ಯಶ್ ಮತ್ತು ಅನಿರುದ್ಧ ರವಿಚಂದರ್
ಚಿತ್ರಕೃಪೆ: ಇನ್‌ಸ್ಟಾಗ್ರಾಂ
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರಕ್ಕೆ ‘ವೈ ದಿಸ್ ಕೊಲವೇರಿ ಡಿ’ ಖ್ಯಾತಿಯ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಟಾಕ್ಸಿಕ್ ಚಿತ್ರದ ಮೂಲಕ ಅನಿರುದ್ಧ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.
2012ರಲ್ಲಿ ಬಿಡುಗಡೆಯಾದ ಧನುಷ್ ಮತ್ತು ಶ್ರುತಿ ಹಾಸನ್ ನಟನೆಯ ‘3’ ಸಿನಿಮಾಕ್ಕೆ ಅನಿರುದ್ಧ ರವಿಚಂದರ್ ಅವರು ಸಂಗೀತ ಸಂಯೋಜಿಸಿದ್ದರು. ಈ ಚಿತ್ರದಲ್ಲಿ ಧನುಷ್ ಅವರು ಬರೆದು ಹಾಡಿರುವ ‘ವೈ ದಿಸ್ ಕೊಲವೇರಿ ಡಿ’ ಹಾಡು ಭಾಷೆ ಗಡಿಯನ್ನು ಮೀರಿ ವಿಶ್ವದಾದ್ಯಂತ ಜನಪ್ರಿಯವಾಗಿತ್ತು. ಆ ಹಾಡು ಅನಿರುದ್ಧ್ ಅವರಿಗೂ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
ಇದಾದ ನಂತರ ರಜನಿಕಾಂತ್, ಶಿವ ಕಾರ್ತೀಕೇಯನ್, ದಳಪತಿ ವಿಜಯ್, ಅಜಿತ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳಿಗೆ ಅನಿರುದ್ಧ್ ಸಂಗೀತ ಸಂಯೋಜಿಸಿದ್ದಾರೆ.
‘ಡೇವಿಡ್’ ಚಿತ್ರದ ‘ಕನವೆ ಕನವೆ’ ಹಾಡಿಗೆ ಅನಿರುದ್ಧ್ ಸಂಗೀತ ಸಂಯೋಜಿಸಿದುದಲ್ಲದೇ ಅದನ್ನು ಹಾಡಿದ್ದರು. ಎದಿರ್ ನೀಚಲ್, ವಣಕಮ್ ಚೆನ್ನೈ, ಮಾರಿ, ನಾನುಂ ರೌಡಿದಾನ್, ವೇದಾಲಂ ಸೇರಿದಂತೆ ಅನೇಕ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಖ್ಯಾತ ರ‍್ಯಾಪರ್ ಯೊ ಯೊ ಹನಿಸಿಂಗ್ ಅವರ ಜೊತೆಯೂ ಕೆಲಸ ಮಾಡಿದ್ದಾರೆ.
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಯಶ್ ನಟನೆಯ 19 ಚಿತ್ರವಾಗಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.
ಹಾಲಿವುಡ್‌ನ ಜೆ.ಜೆ.ಪೆರ್‍ರಿ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಲಿದ್ದಾರೆ. ಡಿಎನ್‌ಇಜಿ ಸ್ಟುಡಿಯೊ ಚಿತ್ರದ ವಿಎಫ್‌ಎಕ್ಸ್ ಮಾಡುತ್ತಿದೆ. ಚಿತ್ರವು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳ ಭಾಷೆಗಳಿಗೆ ಡಬ್ ಆಗಲಿದೆ.
2026ರ ಮಾರ್ಚ್ 19ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.