ಪುಷ್ಪ 2–ದಿ ರೂಲ್ ಚಿತ್ರದ ಪೋಸ್ಟರ್
(ಚಿತ್ರ ಕೃಪೆ–@alluarjun)
ಹಿಟ್ ಆದ ಸಿನಿಮಾದ ಸೀಕ್ವೆಲ್‌ಗಳು ಪ್ರೇಕ್ಷಕರನ್ನು ಅನಾಯಾಸವಾಗಿ ಚಿತ್ರಮಂದಿರದತ್ತ ಸೆಳೆಯುತ್ತವೆ. ಇಂತಹ ಸೀಕ್ವೆಲ್‌ಗಳಲ್ಲಿ ಸೆಳೆಯುವ ಕಥೆ ಬಹುಮುಖ್ಯವಾಗುತ್ತದೆ. ಒಂದು ಡ್ರಾಮಾ ಇಲ್ಲದೆ, ಕೇವಲ ನಾಯಕನ ಅದ್ಧೂರಿ ಮೆರವಣಿಗೆಗೆ, ಬ್ರ್ಯಾಂಡ್ ಸೃಷ್ಟಿಗೆ ಸಿನಿಮಾ ಸೀಮಿತವಾದರೆ ಅದು ‘ಪುಷ್ಪ–2’ ಆಗುತ್ತದೆ. ‘ಪುಷ್ಪ–ದಿ ರೈಸ್’ನಲ್ಲಿ ಒಂದೊಳ್ಳೆಯ ಕಮರ್ಷಿಯಲ್ ಡ್ರಾಮಾ ಹೆಣೆದಿದ್ದ ನಿರ್ದೇಶಕ ಸುಕುಮಾರ್ ಎರಡನೇ ಭಾಗದಲ್ಲಿ ‘ರೂಲ್’ ಮಾಡಲು ಹೋಗಿ ಉರುಳಿಬಿದ್ದಿದ್ದಾರೆ.
‘ಪುಷ್ಪ’ ಸಿನಿಮಾದ ಮೊದಲ ಭಾಗದ ಕಥೆ ‘ಕೇಸವ’ ಎಂಬ ಪಾತ್ರದ ಹಿನ್ನೆಲೆ ಧ್ವನಿಯಲ್ಲಿ ಸಾಗಿತ್ತು. ಆ ಹಿನ್ನೆಲೆ ಧ್ವನಿ ಹಾಗೂ ‘ಪುಷ್ಪರಾಜ್’ ಪಾತ್ರ ಕಥೆಗೊಂದು ಗತ್ತು ತಂದು ಸರಾಗವಾಗಿ ಸಾಗಿತ್ತು. ಈ ನಿರೂಪಣೆ, ಭಾಷಾ ಶೈಲಿ ಭಿನ್ನವಾಗಿಯೂ ಇತ್ತು. ಕೂಲಿಯಾಗಿ ಕೆಲಸಕ್ಕೆ ಸೇರಿದ ‘ಪುಷ್ಪ’ ನಂತರದಲ್ಲಿ ‘ಪುಷ್ಪರಾಜ್’ ಆಗಿ ಬೆಳೆದ ಬಗೆಯನ್ನು ‘ಪುಷ್ಪ–ದಿ ರೈಸ್’ ಹೇಳಿತ್ತು. ಆತನ ಆಳ್ವಿಕೆಯನ್ನು ಈ ಭಾಗ ಹೇಳಿದೆ.
ಕಥಾನಾಯಕ ‘ಪುಷ್ಪ’ ರಕ್ತಚಂದನ ಕಳ್ಳ ಸಾಗಣೆಯ ಸಿಂಡಿಕೇಟ್‌ನ ಮುಖ್ಯಸ್ಥನಾಗಿದ್ದಾನೆ. ಕೈಯಲ್ಲಿ ನೂರಾರು ಕೋಟಿಯಿದೆ. ಮುಖ್ಯಮಂತ್ರಿಯನ್ನೇ ಬದಲಾಯಿಸುವಷ್ಟು ಹಣ ಆತನ ಬಳಿಯಿದೆ. ಆತನನ್ನು ಹಿಡಿಯಲು ‘ಬನ್ವರ್ ಸಿಂಗ್ ಶೇಖಾವತ್’ ಹಲವು ಪ್ರಯತ್ನ ಮಾಡಿ ಸೋಲುತ್ತಾನೆ. ಇದು ಎರಡನೇ ಭಾಗದ ಮೊದಲಾರ್ಧ. ಮಧ್ಯಂತರದ ಬಳಿಕ ಮೂರನೇ ಭಾಗಕ್ಕೆ ಬೇಕಾಗುವ ‘ವೀರ ಪ್ರತಾಪ್ ರೆಡ್ಡಿ’ ಪಾತ್ರದ ಕೆತ್ತನೆಗೆ ಸುಕುಮಾರ್ ಹೆಜ್ಜೆ ಇಡುತ್ತಾರೆ. ಈ ಮೂಲಕ ನಟ ಜಗಪತಿ ಬಾಬು ಪ್ರವೇಶವಾಗುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ‘ಇಂಟಿ ಪೇರು’ ಎಂದರೆ ಅಪ್ಪನ ಮನೆತನದ ಹೆಸರು ‘ಪುಷ್ಪ’ನಿಗೆ ಸಿಗುವಷ್ಟರಲ್ಲಿ ಮೂರನೇ ಭಾಗಕ್ಕೆ ಬೇಕಾದ ಘಟನೆಯನ್ನು ನಿರ್ದೇಶಕರು ಸೃಷ್ಟಿಸುತ್ತಾರೆ. ಮೂರೂವರೆ ಗಂಟೆಯ ಈ ಭಾಗದಲ್ಲಿ ಒಂದು ಕಥೆ ಇಡಿಯಾಗಿ ಕಾಣಸಿಗುವುದಿಲ್ಲ. ಬಿಡಿ ಬಿಡಿ ಕಥೆಗಳ ಗುಚ್ಛವಾಗಿ ಚದುರಿ ಹೋಗಿದೆ. ಮೊದಲ ಭಾಗದಲ್ಲಿದ್ದ ಅನುಕ್ರಮಣಿಕೆಯ ಕಥನ ತಂತ್ರ ಈ ಭಾಗದಲ್ಲಿಲ್ಲ.
ಮೊದಲ ಭಾಗದಲ್ಲೇ ‘ಪುಷ್ಪರಾಜ್’ ಎಂಬ ಪಾತ್ರವನ್ನು ಸುಕುಮಾರ್ ಸ್ಟೈಲಿಷ್ ಆಗಿ ಹೆಣೆದಿದ್ದರು. ಅದಕ್ಕೆ ಮತ್ತಷ್ಟು ಅದ್ಧೂರಿತನ ತರುವ ಕೆಲಸ ಈ ಭಾಗದಲ್ಲಾಗಿದೆ. ಕಾಲಿನಮೇಲೆ ಕಾಲು ಹಾಕಿಯೇ ಕೂರುವುದು, ಎಡಭುಜವನ್ನು ಕೊಂಚ ಸೆಟೆಸಿ, ಬಲಕ್ಕೆ ವಾಲಿಕೊಂಡೇ ಬಲಗೈಯನ್ನು ಎತ್ತಿ ಅಲುಗಾಡಿಸುತ್ತಾ ಹೆಜ್ಜೆ ಹಾಕುವುದು ಹೀಗೆ ‘ಪುಷ್ಪರಾಜ್’ ತೆರೆ ಮೇಲೆ ಭರ್ಜರಿಯಾಗಿ ಕಾಣಿಸಿಕೊಂಡಿದ್ದಾನೆ. ಇಷ್ಟು ಭರ್ಜರಿಯಾದ ಸ್ಟೈಲಿಷ್ ನಾಯಕನಿದ್ದರೂ ಶಿಳ್ಳೆ, ಚಪ್ಪಾಳೆಗಿಟ್ಟಿಸುವಂತಹ ಸನ್ನಿವೇಶಗಳು ಬರುವುದು ನಾಲ್ಕೈದು ಕಡೆಯಷ್ಟೇ. ಮೇಕಿಂಗ್ ವಿಚಾರದಲ್ಲಿ ಹತ್ತಾರು ಹೊಸ ಹೆಜ್ಜೆಗಳನ್ನು ಈ ಸಿನಿಮಾವಿಟ್ಟಿದ್ದು, ಇದಕ್ಕೆ ತಕ್ಕ ರೀತಿಯಲ್ಲಿ ವಿಎಫ್‌ಎಕ್ಸ್ ಮೂಡಿಬಂದಿಲ್ಲ. ದೇವಿಶ್ರೀ ಪ್ರಸಾದ್ ಸಂಗೀತ, ಪೀಟರ್ ಹೈನ್–ಡ್ರ್ಯಾಗನ್ ಪ್ರಕಾಶ್ ಸಾಹಸ ನಿರ್ದೇಶನ ಚಿತ್ರಕ್ಕೆ ಹೊಸ ರೂಪ ನೀಡಿದೆ. ಮಿರೊಸ್ಲಾವ್ ಬ್ರೊಜೆಕ್ ಕ್ಯಾಮೆರಾ ಕಣ್ಣು ಹೊಸ ಪ್ರಪಂಚವನ್ನು ತೆರೆಗೆ ತಂದಿದೆ.
‘ಶ್ರೀವಲ್ಲಿ’ ಗರ್ಭಿಣಿ ಎಂದು ತಿಳಿದಾಗ ಹೆಣ್ಣು ಮಗುವಿಗಾಗಿ ‘ಪುಷ್ಪರಾಜ್’ ಗಂಗಮ್ಮ ತಲ್ಲಿ ಜಾತ್ರೆಯಲ್ಲಿ ಹರಕೆ ಹೊತ್ತು ಹಾಕುವ ಹೆಜ್ಜೆ ಮೈ ಜುಂಮೆನಿಸುತ್ತದೆ. ಅಲ್ಲು ಅರ್ಜುನ್ ಡ್ಯಾನ್ಸ್, ಫೈಟಿಂಗ್ ಜೊತೆಗೆ ಭಾವನಾತ್ಮಕ ದೃಶ್ಯಗಳಲ್ಲಿ ಅಂಕ ಗಿಟ್ಟಿಸುತ್ತಾರೆ. ‘ಶ್ರೀವಲ್ಲಿ’ಯಾಗಿ ರಶ್ಮಿಕಾ ಮಂದಣ್ಣ ಅವರಿಗೆ ಈ ಭಾಗದಲ್ಲಿ ಹೆಚ್ಚಿನ ತೆರೆ ಅವಧಿ ದೊರಕಿದ್ದು, ಅದನ್ನು ಸಮರ್ಥವಾಗಿ ಅವರು ಬಳಸಿಕೊಂಡಿದ್ದಾರೆ. ಇವರಿಬ್ಬರ ‘ಕೆಮಿಸ್ಟ್ರಿ’ಯನ್ನು ಈ ಭಾಗದಲ್ಲಿ ಅಂದವಾಗಿ ಕೆತ್ತಲಾಗಿದೆ. ಮೊದಲ ಭಾಗದಲ್ಲಿ ‘ಬನ್ವರ್ ಸಿಂಗ್ ಶೇಖಾವತ್’ ಎಂಬ ರಗಡ್ ಪೊಲೀಸ್ ಪಾತ್ರ ಬರವಣಿಗೆಯಲ್ಲಿ ಎಡವಿ ಎರಡನೇ ಭಾಗದಲ್ಲಿ ಸಂಪೂರ್ಣ ದಾರಿ ತಪ್ಪಿ, ‘ಜೋಕರ್’ ರೀತಿಯಾಗಿದೆ.
ಮೊದಲ ಭಾಗದಲ್ಲಿ ಸಮಂತಾ ಋತ್‌ಪ್ರಭು ಹೆಜ್ಜೆ ಹಾಕಿದ್ದ ‘ಹೂಂ ಅಂಟಾವ..’ ಹಾಡು ಹಿಟ್ ಆಗಿತ್ತು. ಈ ಭಾಗದಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ ಐಟಂ ಹಾಡು ವ್ಯರ್ಥ. 200 ನಿಮಿಷದ ‘ಪುಷ್ಪ–2’ ನೋಡಲು ತಾಳ್ಮೆ ಖಂಡಿತ ಬೇಕು. ‘ಪೀಲಿಂಗ್ಸ್’ ಜಾಸ್ತಿಯಾಗಿರುವುದು ತೆರೆ ಅವಧಿ ಹೆಚ್ಚುವುದಕ್ಕೆ ಒಂದು ಕಾರಣ. ಮೊದಲ ಭಾಗದಲ್ಲಿ ಒಂದೇ ಕೈಯಲ್ಲಿ ಗಡ್ಡವನ್ನು ಸವರಿದ್ದ ಅಲ್ಲು ಅರ್ಜುನ್, ಎರಡನೇ ಭಾಗದಲ್ಲಿ ಎರಡೂ ಕೈಗಳಿಂದ ಗಡ್ಡ ಸವರಿದ್ದಾರೆ. ಮೂರನೇ ಭಾಗದಲ್ಲಿ ಏನಾಗುತ್ತದೋ..? ಅಂದ ಹಾಗೆ ಮುಂದೆ ‘ಪುಷ್ಪ–3: ದಿ ರ್‍ಯಾಂಪೇಜ್’ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.