ADVERTISEMENT

'ಕನ್ನಡಿಗರಿಗೆ ನಾನು ಚಿರಋಣಿ' ಎಂದ 'ಯುವರತ್ನ' ನಿರ್ದೇಶಕ ಸಂತೋಷ್‌ ಆನಂದರಾಮ್‌

ರಾಜ್ಯದಾದ್ಯಂತ ಯುವರತ್ನ ಹೌಸ್‌ಫುಲ್‌

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 11:02 IST
Last Updated 1 ಏಪ್ರಿಲ್ 2021, 11:02 IST
ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೆ ನಿರ್ದೇಶಕ ಸಂತೋಷ್‌ ಆನಂದರಾಮ್‌
ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೆ ನಿರ್ದೇಶಕ ಸಂತೋಷ್‌ ಆನಂದರಾಮ್‌   

ಬೆಂಗಳೂರು: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಚಿತ್ರವು ಮೊದಲ ದಿನ ರಾಜ್ಯದಾದ್ಯಂತ ಹೌಸ್‌ಫುಲ್‌ ಪ್ರದರ್ಶನವನ್ನು ಕಂಡಿದ್ದು, ‘ಕನ್ನಡಿಗರ ಈ ಬೆಂಬಲಕ್ಕೆ ನಾವು ಚಿರಋಣಿ’ ಎಂದು ನಿರ್ದೇಶಕ ಸಂತೋಷ್‌ ಆನಂದರಾಮ್‌ ಹೇಳಿದ್ದಾರೆ.

‘ಜನರು ಮೊದಲ ಪ್ರದರ್ಶನಕ್ಕೇ ಕುಟುಂಬ ಸಮೇತರಾಗಿ ಬಂದು ಚಿತ್ರವನ್ನು ವೀಕ್ಷಿಸಿದ್ದಾರೆ. ಕನ್ನಡಿಗರ ಈ ಬೆಂಬಲಕ್ಕೆ ನಾವು ಚಿರಋಣಿ. ಜನರು ಚಿತ್ರವನ್ನು ನೋಡಿ ಭಾವುಕರಾದರು. ನಾವೂ ಕೂಡಾ ಪ್ರೇಕ್ಷಕರಾಗಿ ಚಿತ್ರ ನೋಡಿದೆವು. ರಾಜಕುಮಾರ ಬಳಿಕ ಸುಮಾರು ನಾಲ್ಕು ವರ್ಷಗಳ ನಂತರ ಈ ಚಿತ್ರವು ಬಂದಿದೆ. ಯುವಜನತೆಗೆ ಹಾಗೂ ಪಾಲಕರಿಗೆ ತುಂಬಾ ಹತ್ತಿರವಾಗುವ ಚಿತ್ರವಿದು. ಶಿಕ್ಷಣ ಸರಿ ಇದ್ದರೆ ಎಲ್ಲವೂ ಸರಿ ಇರುತ್ತದೆ ಎನ್ನುವುದನ್ನು ಸಾರುವ ಚಿತ್ರ ಇದಾಗಿದೆ’ ಎಂದರು.

‘ನಾವು ಚಿತ್ರಕಥೆ ಹೇಳಿದಾಗ, ‘ನಾನು ಕಾಲೇಜಿಗೆ ಹೋಗಿಲ್ಲ. ನಿಮ್ಮ ನಿರ್ದೇಶನದಂತೆ ನಡೆಯುತ್ತೇನೆ’ ಎಂದು ಪುನೀತ್‌ ರಾಜ್‌ಕುಮಾರ್‌ ಅವರು ಹೇಳಿದ್ದರು. ಒಂದೂವರೆ ವರ್ಷ, ಈ ಚಿತ್ರಕ್ಕಾಗಿ ಅವರು ಮೀಸಲಿಟ್ಟಿರುವುದು ನೋಡಿದರೆ ಅವರಿಗೆ ಈ ಚಿತ್ರದ ಮೇಲಿದ್ದ ನಂಬಿಕೆಯನ್ನು ಅದು ತೋರಿಸುತ್ತದೆ. ಇದು ನನ್ನ ಹ್ಯಾಟ್ರಿಕ್‌ ಯಶಸ್ಸು ಎನ್ನುವುದಕ್ಕಿಂತ ಶ್ರಮಕ್ಕೆ ಒಂದು ಬೆಲೆಯನ್ನು ದೇವರು ಹಾಗೂ ಜನರು ನೀಡಿದ್ದಾರೆ. ಶಿವರಾಜ್‌ಕುಮಾರ್‌ ಅವರೂ ಚಿತ್ರದ ಯಶಸ್ಸು ಕಂಡು ಶುಭಹಾರೈಸಿದ್ದಾರೆ’ ಎಂದರು.

ADVERTISEMENT

‘ಮಗನಲ್ಲಿ ತಂದೆಯನ್ನು ನೋಡುವುದು ವಾಡಿಕೆ. ಅದೇ ರೀತಿ ಅಣ್ಣಾವ್ರ ಛಾಪು ಪುನೀತ್‌ ರಾಜ್‌ಕುಮಾರ್‌ ಹಾಗೂ ಶಿವರಾಜ್‌ಕುಮಾರ್‌ ಅವರಲ್ಲಿದೆ. ನಾವು ಅಣ್ಣಾವ್ರನ್ನು ಆ ಮಟ್ಟಿಗೆ ಪ್ರೀತಿಸುತ್ತಿರುವ ಕಾರಣ, ಚಿತ್ರದಲ್ಲಿ ಎಲ್ಲೆಲ್ಲೂ ಅಣ್ಣಾವ್ರು ಕಾಣಿಸುತ್ತಾರೆ. ನನ್ನ ಮುಂದಿನ ಚಿತ್ರವೂ ಸಾಮಾಜಕ್ಕೆ ಸಂದೇಶ ನೀಡುವ ಸಿನಿಮಾ ಆಗಿರಲಿದೆ’ ಎಂದರು.

‘ಪೈರಸಿ ತಡೆಯಲು ಮೂರ್ನಾಲ್ಕು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಖುಷಿಗೆ ಚಿತ್ರದ ತುಣುಕನ್ನು ವಿಡಿಯೊ ಮಾಡುವುದು ಸರಿ. ಆದರೆ ಇಡೀ ಚಿತ್ರವನ್ನು ಚಿತ್ರೀಕರಿಸಬೇಡಿ’ ಎಂದು ಸಂತೋಷ್‌ ಆನಂದರಾಮ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.