ADVERTISEMENT

ಗಾಂಧಿ ಟಾಕ್ಸ್ ಸೇರಿದಂತೆ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳಿವು

Sanjay G M
Published 3 ಮಾರ್ಚ್ 2026, 5:49 IST
Last Updated 3 ಮಾರ್ಚ್ 2026, 5:49 IST
   

ನೆಟ್‌ಫ್ಲಿಕ್ಸ್‌, ಜಿಯೋ ಹಾಟ್‌ಸ್ಟಾರ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ(ಮಾ.1–ಮಾ.7) ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಪ್ರಮುಖ ಸಿನಿಮಾಗಳು

ಸಿನಿಮಾ: ಗಾಂಧಿ ಟಾಕ್ಸ್

ADVERTISEMENT

ಭಾಷೆ: ತಮಿಳು

ಒಟಿಟಿ: ಜೀ5

ಬಿಡುಗಡೆ ದಿನಾಂಕ: ಮಾರ್ಚ್ 6

ವಿಜಯ್ ಸೇತುಪತಿ ನಟನೆಯ 'ಗಾಂಧಿ ಟಾಕ್ಸ್' ಸಿನಿಮಾವು ಮಾರ್ಚ್ 6ರಂದು ಜೀ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಸೇತುಪತಿ, ಅರವಿಂದ್ ಸ್ವಾಮಿ ಮತ್ತು ಅದಿತಿ ರಾವ್ ಹೈದರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದು ಮೂಕಿ ಚಿತ್ರವಾಗಿದೆ. ಹಣದ ಮೌಲ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ಸಂಭಾಷಣೆ ಇಲ್ಲದೆ, ಕೇವಲ ಹಾವಭಾವಗಳ ಮೂಲಕ ಸಿನಿಮಾದಲ್ಲಿ ತೋರಿಸಲಾಗಿದೆ. ಕಿಶೋರ್ ಪಾಂಡುರಂಗ್ ಬೇಲೇಕರ್ ನಿರ್ದೇಶನದ ಈ ಚಿತ್ರಕ್ಕೆ ಎ.ಆರ್. ರೆಹಮಾನ್ ಅವರ ಸಂಗೀತವಿದೆ. ಈ ಸಿನಿಮಾವು ಜ.30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಸಿನಿಮಾ: ಓಂ ಶಾಂತಿ ಶಾಂತಿ ಶಾಂತಿಹಿ

ಭಾಷೆ: ತೆಲುಗು

ಒಟಿಟಿ: ಆಹಾ ವಿಡಿಯೊ

ಬಿಡುಗಡೆ ದಿನಾಂಕ: ಮಾರ್ಚ್ 4

ಟಾಲಿವುಡ್‌ನ ಹಾಸ್ಯ ಚಲನಚಿತ್ರ ‘ಓಂ ಶಾಂತಿ ಶಾಂತಿ ಶಾಂತಿಹಿ’ ಸಿನಿಮಾವು ಮಾರ್ಚ್ 4ರಿಂದ ಆಹಾ ವಿಡಿಯೊ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮಹತ್ವಾಕಾಂಕ್ಷೆಯ ಯುವತಿಯೊಬ್ಬಳು ತನ್ನ ಶಿಕ್ಷಣವನ್ನು ಪೂರ್ಣಗೊಳಿಸುವ ಮುನ್ನವೇ ಹೆತ್ತವರ ಒತ್ತಾಯದಿಂದ ಮದುವೆಯಾಗುತ್ತಾಳೆ. ನಂತರವೂ ತನ್ನದೇ ಗುರುತನ್ನು ರೂಪಿಸುವ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ತಿಳಿ ಹಾಸ್ಯದ ನಿರೂಪಣೆಯ ಮೂಲಕ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಎ.ಆರ್‌. ಸಂಜೀವ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರವು ಜ.30ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ವಿಪಿನ್ ದಾಸ್‌ ನಿರ್ದೇಶಿಸಿದ್ದ ಮಲಯಾಳ ಸಿನಿಮಾ ‘ಜಯ ಜಯ ಜಯ ಹೇ’ ಚಿತ್ರದ ರಿಮೇಕ್ ಆಗಿದ್ದು, ಚಿತ್ರವು 130 ನಿಮಿಷಗಳ ಅವಧಿಯಿದೆ.

ಸಿನಿಮಾ: ಸುಬೇದಾರ್

ಭಾಷೆ: ಹಿಂದಿ

ಒಟಿಟಿ: ಅಮೆಜಾನ್‌ ಪ್ರೈಮ್‌

ಬಿಡುಗಡೆ ದಿನಾಂಕ: ಮಾರ್ಚ್ 5

ಬಾಲಿವುಡ್‌ನ ವಾರ್‌ ಆ್ಯಕ್ಷನ್ ಡ್ರಾಮಾ ‘ಸುಬೇದಾರ್’ ಚಿತ್ರವು ಮಾರ್ಚ್ 5 ಅಮೆಜಾನ್‌ ಪ್ರೈಮ್‌ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಮಧ್ಯಪ್ರದೇಶದ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುವ ನಿವೃತ್ತ ಸೈನಿಕನೊಬ್ಬ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾಗರಿಕ ಜೀವನಕ್ಕೆ ಹೊಂದಿಕೊಳ್ಳಲು ಹೆಣಗಾಡುವ ಘಟನೆಯೇ ಚಿತ್ರದ ಕಥಾವಸ್ತು. ಅನಿಲ್ ಕಪೂರ್, ರಾಧಿಕಾ ಮದನ್, ಖುಷ್ಬು ಸುಂದರ್, ಸೌರಭ್ ಶುಕ್ಲಾ, ಆದಿತ್ಯ ರಾವಲ್, ಮೋನಾ ಸಿಂಗ್, ಫೈಸಲ್ ಮಲಿಕ್ ಮುಂತಾದವರ ತಾರಾಗಣವಿದೆ. ಚಿತ್ರವನ್ನು ಸುರೇಶ್ ತ್ರಿವೇಣಿ ನಿರ್ದೇಶಿಸಿದ್ದಾರೆ. ಚಿತ್ರವು ನೇರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ: ವಿತ್ ಲವ್

ಭಾಷೆ: ತಮಿಳು

ಒಟಿಟಿ: ನೆಟ್‌ಫ್ಲಿಕ್ಸ್‌

ಬಿಡುಗಡೆ ದಿನಾಂಕ: ಮಾರ್ಚ್ 6

ತಮಿಳಿನ ಟೀನೇಜ್ ರೋಮ್ಯಾಟಿಂಕ್ ಕಾಮಿಡಿ ಸಿನಿಮಾ ‘ವಿತ್ ಲವ್’, ಮಾರ್ಚ್ 6 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮದುವೆ ಪ್ರಸ್ತಾಪಗಳನ್ನು ನಿರಂತರವಾಗಿ ತಪ್ಪಿಸಿಕೊಳ್ಳುವ ಹೀರೋ, ಕೊನೆಗೊಂದು ಬಾರಿ ಅನಿರೀಕ್ಷಿತ ಸಂದರ್ಭದಲ್ಲಿ ನಾಯಕಿಯನ್ನು ಭೇಟಿಯಾಗುತ್ತಾನೆ. ನಂತರ ಅವರ ಬಾಲ್ಯದ ಕಡೆಗೆ ಹೊರಳುವ ಕಥೆಯು, ಟೀನೇಜ್‌ ಪ್ರೇಮಕಥೆಯೊಂದನ್ನು ಹೇಳುತ್ತದೆ. ಚಿತ್ರವನ್ನು ಮದನ್ ನಿರ್ದೇಶಿಸಿದ್ದು, ಅಭಿಶನ್ ಜೀವಿಂತ್ ಹಾಗೂ ಅನಸ್ವರ ರಾಜನ್ ಜೋಡಿಯಾಗಿ ನಟಿಸಿದ್ದಾರೆ. ಫೆ.6ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಸಿನಿಮಾವು ₹ 36 ಕೋಟಿ ಬಾಚಿಕೊಂಡಿತ್ತು. ಚಿತ್ರವು 140 ನಿಮಿಷಗಳ ಅವಧಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.