತಿ, ಸಿನಿಮಾ ನಿರ್ದೇಶಕ, ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರು ಅವರು, ‘ಸಾಕವ್ವನಿಂದ-ಶರ್ಮಿಷ್ಠೆವರೆಗೆ! ಕೆಲವೊಮ್ಮೆ ಹತ್ತಿರದಿಂದ ಕೆಲವೊಮ್ಮೆ ದೂರದಿಂದ ಗಮನಿಸುತ್ತಾ ಮೆಚ್ಚುತ್ತಾ ಬಂದಿದ್ದೇನೆ. ಮೊನ್ನೆ ರಂಗಶಂಕರದಲ್ಲಿ ‘ಶರ್ಮಿಷ್ಠೆ’ ನೋಡಲು ಹೋಗಿದ್ದೆ. ಒಮ್ಮೆ ಯಯಾತಿಯಾಗಿ, ಮರುಕ್ಷಣ ದೇವಯಾನಿಯಾಗಿ ಮತ್ತೆ ಶರ್ಮಿಷ್ಠೆಯಾಗಿ ರೂಪಾಂತರಗೊಳ್ಳುತ್ತಿದ್ದ ಅಭಿಜಾತ ಕಲಾವಿದೆ ಉಮಾಶ್ರೀ ನೋಡುಗರನ್ನು ಬಹುಬಗೆಯಲ್ಲಿ ಆವರಿಸಿಕೊಂಡರು. ನನ್ನ ಕೊಟ್ರೇಶಿಯ ತಾಯಿ ನಾಗಿ ನೆನಪಾಗುತ್ತಿದ್ದಳು. ಹಲವು ಅಗ್ನಿದಿವ್ಯದಲ್ಲಿ ಬೆಂದು ಪರಿಪಕ್ವಗೊಂಡ ಈ ಜೀವತಾವರೆಯ ಹೂವು ಕಲಾಸರಸ್ಸಿನಲ್ಲಿ ಬಹುಕಾಲ ನೆಮ್ಮದಿಯಾಗಿ ಬಾಳಲಿ‘ ಎಂದು ಬರೆದುಕೊಂಡಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರು ‘ಕೊಟ್ರೇಶಿ ಕನಸು', 'ಅಮೆರಿಕ ಅಮೆರಿಕ' ಮತ್ತು 'ಹೂಮಾಲೆ' ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.
ನಟಿ ಉಮಾಶ್ರೀ ಅವರು ಚಿತ್ರರಂಗ ಮಾತ್ರವಲ್ಲದೇ ಕೆಲ ತಿಂಗಳ ಹಿಂದೆ ನಡೆದ 'ಶ್ರೀ ರಾಮ ಪಟ್ಟಾಭಿಷೇಕ' ಯಕ್ಷಗಾನದಲ್ಲಿ ಅವರು ಮಂಥರೆಯಾಗಿ ಪಾತ್ರದಲ್ಲಿ ಅಭಿನಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.