ADVERTISEMENT

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ವಿಮರ್ಶೆ: ತಾಳ್ಮೆ ಬೇಡುವ ಹೆಣಿಗೆ

ಅಭಿಲಾಷ್ ಪಿ.ಎಸ್‌.
Published 24 ನವೆಂಬರ್ 2023, 11:09 IST
Last Updated 24 ನವೆಂಬರ್ 2023, 11:09 IST
<div class="paragraphs"><p> ಸಿರಿ ರವಿಕುಮಾರ್‌ ಹಾಗೂ&nbsp;ರಾಜ್‌ ಬಿ.ಶೆಟ್ಟಿ</p></div>

ಸಿರಿ ರವಿಕುಮಾರ್‌ ಹಾಗೂ ರಾಜ್‌ ಬಿ.ಶೆಟ್ಟಿ

   

ನಿರ್ಮಾಪಕಿ: ರಮ್ಯಾ 

ಮಾಸ್‌ ಸಿನಿಮಾಗಳ ಭರಾಟೆಯ ನಡುವೆ ತಿಳಿ ನೀರ ನದಿಯಲ್ಲಿ ‘ನಂದಿ ಬಟ್ಟಲು’ ಎಂಬ ನೌಕೆ ಹಿಡಿದು ತಮ್ಮಷ್ಟಕ್ಕೇ ಹುಟ್ಟು ಹಾಕುತ್ತಾ ಸಾಗಿದಂತೆ ರಾಜ್‌ ಈ ಸಿನಿಮಾದಲ್ಲಿ ಭಾಸವಾಗುತ್ತಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಳಿಕ ರಾಜ್‌ ಬರೆದ ಕಥೆಯಿದು. ರಾಜ್‌ಗೆ ಒಂದು ಹೊಸ ತವಕವಿದ್ದಂತೆ ಈ ಸಿನಿಮಾದ ಧಾಟಿಯಿದೆ. ತನ್ನೊಳಗಿರುವ ಒಂದು ಸರಳ, ಅಷ್ಟೇ ಗಾಢವಾದ ಕಥೆಯೊಂದನ್ನು ಹೇಳಬೇಕು ಎನ್ನುವ ತುಡಿತದಿಂದಲೇ ‘ಪ್ರೇರಣಾ’ ಎಂಬ ಪಾತ್ರ ಸೃಷ್ಟಿಸಿ, ಅದಕ್ಕೆ ಜೀವ ತುಂಬಿ ಜೀವಿಸಿದ್ದಾರೆ ರಾಜ್‌. ಹೀಗಾಗಿ ಯಾವುದೇ ಆರ್ಭಟಗಳು ಇಲ್ಲಿಲ್ಲ. ಎಲ್ಲವೂ ಮೌನ; ಗಡಿಯಾರದ ಮುಳ್ಳಿನ ಶಬ್ದವೂ ಕೇಳುವಷ್ಟು.

ADVERTISEMENT

ಮದುವೆಯಾಗಿರುವ ‘ಪ್ರೇರಣಾ’(ಸಿರಿ ರವಿಕುಮಾರ್‌) ‘ಆಸರೆ’ ಎಂಬ ಹಾಸ್‌ಪಿಸ್‌(ಗುಣ ಆಗದಂಥ ಕಾಯಿಲೆ ಇರುವವರು ತಂಗಿರುವ ಕೇಂದ್ರ)ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೌನ್ಸಿಲರ್‌. ಅಲ್ಲಿ ದಾಖಲಾಗಿರುವವರು ಬದುಕುವುದಿಲ್ಲ ಎಂದು ತಿಳಿದಿದ್ದರೂ ಅವರಲ್ಲಿ ಸ್ಥೈರ್ಯ ತುಂಬುವ ಕಾಯಕ ಆಕೆಯದ್ದು. ಒಂದು ರೀತಿ ಅವರನ್ನು ಸಾಯುವುದಕ್ಕೆ ಸಿದ್ಧಪಡಿಸುವ ಕೆಲಸ. ತನ್ನ ಭಾವನೆಗಳನ್ನು ತೋರ್ಪಡಿಸದೆ ಕೃತಕವಾಗಿ ಇರಬೇಕಾದ ಸ್ಥಿತಿ. ಇಂತಹ ಒಂದು ಕೇಂದ್ರಕ್ಕೆ ಕ್ಯಾನ್ಸರ್‌ನ ಕೊನೆಯ ಹಂತ ತಲುಪಿರುವ ‘ಅನಿಕೇತ್‌’(ರಾಜ್‌ ಬಿ.ಶೆಟ್ಟಿ) ಬಂದ ನಂತರ ‘ಪ್ರೇರಣಾ’ಳಲ್ಲಿ ಆಗುವ ಬದಲಾವಣೆಗಳೇ ಚಿತ್ರದ ಮುಂದಿನ ಕಥೆ.

ರೂಪಕಗಳನ್ನು ಬಳಸಿಕೊಂಡು ರಾಜ್‌ ಇಲ್ಲಿ ಹಲವು ಕಥೆಗಳನ್ನು ನೇಯ್ದಿದ್ದಾರೆ. ‘ಸಾವು’, ‘ನಂದಿ ಬಟ್ಟಲು’, ‘ಕೆರೆ’, ‘ಬೀದಿ ನಾಯಿ’, ‘ವಾಷಿಂಗ್‌ ಮಷಿನ್‌’ ಹೀಗೆ ಬಗೆಬಗೆಯ ರೂಪಕಗಳಲ್ಲಿ ಬದುಕನ್ನು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಾ, ಸಾವಿನ ವೇದಿಕೆ ಸೃಷ್ಟಿಸಿದ್ದಾರೆ. ಯುವಜನತೆ ಅರಿತುಕೊಳ್ಳಬೇಕಾದ ವಿಷಯವೊಂದನ್ನೂ ಸೂಕ್ಷ್ಮವಾಗಿ ಹೇಳಿದ್ದಾರೆ. ‘ನಂದಿ ಬಟ್ಟಲು’ ನಾಯಕನ ಇಷ್ಟದ ಹೂವು. ಆತ ಬದುಕನ್ನು ನೋಡುವುದೂ ಈ ಹೂವಿನ ಮೂಲಕವೇ. ಹೀಗಾಗಿ ಇಡೀ ಸಿನಿಮಾ ಸ್ವಚ್ಛ; ಶುಭ್ರ. ಸಂಭಾಷಣೆಯ ಗಾಢತೆಯೇ ಈ ಸಿನಿಮಾದ ಆಸ್ತಿ. ಒಂದು ಪ್ರಬುದ್ಧ ಪಯಣವನ್ನು ಇಲ್ಲಿ ರಾಜ್‌ ಕಟ್ಟಿದ್ದಾರೆ. ಯಾವುದಕ್ಕೂ ಧಾವಂತ ಇಲ್ಲಿಲ್ಲ.

ಸಿರಿ ರವಿಕುಮಾರ್‌ ಇಡೀ ಸಿನಿಮಾದ ಜೀವಾಳ. ಅವರ ಪಾತ್ರವನ್ನು ರಾಜ್‌ ಆ ರೀತಿಯಲ್ಲಿ ಬರೆದಿದ್ದಾರೆ, ಹೆಣೆದಿದ್ದಾರೆ. ನಟನೆಯಲ್ಲಿ ಸಿರಿಗೆ ಪೂರ್ಣ ಅಂಕ. ಭಾವನೆಗಳ ಹಲವು ರೂಪಗಳನ್ನು ಸಿರಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರೇ ಸಿನಿಮಾದ ಹೀರೊ ಎಂದರೆ ತಪ್ಪಲ್ಲ. ರಾಜ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಜೆ.ಪಿ. ತುಮ್ಮಿನಾಡು ಪಳಗುತ್ತಿದ್ದಾರೆ.

ಊಟಿಯನ್ನು ಪ್ರವೀಣ್‌ ಶ್ರೀಯಾನ್‌ ಸೆಳೆಯುವಂತೆ ಸೆರೆಹಿಡಿದಿದ್ದರೆ, ಮಿಥುನ್‌ ಮುಕುಂದನ್‌ ಸಂಗೀತ ಉಕ್ಕುವ ಭಾವನೆಗಳಿಗೆ ಇಂಬುನೀಡಿದೆ. ಈ ಸಿನಿಮಾ ಮನರಂಜನೆಗಾಗಿ ಖಂಡಿತ ಇಲ್ಲ. ಒಂದಿಷ್ಟು ಆಲೋಚನೆಗಳು, ಪ್ರಶ್ನೆಗಳನ್ನು ಕೆದಕುತ್ತ ಸಾಗುವ ಪಯಣವಿದು. ಒಂದರ್ಥದಲ್ಲಿ ರಾಜ್‌ ಚಂದನವನದ ‘ನಂದಿ ಬಟ್ಟಲು’ ಎನ್ನಬಹುದು. ಸಿನಿಮಾ ಕೇವಲ 101 ನಿಮಿಷದ್ದಾದರೂ, ಈ ಅವಧಿಯಲ್ಲೂ ಸೂಕ್ಷ್ಮ ದೃಷ್ಟಿಯ ತಾಳ್ಮೆ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.