ADVERTISEMENT

Varanasi Movie | ರುದ್ರನಾಗಿ ಮಹೇಶ್‌ ಬಾಬು: 2027ರ ಸಂಕ್ರಾಂತಿಗೆ ತೆರೆಗೆ

ಪಿಟಿಐ
Published 16 ನವೆಂಬರ್ 2025, 7:15 IST
Last Updated 16 ನವೆಂಬರ್ 2025, 7:15 IST
   

ಹೈದರಾಬಾದ್: ಖ್ಯಾತ ನಿರ್ದೇಶಕ ಎಸ್‌.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ವಾರಾಣಸಿ‘ 2027ರ ಸಂಕ್ರಾಂತಿಗೆ ತೆರೆ ಕಾಣಲಿದೆ. ರುದ್ರನಾಗಿ ಮಹೇಶ್‌ ಬಾಬು ಕಾಣಿಸಿಕೊಳ್ಳಲಿದ್ದಾರೆ.

ಶನಿವಾರ ಸಂಜೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದರು.‌

ಇದೇ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಲಾಯಿತು. ವಾರಾಣಸಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರ ಚಿತ್ರೀಕರಿಸಲಾಗುತ್ತಿದ್ದು, ತ್ರೇತಾಯುಗಕ್ಕೆ ಸಂಬಂಧಿಸಿದ ಕಥೆಯ ಜತೆಗೆ ರಾಜಮೌಳಿ ವಿಭಿನ್ನವಾಗಿ ಚಿತ್ರೀಕರಿಸಲಾಗುತ್ತಿದೆ.

ADVERTISEMENT

ಮಹೇಶ್ ಬಾಬು ಅವರು ರುದ್ರನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಕ್ತಸಿಕ್ತ ಅಂಗಿಯೊಂದಿಗೆ ನಂದಿ ಪೆಂಡೆಂಟ್ ಧರಿಸಿ ಮಹೇಶ್‌ ಬಾಬು ಗೂಳಿಯ ಮೇಲೆ ಸವಾರಿ ಮಾಡುತ್ತಾ ತ್ರಿಶೂಲವನ್ನು ಹಿಡಿದು ವಾರಾಣಸಿಯಲ್ಲಿ ಕಾಣಿಸಿಕೊಳ್ಳುವ ದೃಶ್ಯಗಳು ಟೀಸರ್‌ನಲ್ಲಿವೆ.

ಅಥಡು, ಪೋಕಿರಿ ಮತ್ತು ದೂಕುಡು ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿಗಳಿಸಿರುವ ಮಹೇಶ್‌ ಬಾಬು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನನ್ನ ಮೇಲೆ ಇಷ್ಟು ಪ್ರೀತಿಯಿಟ್ಟು, ನನ್ನ ಸಿನಿಮಾಗಳ ಯಶಸ್ಸಿಗೆ ಕಾರಣರಾದ ಅಭಿಮಾನಿಗಳಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

ವಾರಾಣಸಿ ನನ್ನ ಕನಸಿನ ಚಿತ್ರ ಎಂದ ಮಹೇಶ್‌ ಬಾಬು, ನನ್ನ ತಂದೆಯವರಿಗೆ ನಾನು ಪೌರಾಣಿಕ ಪಾತ್ರಕ್ಕೆ ಜೀವ ತುಂಬಬೇಕೆಂಬ ಆಸೆ ಇತ್ತು ಎಂದಿದ್ದಾರೆ.

ರಾಜಮೌಳಿ ಅವರ ತಂದೆ ಎಸ್‌ಎಸ್‌ ವಿಜಯೇಂದ್ರ ಪ್ರಸಾದ್ ಅವರ ಕಥೆ ಹೊಂದಿರುವ ಈ ಹೊಸ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಆಫ್ರಿಕಾದ ದಟ್ಟ ಕಾಡುಗಳಲ್ಲಿ ಚಿತ್ರೀಕರಣವಾಗುತ್ತಿದೆ. ಇತ್ತೀಚೆಗೆ ಶೂಟಿಂಗ್‌ನ ವಿಡಿಯೊ ತುಣಕೊಂದು ಸೋರಿಕೆಯಾಗಿದ್ದು ವೈರಲ್ ಆಗಿದೆ.

ಇನ್ನು, ಮೊನ್ನೆಯಷ್ಟೇ ರಾಜಮೌಳಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಾಗಿರುವ ಕುಂಭನ ಪರಿಚಯವನ್ನು ಹಾಗೂ ಮಂದಾಕಿನಿ ಪರಿಚಯ ಮಾಡಿದ್ದರು. ಕುಂಭನಾಗಿ ಪೃಥ್ವಿರಾಜ್ ಸುಕುಮಾರನ್, ಮಂದಾಕಿನಿಯಾಗಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.