ಧ್ರುವ ಸರ್ಜಾ
ಬೆಂಗಳೂರು: ಉತ್ತರಹಳ್ಳಿ–ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೊದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅನೇಕರು ನಿನ್ನೆಯಿಂದ ಅಭಿಮಾನ್ ಸ್ಟುಡಿಯೊ ಬಳಿ ತೆರಳಿ ನೆಚ್ಚಿನ ನಟನ ನೆನೆದು ಕಣ್ಣೀರಿಡುತ್ತಿದ್ದಾರೆ. ಏತನ್ಮಧ್ಯೆ ನಟ ಧ್ರುವ ಸರ್ಜಾ ಅವರು, ಸಾಧಕನಿಗೆ ಈ ಅಪಮಾನ ಸರಿಯಲ್ಲ, ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ ಎಂದು ಸಮಾಧಿ ತೆರವು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಧ್ರುವ ಸರ್ಜಾ ಅವರು, ಸಾಧಕನಿಗೂ ಸಾವಿಲ್ಲ, ಕಲೆಗೂ ಸಾವಿಲ್ಲ, ವಿಷ್ಣು ಅಪ್ಪಾಜಿ ಅಜರಾಮರ ಎಂದು ಹೇಳಿದ್ದಾರೆ.
ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು? ಆದರೂ ಈ ನಾಡಿನಲ್ಲಿ ಇಂಥ ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ. ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ ಕೇಳಲು ಹಲವು ಪ್ರಶ್ನೆಗಳಿವೆ ಎಂದಿದ್ದಾರೆ.
‘ಇದೆಲ್ಲದಕ್ಕೂ ಉತ್ತರ, ನಾನು ಒಬ್ಬ ಕನ್ನಡಿಗನಾಗಿ, ಒಬ್ಬ ಕಲಾವಿದನಾಗಿ ಈ ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ. ಜೈ ಕನ್ನಡಾಂಬೆ. ವಿಷ್ಣು ದಾದಾ ಅಜರಾಮರ ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಅಭಿಮಾನ್ ಸ್ಟುಡಿಯೊದಲ್ಲಿದ್ದ ನಟ ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವು ಮಾಡಿರುವ ಕ್ರಮವನ್ನು ಖಂಡಿಸಿ ವಿಷ್ಣುವರ್ಧನ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಿಡುಗಡೆ ಮಾಡಿದರು. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗಿದೆ.
ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವನ್ನು 2009ರಲ್ಲಿ ಅಭಿಮಾನ್ ಸ್ಟುಡಿಯೊದಲ್ಲಿ ನೆರವೇರಿಸಲಾಗಿತ್ತು. ಬಾಲಣ್ಣ ಅವರ ಕುಟುಂಬದವರು ಕೋರ್ಟ್ ಮೊರೆ ಹೋಗಿದ್ದರಿಂದ ಕೋರ್ಟ್ ಆದೇಶದ ಮೇರೆಗೆ ಸಮಾಧಿ ತೆರವು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.