
ನಟ ಯಶ್
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಬೇಕಿತ್ತು. ಆದರೆ, ಈಗ ಸಿನಿಮಾ ತಂಡ ಅಚ್ಚರಿಯ ಅಪ್ಡೇಟ್ ಒಂದನ್ನು ಕೊಟ್ಟಿದೆ. ಸಿನಿಮಾ ಬಿಡುಗಡೆಗೆ ಕೆಲವೇ ವಾರಗಳು ಬಾಕಿ ಇರುವಾಗಲೇ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿದೆ.
ಈ ಕುರಿತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಟಾಕ್ಸಿಕ್ ಸಿನಿಮಾ ಬಿಡುಗಡೆ ಹೊಸ ದಿನಾಂಕವನ್ನು ಕೂಡ ಘೋಷಣೆ ಮಾಡಲಾಗಿದೆ. ಜೂನ್ 4ರಂದು ಸಿನಿಮಾ ರಿಲೀಸ್ ಆಗಲಿದೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ಪೋಸ್ಟ್‌ನಲ್ಲಿ ಹೇಳಿದ್ದೇನು?
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ ಎಂಬುದು ನಾವು ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಿದ ಚಲನಚಿತ್ರವಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿರುವ ಸಿನಿಮಾವು ಪ್ರಪಂಚದಾದ್ಯಂತದ ವೀಕ್ಷಕರೊಂದಿಗೆ ಸಂಪರ್ಕ ಸಾಧಿಸುವ ದೃಢವಿಶ್ವಾಸದೊಂದಿಗೆ ನಿರ್ಮಿಸಲಾಗಿದೆ. ಹಲವು ವರ್ಷಗಳ ಶ್ರಮದ ಬಳಿಕ ಮಾರ್ಚ್ 19ರಂದು ನಮ್ಮ ಸಿನಿಮಾವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವು. ವಿಶೇಷವಾಗಿ ಮಿಡ್ಲ್ ಈಸ್ಟ್ನಲ್ಲಿ ಪ್ರಸ್ತುತ ಅನಿಶ್ಚಿತತೆಯು, ಸಾಧ್ಯವಾದಷ್ಟು ವಿಶಾಲವಾದ ಪ್ರೇಕ್ಷಕರನ್ನು ತಲುಪುವ ಮತ್ತು ಸಂಪರ್ಕಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಸೃಷ್ಟಿಸಿದೆ. ಹೀಗಾಗಿ ನಿಮ್ಮನ್ನು ಆ ದಿನ ತಲುಪಲು ಸಾಧ್ಯವಾಗುತ್ತಿಲ್ಲ. ನಮ್ಮ ಸಿನಿಮಾ ಜೂನ್ 4ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.