ಟಾಕ್ಸಿಕ್
ನವದೆಹಲಿ: ಕನ್ನಡದ ನಟ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಈ ಮೂಲಕ ಭಾರತ ಚಿತ್ರರಂಗದಲ್ಲಿ ಎರಡು ಭಾಷೆಗಳಲ್ಲಿ ಒಟ್ಟಿಗೇ ಚಿತ್ರೀಕರಣವಾಗುತ್ತಿರುವ ಮೊದಲ ಚಿತ್ರ ಇದಾಗಿದೆ ಎಂದು ನಿರ್ಮಾಪಕರು ಹೇಳಿದ್ದಾರೆ.
‘ಟಾಕ್ಸಿಕ್–A fairy tale for grown-ups’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. ಗೀತು ಮೋಹನ್‌ದಾಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರದ ಪರಿಕಲ್ಪನೆ, ಬರಹ ಮತ್ತು ಚಿತ್ರೀಕರಣ ನಡೆಯುತ್ತಿರುವುದು ಇದೇ ಮೊದಲು’ ಎಂದು ಚಿತ್ರ ತಂಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಕನ್ನಡ, ಇಂಗ್ಲಿಷ್ ಮಾತ್ರವಲ್ಲದೆ ಟಾಕ್ಸಿಕ್ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಗಳಲ್ಲೂ ಡಬ್ ಮಾಡಲಾಗುತ್ತಿದೆ. ಸಿನಿಮಾ ಬಿಡುಗಡೆಯಾಗುವ ಅಧಿಕೃತ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.
ಯಶ್ ಜನ್ಮದಿನದಂದು ಚಿತ್ರದ ಗ್ಲಿಮ್ಸ್ ಬಿಡುಗಡೆಯಾಗಿದ್ದು, ರೆಟ್ರೋ ಶೈಲಿಯಲ್ಲಿ ಚಿತ್ರದ ದೃಶ್ಯಗಳಿವೆ.
ಈ ಚಿತ್ರದಲ್ಲಿ ಸಾಹಸ ನಿರ್ದೇಶಕರಾಗಿ ಹಾಲಿವುಡ್‌ನ ಜೆ.ಜೆ.ಪೆರ್‍ರಿ ಕಾರ್ಯನಿರ್ವಹಿಸಿದ್ದಾರೆ. ಡಿಎನ್‌ಇಜಿ ಸ್ಟುಡಿಯೊ ಚಿತ್ರದ ವಿಎಫ್‌ಎಕ್ಸ್ ಮಾಡುತ್ತಿದೆ. 2024ರ ಆಗಸ್ಟ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣ ನಡೆಯುತ್ತಿರುವ ಕಾರಣ, ತಯಾರಿ ಹಾಗೂ ಶೂಟಿಂಗ್ ದಿನಗಳು ಹೆಚ್ಚಾಗುತ್ತಿವೆ ಎಂದಿದೆ ಚಿತ್ರತಂಡ. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಮುಂಬೈನಲ್ಲೂ ಚಿತ್ರೀಕರಣ ನಡೆಸುತ್ತಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.